ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಸ್ತೆ ಗುಂಡಿಗಳಿಗೆ ಮಣ್ಣು ಸುರಿದು ಪ್ರತಿಭಟನೆ

Srinivasa Murthy VN
Updated On : 2 Jun 2014, 11:57 am

ಬೇಲೂರು: ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಹನಿಕೆ ಕೀರೆಹಳ್ಳಿ ರಸ್ತೆ  ತೀವ್ರ ಹದಗೆಟ್ಟ  ಕಾರಣ ಸ್ಥಳೀಯ ಶ್ರೀಭುವನೇಶ್ವರಿ ಆಟೊ ಮಾಲಿಕರ ಹಾಗೂ ಚಾಲಕರ ಸಂಘದ ವತಿಯಿಂದ ರಸ್ತೆಯ ಗುಂಡಿಗಳಿಗೆ ಮಣ್ಣು ಹಾಕುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ತಾಲೂಕು ಕೇಂದ್ರದಿಂದ ಸುಮಾರು 12 ಕಿ.ಮೀ. ದೂರದಲ್ಲಿ ಇರುವ ಹನಿಕೆ ಗ್ರಾಮಕ್ಕೆ ಚಿಕ್ಕಮಗಳೂರು  ಹೆದ್ದಾರಿಯಿಂದ ಕೀರೇಹಳ್ಳಿ ಮೂಲಕ ಹಾದು ಹೋಗುವ ರಸ್ತೆಯಲ್ಲಿ ನಿತ್ಯ ಪ್ರಯಾಣಿಸುವವರ ಸ್ಥಿತಿ ಹೇಳತೀರ ದಾಗಿದೆ. ಈ ರಸ್ತೆ 15 ವರ್ಷದಿಂದ ತೀವ್ರ ಹಾಳಾಗಿದ್ದು ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಪತ್ರ ನೀಡಿದರು, ಯಾವ ಪ್ರಯೋಜನ ಕಾಣದ ಸ್ಥಿತಿಯನ್ನು ಕಂಡು ಶ್ರೀ ಭುವನೇಶ್ವರಿ ಅಟೊ ಚಾಲಕರ ಮತ್ತು ಮಾಲಿಕರ ಸಂಘದ ವತಿಯಿಂದ ಸುಮಾರು 50 ಲೋಡ್ ಮಣ್ಣು ಹಾಕುವ ಮೂಲಕ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಹಾಕಿದರು.
ಈ ಸಂದರ್ಭದಲ್ಲಿ ಆಟೊ ಸಂಘದ ಅಧ್ಯಕ್ಷ ಜಗದೀಶ ಮಾತನಾಡಿ,  15 ವರ್ಷದಿಂದ  ರಸ್ತೆ ದುಃಸ್ಥಿತಿ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಖುದ್ದು ಮನವಿ ಪತ್ರ ನೀಡಿದರೂ ಯಾವ ಪ್ರಯೋಜವಾಗಿಲ್ಲ, ಸ್ಥಳೀಯ ಹನಿಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ  ಜನಪ್ರತಿನಿಧಿಗಳು ಈ ಬಗ್ಗೆ ಮೌನ ವಹಿಸಿದ್ದಾರೆ, ತಮಗೆ ಇಷ್ಟ ಬಂದ ರಸ್ತೆ ರಿಪೇರಿ  ಮಾಡಿಕೊಂಡು ಹಗಲು ದರೋಡೆ ಮಾಡುತ್ತಿದ್ದಾರೆ ಎಂದ ಅವರು ಕನಿಷ್ಠ 6 ಕಿ.ಮೀ  ರಸ್ತೆಯನ್ನು ಡಾಂಬರೀಕರಣ ಮಾಡಬೇಕು, ಈ ಬಗ್ಗೆ ಶಾಸಕರು ಆಶ್ವಾಸನೆ ನೀಡಿ ಹೋದವರು ಪುನಃ ಬಂದಿಲ್ಲ ಎಂದರು.
ಸಂಘದ ಲೋಕೇಶ ಮಾತನಾಡಿ ಹನಿಕೆ ಗ್ರಾಮ ಪಂಚಾಯಿತಿಗೆ ದೂರು ನೀಡಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ.  ಗರ್ಭಿಣಿಯರು ಈ ರಸ್ತೆಯಲ್ಲಿ ಪ್ರಯಾಣ ಮಾಡುವುದು ಕಷ್ಟವಾಗಿದೆ. ನಮ್ಮ ಕ್ಷೇತ್ರದ ಶಾಂತಮ್ಮ ಮಹದೇವಯ್ಯನವರೆ ಈ ಹಿಂದೆ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದರು. ಅವರೂ ಕೂಡ ಈ ರಸ್ತೆಯ ಬಗ್ಗೆ ಗಮನಹರಿಸಲಿಲ್ಲ ಎಂದು ಆಳಲು ತೋಡಿಕೊಂಡರು.
ಸಂಘದ ಕಾರ್ಯದರ್ಶಿ ಮಹೇಶ್ ಮಾತನಾಡಿ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು  ಪಂಚಾಯಿತಿ ಸದಸ್ಯರಿಗೆ ಮನವಿ ಮಾಡಿದರೂ ಯಾವ ಉಪಯೋಗವಾಗಿಲ್ಲ. ಶಾಸಕರು ಮಾತ್ರ ಈ ಭಾಗದಲ್ಲಿ ಯಾರು ಓಟು ಹಾಕಿಲ್ಲ ಎಂಬ ಕಾರಣದಿಂದ ನಮ್ಮ ಕ್ಷೇತ್ರಕ್ಕೆ ಕನಿಷ್ಠ ಅನುದಾನವನ್ನೂ ನೀಡಿಲ್ಲ, ಈಗಲೂ ಕ್ರಮ ಕೈಗೊಳ್ಳದಿದ್ದರೆ, ಶಾಸಕರ ಮನೆ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ  ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸುಮಾರು 30 ಆಟೊ ಚಾಲಕರು  ಮತ್ತು ಮಾಲಿಕರು ಹಾಜರಿದ್ದರು,  ಧರ್ಮೇಶ್, ವಿಜಿ ಕುಮಾರ್  ಪ್ರತಿಭಟನೆ ನೇತತ್ವ ವಹಿಸಿದ್ದರು.

