ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಕನ್ನಡಪ್ರಭ ವಾರ್ತೆ ಹಾಸನ ಜೂ. 2
ಬಗರ್ ಹುಕುಂ, ಅರಣ್ಯಭೂಮಿ ಹಕ್ಕಿಗಾಗಿ, ಬಡವರಿಗೆ ಉಚಿತ ಮನೆ ನಿವೇಶನ, ಉದ್ಯೋಕ ಖಾತ್ರಿ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಬಗರ್ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯವರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತ, ಬಿ.ಎಂ.ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ಗೆ ಮನವಿ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ರೈತ ಹಾಗೂ ಕೂಲಿಕಾರರ ವ್ಯವಸಾಯವನ್ನು ಲಾಭದಾಯಕವಾಗುವಂತೆ ಮಾಡುವ ಬದಲು ವ್ಯವಸಾಯವನ್ನೇ ರೈತರ ಕೈನಿಂದ ಕಿತ್ತುಕೊಂಡು ದೊಡ್ಡ ದೊಡ್ಡ ಕಂಪನಿಗಳಿಗೆ ಪರಭಾರೆ ಮಾಡಲು ಮುಂದಾಗುತ್ತಿವೆ. ಚಿಲ್ಲರೆ ವ್ಯಾಪಾರದಲ್ಲಿ ಬಹುರಾಷ್ಟ್ರೀಯ ಬಂಡವಾಳಕ್ಕೆ ಅವಕಾಶ ನೀಡಲು ರಾಜ್ಯಸರ್ಕಾರ ಒಪ್ಪಿರುವುದು ಮತ್ತು ಖಾಸಗಿ ಮಾರುಕಟ್ಟೆಗೆ ಅವಕಾಶ ನೀಡುವ ನೀತಿಯನ್ನು ಜಾರಿಗೆ ತರುತ್ತಿರುವುದು, ರೈತರ ಹಾಗೂ ವ್ಯವಸಾಯ ಸೇವೆ ಸಹಕಾರ ಸಂಘಗಳು ಮತ್ತು ಬ್ಯಾಂಕ್ಗಳ ರೈತರೊಂದಿಗೆ ವ್ಯವಹರಿಸುವ ಅಧಿಕಾರವನ್ನು ಮೊಟಕುಗೊಳಿಸಿ ಹಾಳು ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಗಳನ್ನು ನಂಬಿ ಕೂತರೆ ಜೀವನ ಸಾಗದೆಂದು ಅನೇಕ ದಲಿತರು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿಭಾಗದ ಬಡವರು ಹಳ್ಳ, ನಾಲೆ, ನದಿಗಳ ಬದಿ, ಬೆಟ್ಟದ ಬದಿಯ, ಅರಣ್ಯ, ಗೋಮಾಳ ಅಮೃತ್ ಮಹಲ್ ಕಾವಲು ಮುಂತಾದ ಸರ್ಕಾರಿ ಪ್ರದೇಶವನ್ನು ಸರ್ಕಾರದ ಯಾವುದೇ ನೆರವು ಪಡೆಯದೆ ಇಡೀ ಕುಟುಂಬದ ಸದಸ್ಯರೆಲ್ಲಾ ಸೇರಿ ಅಭಿವೃದ್ಧಿಪಡಿಸಿ ರಾಜ್ಯದ ಉತ್ಪನ್ನ ಹೆಚ್ಚಿಸಿವೆ. ಇಂತಹ 45 ಲಕ್ಷ ಎಕರೆಗೂ ಅಧಿಕ ಪ್ರದೇಶವನ್ನು ಅಭಿವೃದ್ಧಿ ಪಡಿಸಿದ ಸುಮಾರು 20 ಲಕ್ಷ ಕುಟುಂಬಗಳು ರಾಜ್ಯದಲ್ಲಿದ್ದು, ಅವರನ್ನು ಗುರುತಿಸಿ, ಬೆನ್ನು ತಟ್ಟಿ ಆ ಜಮೀನುಗಳಿಗೆ ಹಕ್ಕು ಪತ್ರ ಮತ್ತಿತರೆ ನೆರವು ನೀಡಿ ಬೆಂಬಲಿಸುವ ಬದಲು ಬಿಬಿಎಂಪಿ, ಮಹಾನಗರ ಪಾಲಿಕೆ, ನಗರಸಭೆಯ ವ್ಯಾಪ್ತಿಯ 18 ಕಿಮೀ 05 ಕಿಮೀ ಒಳಗಿವೆ ಎಂದು.
