ರಾತ್ರೋ ರಾತ್ರಿ ಯಶಸ್ಸು ಸಿಗಲ್ಲ, ನಿರಂತರ ಶ್ರಮ ಬೇಕು
ಹಾಸನ : ಎಸ್ಸೆಸ್ಸೆಲ್ಸಿ ನಂತರ ಮಕ್ಕಳು ಒಂದು ರೀತಿಯ ಕನಸು ಕಂಡರೆ, ಪೋಷಕರೂ ಇನ್ನೊಂದು ರೀತಿಯ ಕನಸು ಕಾಣಲು ಆರಂಭಿಸುತ್ತಾರೆ.ಯಾವುದೇ ಯಶಸ್ಸಾಗಲೀ ರಾತ್ರೋರಾತ್ರಿ ಸಿಗುವುದಿಲ್ಲ. ಹೀಗಾಗಿ ಮಕ್ಕಳು ನಿರಂತರವಾಗಿ ಶ್ರಮವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಆಯೋಜಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 115ಕ್ಕಿಂತಲೂ ಹೆಚ್ಚಿ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಂಪನ್ನರಿಗೆ ಅಭಿನಂದನೆ ಸಲ್ಲಿಸುತ್ತಿರುವುದು ನಿಜಕ್ಕೂ ಒಳ್ಳೆಯ ಕೆಲಸ. ಆದರೆ, ವಿದ್ಯಾಭ್ಯಾಸಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರವೇ ಕನ್ನಡ ಕಲಿಯುವ ನಾವುಗಳು, ಕನ್ನಡದ ಸಮಗ್ರತೆಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ನಿರ್ಲಕ್ಷ್ಯತಾಳಿದ್ದೇವೆ. ಅತಿಯಾಗಿ ಓದಿದವನೂ ದಡ್ಡನಾಗಬಹುದು. ಅತಿಯಾಗಿ ದುಡಿದವನೂ ಬಡವನಾಗಬಹುದು. ಆದರೆ, ಏನನ್ನೂ ಓದದೇ ಜಾಣನಾಗಿರುವ ಒಂದೇ ಒಂದು ಉದಾಹರಣೆ ಇಲ್ಲ. ಯಾವುದರಲ್ಲೇ ಆಗಲೀ ನಾವು ಆಸ್ವಾದಿಸುವುದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು, ಸಮಾಜದಲ್ಲಿ ದೂಷಣೆ ಮಾಡುವುದು ಸುಲಭ, ಆದ್ರೆ ಅದೇ ಹೆಚ್ಚಾಗಬಾರದು ಬದಲಿಗೆ ಘಟಿಸುವ ತಪ್ಪಿಗೆ ಪರಿಹಾರ ಕಂಡು ಹಿಡಿಯುವುದು ಪ್ರತಿಯೊಬ್ಬ ಮನುಷ್ಯನ ಜವಾಬ್ದಾರಿ ಎಂದರು.
ಅಭಿನಂದನಾ ನುಡಿಗಳನ್ನಾಡಿದ ಚಿಕ್ಕಮಗಳೂರು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ಮಾತನಾಡಿ, ಕನ್ನಡ ಭಾಷೆ ಎದೆಹಾಲಿದ್ದಂತೆ, ಈ ಭಾಷೆಯನ್ನೇ ನಾವು ಕಳೆದುಕೊಂಡರೆ ನಮ್ಮನ್ನು ನಾವು ಕಳೆದುಕೊಂಡಂತೆ. ಹೀಗಾಗಿ ಕನ್ನಡದ ಬಗ್ಗೆ ಪ್ರತಿಯೊಬ್ಬರು ಪ್ರೀತಿ ಇಟ್ಟುಕೊಳ್ಳಿ ಎಂದು ಹೇಳಿದರು. ಅಮ್ಮಾ ಎಂದರೆ ಆ ಪದ ಅವ್ವ ಮತ್ತು ನಮ್ಮ ನಡುವಿನ ನಂಟನ್ನೇ ತೆರೆದಿಡುತ್ತದೆ. ಅದನ್ನು ಬಿಟ್ಟು ಮಮ್ಮಿ, ಆಂಟಿ- ಅಂಕಲ್ ಪದಬಳಕೆ ಸಂಬಂಧಗಳ ಕೃತಕತೆಯನ್ನು ಕಾಣಿಸುತ್ತದೆ ಎಂದು ಅಭಿಪ್ರಾಯಪಟ್ಟರು. ನಮ್ಮ ಪದ ಬಳಕೆ ಬಿಟ್ಟು ಅದು ಮರೆಯುವಂತೆ ಮಾಡಿದರೆ ಭಾಷೆ ಬರಡಲಾಗಲಿದೆ. ಜಾನಪದ, ವಚನ ಹೀಗೆ ನಾನಾ ಪ್ರಾಕಾರಗಳ ಮೂಲಕ ಆಗರ್ಭ ಶ್ರೀಮಂತವನ್ನು ಹೊಂದಿರುವ ಕನ್ನಡ ಭಾಷೆಗೆ ದೊಡ್ಡ ಹಿನ್ನೆಲೆಯಿದ್ದು, ನೆರೆಯ ರಾಜ್ಯದವರಂತೆ ಭಾಷಾಭಿಮಾನ ಬೆಳೆಸಿಕೊಳ್ಳಿ ಎಂದು ಮನವಿ ಮಾಡಿದರು.
ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಒಳ್ಳೇ ಗುರುವಿದ್ದರೆ ಅಲ್ಲಿ ಒಳ್ಳೆ ಶಿಷ್ಯ ಹುಟ್ಟಿಕೊಳ್ಳುತ್ತಾನೆ. ಎಸ್ಸೆಸ್ಸೆಲ್ಸಿ ನಂತರ ನಾವು ದೊಡ್ಡವರಾದೆವು ಎಂದು ಅನೇಕ ವಿದ್ಯಾರ್ಥಿಗಳು ಭಾವಿಸಿ ಬದಲಾಗುತ್ತಾರೆ. ಆದರೆ, ಅದು ಒಳ್ಳೆಯ ರೀತಿ ಆಗಲಿ. ದಾರಿ ತಪ್ಪಬೇಡಿ ಎಂದು ಕಿವಿ ಮಾತು ಹೇಳಿದರು.
ದೇಶ ಕಟ್ಟುವ ಜವಾಬ್ದಾರಿ ಎಲ್ಲರ ಮೇಲಿದ್ದು, ಸಾಹಿತ್ಯದ ಮೇಲೆ ಎಲ್ಲರೂ ಪ್ರೀತಿ ಬೆಳೆಸಿಕೊಳ್ಳಬೇಕು. ಜ್ಞಾನಸಂಪನ್ನರಾಗಲು ಅವಕಾಶವಿರುವುದು ವಿದ್ಯೆಯಿಂದ. ಅದರ ಜತೆಗೆ ವಿನಯವನ್ನೂ ವಿದ್ಯಾರ್ಥಿಗಳು ಮೈಗೂಡಿಸಿಕೊಂಡರೆ ಎಲ್ಲೆಡೆ ಪೂಜ್ಯಸ್ಥಾನ ಸಿಗಲಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಚ್.ಎಲ್.ಜನಾರ್ದನ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ, ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ.ರಮೇಶ್, ಜಿಲ್ಲಾ ಚಿನ್ನಬೆಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಬಿ.ಎಂ.ಪ್ರಮೋದ್ ಇತರರು ಇದ್ದರು.