ನಂದಿನಿ ವಿಶೇಷ ಹಾಲು ಬಿಡುಗಡೆ
ಕನ್ನಡಪ್ರಭ ವಾರ್ತೆ ಹಾಸನ ಜೂ 2
ಗ್ರಾಹಕರ ಅಭಿರುಚಿಗೆ ತಕ್ಕಂತೆ ಗಟ್ಟಿ ಇರುವ ನಂದಿನಿ ವಿಶೇಷ ಹಾಲುನ್ನು ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ ಎಚ್.ಡಿ.ರೇವಣ್ಣ ಸೋಮವಾರ ಬಿಡುಗಡೆ ಮಾಡಿದರು.
ನಗರದ ಎಚ್ಡಿಸಿಸಿ ಬ್ಯಾಂಕ್ನ ಸಭಾಂಗಣದಲ್ಲಿ ಹಾಲು ಒಕ್ಕೂಟದಿಂದ ನಡೆದ ವಿಶ್ವ ಹಾಲು ದಿನಾಚರಣೆ ಹಾಗೂ 'ನಂದಿನಿ ಸಿಹಿ ಉತ್ಸವ'ದ ನಂದಿನಿ ವಿಶೇಷ ಹಾಲು ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಎಚ್.ಡಿ.ರೇವಣ್ಣ, ನಾನು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಪಶು ಆಹಾರ 7,500 ರು. ಇದ್ದದ್ದು ಪ್ರಸ್ತುತ 22 ಸಾವಿರ ರು. ಆಗಿದೆ. ಆದ್ದರಿಂದ ಕರ್ನಾಟಕ ಹಾಲು ಮಹಾ ಮಂಡಳಿಯು ಪಶು ಆಹಾರದ ದರವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ಹಾಸನ ಸಹಕಾರಿ ಹಾಲು ಒಕ್ಕೂಟವು ಹಿಂದೆ 10 ಸಾವಿರ ಲೀಟರ್ ಹಾಲು ಸಂಗ್ರಸುತ್ತಿತ್ತು, ಪ್ರಸ್ತುತ 6.80 ಲಕ್ಷ ಲೀಟರ್ ಹಾಲು ಉತ್ಪತ್ತಿ ಮಾಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ.25ರಷ್ಟು ಹೆಚ್ಚು ಹಾಲು ಸಂಗ್ರಹಿಸುತ್ತಿದ್ದು, ಗರಿಷ್ಠ ಹಾಲು ಶೇಖರಣೆ 7 ಲಕ್ಷ ಲೀಟರ್ ಮುಟ್ಟುವ ಸಂಭವವಿದ್ದು, ಮುಂಬರುವ ದಿನಗಳಲ್ಲಿ 10 ಲಕ್ಷ ಲೀಟರ್ ತಲುಪುವ ಸಂಭವವಿದೆ. ಪ್ರಾರಂಭದಲ್ಲಿ 25 ಕೋಟಿ ರು.ಗಳ ವಹಿವಾಟು ನಡೆಸುತ್ತಿದ್ದದ್ದು, ಪ್ರಸ್ತುತ 650 ಕೋಟಿ ರು.ಗಳ ವಹಿವಾಟು ನಡೆಯುತ್ತದೆ ಎಂದರು.
ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಶೇಖರಣಾ ದರ ನೀಡುತ್ತಿರುವ ಒಕ್ಕೂಟವೆಂದರೆ ಹಾಸನ ಸಹಕಾರಿ ಹಾಲು ಒಕ್ಕೂಟ. ಮಾರ್ಚ್ನಲ್ಲಿ ಪ್ರತಿ ಕೆಜಿ ಹಾಲಿನ ಕನಿಷ್ಠ ಬೆಲೆ 26.31 ರು. ಗಳಾಗಿದೆ. ಗುಣಮಟ್ಟದ ಹಾಲಿಗೆ ಹೆಚ್ಚಿನ ಪ್ರೋತ್ಸಾಹ, ಉತ್ಪಾದಕರಿಗೆ ನಿರಂತರ ಮಾರುಕಟ್ಟೆ, ಪಶ ವೈದ್ಯಕೀಯ ಕೃತಕ ಗರ್ಭಧಾರಣೆ ಸೇವೆ, ಪಶು ಆಹಾರ-ಮೇವು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹಾಲು ಉತ್ಪಾದಿಸಲು ಸಹಕಾರಿ ಸಂಘಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರಸ್ತಕ ಸಾಲಿನಲ್ಲಿ ಸಂಘಗಳಿಗೆ, ಉತ್ಪಾದಕರಿಗೆ ಸಬ್ಸಿಡಿ, ಅನುದಾನದ ರೂಪದಲ್ಲಿ ಒದಗಿಸಲು ಸುಮಾರು 100 ಲಕ್ಷ ರು.ಗಳ ಆಯವ್ಯಯ ಅಳವಡಿಸಲಾಗಿದೆ ಎಂದ ಅವರು, ಚನ್ನರಾಯಪಟ್ಟಣದಲ್ಲಿ 90 ಕೋಟಿ ರು.ಗಳ ವೆಚ್ಚದಲ್ಲಿ ಹಾಲು ಘಟಕ ನಿರ್ಮಿಸಲಾಗಿದೆ. ಅದನ್ನು ಪ್ರಸ್ತುತ ನಿರ್ಮಿಸಲು ಮುಂದಾದರೇ 200 ಕೋಟಿ ರು.ಗಳ ವೆಚ್ಚ ತಗುಲಲಿದೆ. ಅರಸೀಕೆರೆ ಬಳಿಯಲ್ಲಿ ದಿನವಹಿ 1 ಲಕ್ಷ ಲೀಟರ್ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಹಾಲು ಶೀತಲೀಕರಣ ಕೇಂದ್ರವನ್ನು 10 ಕೋಟಿ ರು.ನಲ್ಲಿ ನಿರ್ಮಿಸಿದ್ದು, ಸದ್ಯದಲ್ಲೇ ಕಾರ್ಯರಂಭವಾಗಲಿದೆ ಎಂದರು.
33ಕೋಟಿ ರು. ವೆಚ್ಚದಲ್ಲಿ ಆಧುನಿಕ ಘಟಕವೊಂದನ್ನು ಪ್ರಾರಂಭಿಸುತ್ತಿದ್ದು, 1 ವರ್ಷದೊಳಗೆ ಅದು ಕಾರ್ಯಾರಂಭ ಮಾಡಲಿದೆ. ನಂತರ ಹಾಲವನ್ನು ಹೊರ ದೇಶಕ್ಕೆ ರವಾನೆ ಮಾಡಲಾಗುತ್ತದೆ ಎಂದು ಹೇಳಿದರು. ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಮಾತನಾಡಿ, ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಯುಎಚ್ಟಿ ಹಾಲಿನ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ 8 ತಿಂಗಳೊಳಗಾಗಿ ಈ ಘಟಕ ಕಾರ್ಯಾರಂಭ ಮಾಡಲಿದೆ. ಇದರ ಸಾಮರ್ಥ್ಯ ಪ್ರತಿನಿತ್ಯ 2 ಲಕ್ಷ ಲೀಟರ್ ಗಳಾಗಿದ್ದು, ಯುಎಚ್ಟಿ ಹಾಲನ್ನು ಉತ್ತರ ಭಾರತದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ತ್ರಿಪುರ, ಮೇಘಾಲಯ ಅಲ್ಲದೆ ಜಮ್ಮು-ಕಾಶ್ಮೀರ ರಾಜ್ಯಗಳಿಗೆ ಮತ್ತು ಭಾರತೀಯ ಸೇನಾ ಪಡೆಗೆ ಹಾಗೂ ಗಡಿ ಭದ್ರತಾ ಪಡೆಗೆ ಸರಬರಾಜು ಮಾಡುವ ವ್ಯವಸ್ಥೆ ರೂಪಿಸಲಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಅತ್ಯಾಧುನಿಕ ಹಾಲು ಸಂಸ್ಕರಣಾ ಹಾಗೂ ಪ್ಯಾಕಿಂಗ್ ಘಟಕವನ್ನು ಅಂದಾಜು 30ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಸ್ಥಳ ಗುರುತಿಸುವ ಯೋಜನೆ ರೂಪಿಸಲಾಗುತ್ತಿದೆ.
ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ಹಾಲಿನ ಪುಡಿಯನ್ನು 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಹಾಸನ ಒಕ್ಕೂಟದಿಂದ ಉತ್ತರ ಕರ್ನಾಟಕದ ಹಾಲು ಒಕ್ಕೂಟಗಳ ಮುಖಾಂತರ 400 ರಿಂದ 450ಟನ್ ಹಾಲಿನ ಪುಡಿಯನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಸಿ.ಎನ್.ಬಾಲಕೃಷ್ಣ, ಉಪ ವಿಭಾಗಾಧಿಕಾರಿ ಶರತ್, ಮೈಸೂರಿನ ಜಂಟಿ ನಿಬಂಧಕಿ ಆಶಾ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಪುಟ್ಟಸ್ವಾಮಿ, ಒಕ್ಕೂಟದ ಉಪ ವ್ಯವಸ್ಥಾಪಕ ಜಯಪ್ರಕಾಶ್ ಹಾಗೂ ಇತರರು ಇದ್ದರು.
ಐದನೇ ಬಾರಿ ಒಲಿದ ಅಧ್ಯಕ್ಷಗಿರಿ
ಹಾಸನ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿ ಶಾಸಕ ಎಚ್.ಡಿ.ರೇವಣ್ಣ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಎಚ್.ಡಿ.ರೇವಣ್ಣ ನಾಮಪತ್ರ ಸಲ್ಲಿಸಿದ್ದು, ಅವರ ವಿರುದ್ಧವಾಗಿ ಯಾರು ನಾಮಪತ್ರ ಸಲ್ಲಿಸದ ಕಾರಣ ರೇವಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಶರತ್ ಅಧಿಕೃತವಾಗಿ ಪ್ರಕಟಿಸಿದರು. ಈ ಮೂಲಕ ರೇವಣ್ಣ ಸತತ 5ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ದರ ನೀಡಿಕೆ: ಹಾಸನದ ಹೆಗ್ಗಳಿಕ್ಕೆ
ಬೆಂಗಳೂರಿನಲ್ಲಿ 24 ರು., ಕೋಲಾರದಲ್ಲಿ 22 ರು., ಮಂಡ್ಯದಲ್ಲಿ 22.5 ರು., ಶಿವಮೊಗ್ಗದಲ್ಲಿ 22.5 ರು.,ದಾರಾವಾಡದಲ್ಲಿ 20 ರು, ಬಳ್ಳಾರಿಯಲ್ಲಿ 26 ರು., ಗುಲ್ಬರ್ಗದಲ್ಲಿ 22.5 ರು.ನಂತೆ ನೀಡಲಾಗುತ್ತಿದೆ. ಹಾಸನದಲ್ಲಿ 26.31 ರು.ಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚಿನ ದರವನ್ನು ನೀಡುವ ಹೆಗ್ಗಳಿಕೆಗೆ ಪಾತ್ರವಾಗಿದೆ.