ಇಲ್ಲವೆ ಗೋಮಾಳವೆಂದು ಅರಣ್ಯವೆಂದು ಸಲ್ಲದ ನೆಪ ಹೇಳಿ ನಿರಾಕರಿಸುತ್ತಿರುವುದಲ್ಲದೆ ಈ ಬಡವರನ್ನು ಒಕ್ಕಲೆಬ್ಬಿಸಿ ಜನರು ಅಭಿವೃದ್ಧಿ ಪಡಿಸಿದ ಜಮೀನುಗಳನ್ನು ಭೂ ಬ್ಯಾಂಕ್ಗೆ ಸೇರಿಸಿ, ಕೈಗಾರಿಕೆಗಳಿಗೆ ಅಥವಾ ಕಂಪನಿ ಕೃಷಿಗೆ ನೀಡುವ ಹನ್ನಾರ ನಡೆಸಿವೆ. ಅದಕ್ಕಾಗಿ ಬಡ ಸಾಗುವಳಿದಾರರಿಗೆ ತಹಸೀಲ್ದಾರ್ರಿಂದ ಒಕ್ಕಲೆಬ್ಬಿಸುವ ನೋಟಿಸ್ಗಳನ್ನು ನೀಡಲಾಗಿದೆ ಎಂದು ದೂರಿದರು.
ಕೃಷಿಕೂಲಿಗಾರರು ಮತ್ತು ಬಡ ರೈತರು ಬರಗಾಲದಿಂದಾಗಿ ಇರುವ ಉದ್ಯೋಗ ಖಾತ್ರಿಯು ರೈತರು ಮತ್ತು ಕೂಲಿಕಾರರ ಸ್ನೇಹಿಯಾಗದೆ, ಬಹುತೇಕ ಭ್ರಷ್ಠರಿಗೆ ಖಾತ್ರಿಯಾಗಿರುವುದರಿಂದ ವಲಸೆ ಮುಂದುವರಿಸಿದ್ದಾರೆ. ಸಮಯಕ್ಕೆ ದುಡಿಮೆಯ ಕೂಲಿ ಕೊಡದೆ ಮತ್ತು ಪೂರ್ಣ 100 ದಿನಗಳ ಕೆಲಸ ಕೊಡದೆ ಸತಾಯಿಸುವುದು ಮುಂದುವರಿದಿದೆ. ಉದ್ಯೋಗ ಖಾತ್ರಿ ಸಾಮಾನ್ಯ ಬಡ ಜನವಿಭಾಗಗಳಿಗೆ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಕೇಂದ್ರ ಹಾಗೂ ರಾಜ್ಯಸರ್ಕಾರಗಳು ರೈತರ ಮತ್ತು ಕೂಲಿಕಾರರು ವಿರೋಧಿ ನಿಲವನ್ನು ಕೈಬಿಟ್ಟು ಕೃಷಿಯನ್ನು ಸಂರಕ್ಷಿಸಬೇಕು ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಎಚ್.ಆರ್.ನವೀನ್ಕುಮಾರ್, ಸಿಐಟಿಯು ಧರ್ಮೇಶ್, ನಂಜೇಗೌಡ, ಪ್ರಕಾಶ್, ಕೆ.ಎಲ್.ಶಂಕರ್, ವಿರೂಪಾಕ್ಷ, ಲಿಂಗರಾಜು, ರಂಗಸ್ವಾಮಿ, ಅರವಿಂದ್ ಮತ್ತಿತರರು ಇದ್ದರು.
ಬೇಡಿಕೆಗಳು
-ಸರ್ಕಾರಿ ಜಮೀನಿನಲ್ಲಿ ಸಾಗುವಳಿ ನಿರತ ಬಡವರಿಗೆ ಹಕ್ಕುಪತ್ರ ನೀಡುವಂತಾಗಲು ಫಾರಂ ನಂ.53 ಹಾಕಲು ತಕ್ಷಣದಿಂದಲೇ ಆದೇಶ ಹೊರಡಿಸಬೇಕು ಮತ್ತು ಇಂತಹ ಬಡ ಸಾಗುವಳಿದಾರರನ್ನು ಬೆದರಿಸುವ ಮತ್ತು ಒಕ್ಕಲೆಬ್ಬಿಸುವ ತಹಸೀಲ್ದಾರ್ ನೋಟಿಸ್ಗಳನ್ನು ಕೂಡಲೇ ಹಿಂಪಡೆಯಬೇಕು. ಅದೇ ರೀತಿ ಜಾನುವಾರುಗಳಿಗಾಗಿ ಮೀಸಲಿಟ್ಟ ಜಮೀನು ಗೋಮಾಳವಿಲ್ಲದೆ ಅಭಿವೃದ್ಧಿಯಾಗಿರುವುದರಿಂದ, ಅಂತಹ ಭೂಮಿಯ ಬಡ ಸಾಗುವಳಿದಾರರಿಗೆ ಹಕ್ಕುಪತ್ರ ಸಿಗುವಂತೆ ಭೂಕಂದಾಯ ಕಾಯಿದೆಗೆ ಸೂಕ್ತ ತಿದ್ದುಪಡಿ ಮಾಡಬೇಕು.
