ಮಹಿಳಾ ಧೂಮಪಾನಿಗಳ ಪ್ರಮಾಣ ಹೆಚ್ಚಳ: ಕಳವಳ
ಚನ್ನರಾಯಪಟ್ಟಣ: ಇತ್ತೀಚಿನ ದಿನಗಳಲ್ಲಿ ಧೂಮಪಾನ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದರೆ, ಪುರುಷ ಧೂಮಪಾನಿಗಳ ಪ್ರಮಾಣ ಶೇ.33 ರಿಂದ 23ಕ್ಕೆ ಇಳಿಕೆಯಾಗಿದೆ. ಆದರೆ, ಮಹಿಳೆಯರಲ್ಲಿ ಶೇ.3 ರಿಂದ 3.2ಕ್ಕೆ ಏರಿಕೆಯಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವೆಂಕಣ್ಣ ವಿ. ಹೊಸಮನಿ ಕಳವಳ ವ್ಯಕ್ತಪಡಿಸಿದರು.
ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಪಂಚದಲ್ಲಿ 5.4 ಮಿಲಿಯನ್ ಜನರು ಧೂಮಪಾನದಿಂದ ಸಾವನ್ನಪ್ಪುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಜಾಹೀರಾತು ನೀಡುವುದನ್ನು ಕೂಡ ನಿಷೇಧಿಸಲಾಗಿದೆ ಎಂದರು.
ಪ್ರಥಮ ಬಾರಿ ತಪ್ಪೆಸಗಿದವರಿಗೆ 2 ಸಾವಿರ ರು. ದಂಡ ಅಥವಾ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದೇ ವ್ಯಕ್ತಿ ಪುನಃ ತಪ್ಪೆಸಗಿದರೆ 5 ಸಾವಿರ ದಂಡ ಅಥವಾ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗುತ್ತಾನೆ ಎಂದು ಎಚ್ಚರಿಸಿದರು.
ತಂಬಾಕು ಸೇವೆನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದ ಕೀಲು ಮತ್ತು ಮೂಳೆ ತಜ್ಞ ಡಾ. ಮಹೇಶ್, ತಂಬಾಕು ಮತ್ತು ಧೂಮಪಾನವನ್ನು ಸರ್ಕಾರ ನಿಷೇಧಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇದರಿಂದ ಬರುವಂತಹ ಆದಾಯ ಗಮನಿಸಿದರೆ ತಂಬಾಕು ಹಾಗೂ ಧೂಮಪಾನದ ದುಶ್ಟಟದಿಂದ ಅವರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಕ್ಕೆ ಹೆಚ್ಚು ದಂಡ ತೆರಬೇಕಾಗುತ್ತದೆ.
ಒಬ್ಬ ವ್ಯಕ್ತಿ ಇಂತಹ ವ್ಯಸನದಿಂದ ಕಾಯಿಲೆಗೆ ತುತ್ತಾದರೆ ಅದರ ನಷ್ಟ ಸರ್ಕಾರದ ಮೇಲೆ ಬೀಳುತ್ತದೆ ಎಂದರು. ತಂಬಾಕಿನಲ್ಲಿ ಧೂಮ ಸಹಿತ ಮತ್ತು ಧೂಮ ರಹಿತವೆಂದು ಎರಡು ವಿಭಾಗಗಳಿದ್ದು, ಇವು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದರು. ಧೂಮಪಾನದಲ್ಲಿ ನಿಕೋಟಿನ್, ಟಾರ್ ಹಾಗೂ ಇತರ ರಾಸಾಯನಿಕ ವಸ್ತುಗಳಿದ್ದು ಮನುಷ್ಯನ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
ಆತನ ಅಂಗಾಂಗಗಳಲ್ಲಿ ಕ್ಯಾನ್ಸರ್ ಉಂಟಾಗುತ್ತದೆ. ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಜೊತೆಗೆ ಕೆಲವರಲ್ಲಿ ಗ್ಯಾಂಗ್ರಿನ್ ಕಾಯಿಲೆ ಬರುತ್ತದೆಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಪ್ರಕಾಶ್ ಸ್ವಾಗತಿಸಿದರು. ಅಧಿಕ ಸಿವಿಲ್ ನ್ಯಾಯಾಧೀಶ ರವಿಬಾಬು ಚವಾಣ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಹಲಗಪ್ಪ ಮತ್ತು ಸಹಾಯಕ ಉಪ ನಿರೀಕ್ಷಕ ರಾಜೇಗೌಡ ಮಾತನಾಡಿದರು.