ಅಹಲ್ಯಾಬಾಯಿ ಹೋಳ್ಕರ್ ಜನ್ಮದಿನ ಆಚರಣೆ
ಅರಸೀಕೆರೆ: ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ವಿವಿಧೋದ್ದೇಶಗಳ ಸಹಕಾರ ಸಂಘದ ವತಿಯಿಂದ ವೀರವನಿತೆ ಅಹಲ್ಯಾಬಾಯಿ ಹೋಳ್ಕರ್ ಅವರ ಜನ್ಮ ದಿನಾಚರಣೆಯನ್ನ ಇತ್ತೀಚೆಗೆ ಪಟ್ಟಣದಲ್ಲಿ ವಿಶೇಷವಾಗಿ ಆಚರಿಸಲಾಯಿತು. ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ವಿವಿಧೋದ್ದೇಶಗಳ ಸಹಕಾರ ಸಂಘದ ಅಧ್ಯಕ್ಷೆ ಸುಧಾಮಂಜುನಾಥ್ ಹಾಗೂ ಕಾರ್ಯದರ್ಶಿ ದಾಕ್ಷಾಣಿಲೋಕೇಶ್ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸೇರಿದ ಸಂಘದ ನೂರಾರು ಮಹಿಳಾ ಸದಸ್ಯರು ಶೃಂಗರಿಸಿದ ಟ್ರ್ಯಾಕ್ಟರ್ ಮೇಲೆ ಅಹಲ್ಯಾಬಾಯಿ ಹೋಳ್ಕರ್ ಅವರ ಭಾವಚಿತ್ರ ಪ್ರತಿಷ್ಠಾಪಿಸಿ ಪಟ್ಟಣದ ಬಿ.ಎಚ್.ರಸ್ತೆಯಲ್ಲಿ ಮೆರವಣಿಗೆ ಮಾಡಿದರು. ಇದಕ್ಕೂ ಮುನ್ನ ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಿಪಂ.ಉಪಾಧ್ಯಕ್ಷ ಬಿಳಿಚೌಡಯ್ಯ ಅಹಲ್ಯಾಬಾಯಿ ಹೋಳ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಶಿವಲಿಂಗೇಗೌಡ ಮಾತನಾಡಿ ಅಹಲ್ಯಾಬಾಯಿ ಹೋಳ್ಕರ್ ಕಿತ್ತೂರು ರಾಣಿ ಚೆನ್ನಮ್ಮ, ಹೊನಕೆ ಒಬ್ಬವ್ವ ಹೀಗೇ ಅನೇಕ ಮಹಿಳಾ ರತ್ನಗಳು ಭರತ ಖಂಡದಲ್ಲಿ ಜನಿಸಿ ದೇಶ ಹಾಗೂ ದೇಶದ ಜನತೆಯ ಒಳಿತುಗಾಗೀ ತಮ್ಮದೇ ಆದ ರೀತಿ ಹೋರಾಟ ನಡೆಸಿದ್ದರಿಂದಲೇ ಶತ ಶತಮಾನಗಳು ಕಳೆದರು ಇಂದಿಗೂ ಅಜರಾಮರಕರಾಗಿದ್ದಾರೆ ಎಂದು ಹೇಳಿದರು. ಮೆರವಣಿಗೆ ನಂತರ ಪಟ್ಟಣದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಗೆ ತೆರಳಿ ಸದಸ್ಯರು ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement