ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಿಸಿ ಬಿಸಿ ಚರ್ಚೆಗೆ ಆಹಾರವಾದ ಟೆಂಡರ್ ಪ್ರಕ್ರಿಯೆ

Srinivasa Murthy VN
Updated On : 2 Jun 2014, 11:59 am

ಚನ್ನರಾಯಪಟ್ಟಣ: ಪುರಸಭೆಯ 12 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆದು 16 ವರ್ಷಗಳು ಕಳೆದರೂ ಅವರಿಂದ ಮುಂಗಡ ಹಣ ವಸೂಲಿ ಮಾಡದಿರುವುದು ಹಾಗೂ ಅವುಗಳನ್ನು ಮರು ಹರಾಜು ಹಾಕದಿರುವ ವಿಚಾರ ತಾರಕಕ್ಕೇರಿದ ಘಟನೆ ಸೋಮವಾರ ಪಟ್ಟಣದ ಪುರಸಭಾ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸೋಮವಾರ ಪುರಸಭಾಧ್ಯಕ್ಷ ಮಂಜಣ್ಣ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಪಿಸಿದ ವಿರೋಧ ಪಕ್ಷದ ಸದಸ್ಯ ಪ್ರಕಾಶ್ 12ವಾಣಿಜ್ಯ ಮಳಿಗೆಗಳಿಂದ ಸುಮಾರು 30ಲಕ್ಷಕ್ಕೂ ಹೆಚ್ಚು ಮುಂಗಡ ಹಣ ಪಾವತಿಸಬೇಕಾಗಿದ್ದು, ಇವರಿಂದ 6 ಲಕ್ಷ ರು. ಮಾತ್ರ ಹರಾಜಿನ ಸಂದರ್ಭದಲ್ಲಿ ಸಂಗ್ರಹವಾಗಿರುವುದು  ಹೊರತುಪಡಿಸಿದರೆ ಉಳಿಕೆ ಹಣ ಕಟ್ಟಿಸಿಕೊಳ್ಳಲು ಪುರಸಭೆಯ ಕಂದಾಯ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಕಳೆದ 12 ವರ್ಷಗಳಿಂದ ಪುರಸಭೆ ಅಧಿಕಾರಿಗಳು ಬಾಡಿಗೆದಾರರಿಂದ ಮುಂಗಡ ಹಣ ಪಡೆಯದಿರುವುದರಿಂದ, ಅಂಗಡಿಗಳಿಗೆ ಇಂದೇ ಬೀಗ ಹಾಕಿ ಬಾಕಿ ವಸೂಲಿ ಮಾಡಬೇಕೆಂದು ಸದಸ್ಯರು ಪಟ್ಟು ಹಿಡಿದರು. ಅಧ್ಯಕ್ಷ ಮಂಜಣ್ಣ ಉತ್ತರಿಸಿ ಮಂಗಳವಾರ ಮದ್ಯಾಹ್ನದೊಳಗೆ ಅಂಗಡಿ ಮಾಲೀಕರು ಸೂಕ್ತ ದಾಖಲಾತಿ ನೀಡದಿದ್ದರೆ ಅವುಗಳಿಗೆ ಬೀಗ ಹಾಕಲಾಗುವುದು ಎಂದು ಭರವಸೆ ನೀಡಿದರು.
ಚರ್ಚೆ ಮುಂದುವರಿಸಿದ ಸದಸ್ಯ ಮಂಜುನಾಥ್ ಪಟ್ಟಣದಲ್ಲಿ ಹರಾಜಾಗದಿರುವ 42 ಪುರಸಭಾ ವಾಣಿಜ್ಯ ಮಳಿಗೆಗಳನ್ನು ಕೆಲವರು ತಮ್ಮ ತೋಳ್ಬಲ ಬಳಸಿಕೊಂಡು ಕೆಲವರಿಗೆ ಬಾಡಿಗೆ ನೀಡಿದ್ದಾರೆ. ಇದರಿಂದ ಪುರಸಭೆಗೆ ಬಾಡಿಗೆ ಹಾಗೂ ಮುಂಗಡವೂ ಇಲ್ಲದೆ ಹಣ ಕೆಲವರ ಪಾಲಾಗುತ್ತಿದೆ. ಇಂತಹ ಮಳಿಗೆಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಾ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಮಳಿಗೆಗಳನ್ನು ವಶಕ್ಕೆ ತೆಗೆದುಕೊಳ್ಳದಿದ್ದರೆ ಪುರಸಭೆ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಪುರಸಭೆಯಲ್ಲಿ ಯಾವುದೇ ಕ್ರಿಯಾಯೋಜನೆ ರೂಪಿಸಿದರೂ ಅದನ್ನು ಜಾರಿಗೆ ತರುವ ಸಂಧರ್ಭದಲ್ಲಿ ಸಾಮಾನ್ಯ ಸಭೆಯ ಒಪ್ಪಿಗೆ ಪಡೆಯುವುದು ಅನಿವಾರ್ಯ. ಇದರ ಜತೆಗೆ 5ಸಾವಿರ ಮೀರಿದಂತೆ ಅಭಿವೃದ್ಧಿ ಕಾರ್ಯಕ್ರಮ ರೂಪಿಸುವ ಸಂದರ್ಭದಲ್ಲಿ ಟೆಂಡರ್ ಕರೆಯಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಪಟ್ಟಣದ ಓವರ್ ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಸಲುವಾಗಿ 4.96ಲಕ್ಷರು.ಗಳಿಗೆ ಅಂದಾಜಿಸಿ ಯಾವುದೇ ಟೆಂಡರ್ ಕರೆಯದೆ ಕೇವಲ ಕೊಟೇಶನ್ ಮೇಲೆ ಗುತ್ತಿಗೆ ನೀಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸದಸ್ಯ ನವೀನ್ ಒತ್ತಾಯಿಸಿದರು.
5ಲಕ್ಷ ರು. ಗಳಿಗೆ ಟೆಂಡರ್ ಕರೆಯದೆ ಕಾಮಾಗಾರಿ ಮಾಡಿರುವುದರಲ್ಲಿ ಅವ್ಯವಹಾರವಾಗಿದೆ. ಅಧ್ಯಕ್ಷರು ಸಹಿ ಹಾಕಿರುವುದರಿಂದ ಅವರು ಇದರಲ್ಲಿ ಶಾಮಿಲಾಗಿದ್ದು,  ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.  
ಅಧ್ಯಕ್ಷ ಮಂಜಣ್ಣ ಪ್ರತಿಕ್ರಿಯಿಸಿ ತಮ್ಮ ಕಚೇರಿ ಅಧಿಕಾರಿಗಳ ನಂಬಿಕೆಯಿಂದ ದಾಖಲೆಗಳನ್ನು ಪರಿಶೀಲಿಸದೆ ಸಹಿ ಹಾಕಲಾಗಿದೆ. ಇದರಲ್ಲಿ ತಾನು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಈ ಬಗ್ಗೆ ಮುಂದಿನ ಸಭೆಯೊಳಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಪರವಾನಗಿ ಇಲ್ಲ...
ಪಟ್ಟಣದಲ್ಲಿ ಮೂರು ಅಂತಸ್ತುಗಳಿಗೆ ಮಾತ್ರ ಕಟ್ಟಡ ಕಟ್ಟಲು ಪುರಸಭೆಗೆ ಪರವಾನಗಿ ನೀಡಲು ಅವಕಾಶವಿದೆ. ಆದರೆ, ಕಂದಾಯ ವಿಭಾಗದ ಅಧಿಕಾರಿಗಳು ಕಟ್ಟಡ ಮಾಲೀಕರ ಜತೆ ಕೈ ಜೋಡಿಸಿ ಬಹು ಅಂತಸ್ತುಗಳನ್ನು ಕಟ್ಟಲು ಅವಕಾಶ ನೀಡಿದ್ದಾರೆ. ಮುಂದೆ ಯಾವುದಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸದಸ್ಯ ಪ್ರಕಾಶ್ ಪ್ರಶ್ನಿಸಿದರು.