-ಬಿಬಿಎಂಪಿ, ನಗರಪಾಲಿಕೆ, ನಗರಸಭೆ ಮುಂತಾದೆಡೆ 05 ರಿಂದ 18 ಕಿಮೀ ವ್ಯಾಪ್ತಿಯ ಒಳಗಿನ ಬಡ ಸಾಗುವಳಿದಾರರ ಹಾಗೂ ಅನಧಿಕೃತ ಬಡ ವಸತಿದಾರರ ಸರ್ಕಾರಿ ಜಮೀನಿಗೆ ಹಕ್ಕು ಪತ್ರ ಸಿಗುವಂತೆ ಸೂಕ್ತ ಮಾರ್ಪಾಡು ತರಬೇಕು. ಅಂತಹ ಜಮೀನುಗಳಿಗೆ ಹಕ್ಕು ಪತ್ರ ನೀಡಲಾಗದೆಂಬ ಆದೇಶವನ್ನು ಕೂಡಲೇ ಹಿಂಪಡಬೇಕು.
-ಅರಣ್ಯ ಭೂಮಿಯಲ್ಲಿ ಸಾಗುವಳಿನಿರತರನ್ನು ಒಕ್ಕಲೆಬ್ಬಿಸುವ ಮತ್ತು ಆ ರೈತರ ಮೇಲೆ ಕೇಸುಗಳನ್ನು ದಾಖಲಿಸಿ ಜೈಲಿಗೆ ಕಳುಹಿಸುವುದು, ಹಿಂಸಿಸುವುದು, ಕೂಡಲೇ ನಿಲ್ಲಿಸಬೇಕು. ಹಾಕಿರುವ ಎಲ್ಲಾ ಮೊಕದ್ದಮೆಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಅಂತಹ ತೊಂದರೆಗೊಳಗಾದ ರೈತರಿಗೆ ಸರಿಯಾದ ಪರಿಹಾರ ಕೊಡಬೇಕು. ಅದೇ ರೀತಿ ಅರಣ್ಯ ಭೂಮಿ ಸಾಗುವಳಿ ನಿರತ ಬಹಳಷ್ಟು ಆದಿವಾಸಿಗಳು ಹಾಗೂ ಅರಣ್ಯ ವಾಸಿಯೇತರ ಬಡವರಿಗೆ ಭೂಮಿಯ ಹಕ್ಕು ಪಡೆಯಲು 70 ವರ್ಷದ ಅನುಭವ ಇರ ಬೇಕೆಂಬುದು ಅಡ್ಡಿಯಾಗಿದ್ದು, ಅವರಿಗೆ ಹಕ್ಕು ಸಿಗುವಂತೆ ಅರಣ್ಯ ಹಕ್ಕು ಕಾಯಿದೆಗೆ ಸೂಕ್ತ ತಿದ್ದುಪಡಿ ತರಲು ಕ್ರಮ ವಹಿಸಬೇಕು.
-ಎಲ್ಲಾ ಬಡವರಿಗೆ ನಿವೇಶನ ಹಾಗೂ ಕನಿಷ್ಠ ಬದುಕನ್ನು ರೂಪಿಸಿಕೊಳ್ಳಲು ಅನುವಾಗುವಂತೆ ಇಎಂಎಸ್ ಮಾದರಿ ಕನಿಷ್ಠ 12 ಸೆಂಟ್ ಅಥವಾ 5 ಗುಂಟೆ ಜಮೀನು ಒದಗಿಸಬೇಕು. ಮನೆ ಕಟ್ಟಿಕೊಳ್ಳಲು ಕನಿಷ್ಠ ಶೇ.75 ಸಹಾಯಧನ ಹಾಗೂ ಬಡ್ಡಿ ರಹಿತ 3 ಲಕ್ಷ ರು.ಗಳ ಸಾಲ ಒದಗಿಸಬೇಕು.
-ಕರ್ನಾಟಕದ 11 ಜಿಲ್ಲೆಗಳ 40 ತಾಲೂಕುಗಳ 1576 ಗ್ರಾಮಗಳ ಜನತೆಗೆ ಆತಂಕವನ್ನು ಉಂಟು ಮಾಡಿರುವ ಮತ್ತು ಅಲ್ಲಿಯ ಬಡ ಸಾಗುವಳಿದಾರರ ಜಮೀನಿಗೆ ಹಕ್ಕು ಪತ್ರ ಪಡೆಯಲು ಅಡ್ಡಿಯಾಗಿರುವ ಮತ್ತು ಪರಿಸರ ಸೂಕ್ಷ್ಮ ಪ್ರದೇಶದ ಪರಿಸರ ಸ್ನೇಹಿ ಅಭಿವೃದ್ಧಿಗೆ ವಿರುದ್ಧವಾಗಿರುವ ದಕ್ಷಿಣ ಮತ್ತು ಮಧ್ಯ ಕರ್ನಾಟಕದ ಬರ ಪೀಡಿತ ಜಿಲ್ಲೆಗಳಿಗೆ ನೀರು ಒದಗಿಸಲು ಅಡ್ಡಿಯಾಗಿರುವ ಪಶ್ಚಿಮ ಘಟ್ಟಗಳ ಕುರಿತ ಕಸ್ತೂರಿ ರಂಗನ್ ವರದಿಯ ಜಾರಿಯನ್ನು ಕೂಡಲೇ ತಡೆಯಬೇಕು.
-ಭೂಸುಧಾರಣೆ ಕಾಯಿದೆಯನ್ನು ಬಡ ಗೇಣಿದಾರರನ್ನು ಸಂರಕ್ಷಿಸಲು ಅನುವಾಗುವಂತೆ ತಿದ್ದುಪಡಿ ಮಾಡಬೇಕು. ಖರ್ಚು ಕಳೆದು ಉಳಿದ ಲಾಭದಲ್ಲಿ ಶೇ.25 ಮಾತ್ರವೇ ಗೇಣಿಯೆಂದು ನಿಗದಿಪಡಿಸಬೇಕು. ಗೇಣಿ ರೈತರನ್ನು ಗಣತಿ ಮಾಡಿ ಗುರುತಿಸಿ ನೋಂದಾಯಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಂಪನಿ ಕೃಷಿಗೆ ಹಾಗೂ ಗುತ್ತಿಗೆ ಕೃಷಿಗೆ ಅನುವಾಗುವಂತೆ ಭೂ ಸುಧಾರಣಾ ಕಾಯಿದೆ 1961 ರ ಕಲಂ 2 ಬೇಸಾಯದ ಪರಿಭಾಷೆಗೆ ಮತ್ತು ಕಲಂ 107ಕ್ಕೆ ಅವರು ಗುತ್ತಿಗೆ ಪಡೆಯಲು ನೆರವಾಗುವಂತೆ ತಿದ್ದುಪಡಿ ತರುವುದನ್ನು ಕೈಬಿಡಬೇಕು.
-ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿನಗಳಿಗೆ ವಿಸ್ತರಿಸಬೇಕು. ದಿನದ ಕೂಲಿಯನ್ನು 300 ರು.ಗೆ ಹೆಚ್ಚಿಸಬೇಕು. ಪ್ರತಿವಾರಕ್ಕೊಮ್ಮೆ ಕನಿಷ್ಠ ಅರ್ಧದಷ್ಟು ಕೂಲಿ ಹಣವನ್ನು ಮತ್ತು 10 ಕೆಜಿ ಅಕ್ಕಿ ಮತ್ತು 5 ಕೆಜಿ ಗೋಧಿ, 1 ಕೆಜಿ ಬೇಳೆ, ಮತ್ತು ಎಣ್ಣೆ ಹಾಗೂ ಸಕ್ಕರೆಯನ್ನು ಸಹಾಯಧನದ ಆಧಾರದಲ್ಲಿ ಕೂಲಿಗಾಗಿ ಕಾಳು ಯೋಜನೆಯಂತೆ ಒದಗಿಸಬೇಕು ಎಂದು ಪಟ್ಟು ಹಿಡಿದರು.