ಸ್ವಾಗತ ಕಮಾನುಗೆ ಒಪ್ಪಿಗೆ...
ಚನ್ನರಾಯಪಟ್ಟಣ ತಾಲೂಕು ಪ್ರವಾಸಿಗರ ಕೇಂದ್ರವಾಗಿರುವ ಹಿನ್ನಲೆಯಲ್ಲಿ ಪ್ರವಾಸಿಗರು ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸ್ವಾಗತ ಕಮಾನು ನಿರ್ಮಿಸಲು ಕಳೆದ 10 ವರ್ಷಗಳಿಂದ ನಡೆಯುತ್ತಿದ್ದ ಚರ್ಚೆಗೆ ಇಂದು ಫಲ ದೊರೆತಿದ್ದು, 24ಲಕ್ಷ ವೆಚ್ಚದಲ್ಲಿ ಬೆಂಗಳೂರು ಮತ್ತು ಮೈಸೂರು ರಸ್ತೆಯಲ್ಲಿ ಸ್ವಾಗತ ಕಮಾನು ಹಾಕಲು ಸಾಮಾನ್ಯ ಸಭೆ ಒಪ್ಪಿಗೆ ನೀಡಿದ್ದು, ಅಗತ್ಯವಿರುವ ಕಡೆಗಳಲ್ಲಿ ಹೈಮಾಸ್ಕ್ ದೀಪಗಳನ್ನು ಅಳವಡಿಸಲು ಒಪ್ಪಿಗೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement