ವಿಧಾನಸಭೆ ವಿಸರ್ಜನೆಗೆ ಬಿಜೆಪಿ ಆಗ್ರಹ
ಹಾಸನ: ಸಿಮಿ ಎಂಬ ಉಗ್ರಗಾಮಿ ಸಂಘಟನೆ ಆತ್ಮಾಹುತಿ ಬಾಂಬರ್ ಮೂಲಕ ಶಾಂತಿಯ ನೆಲೆಬೀಡನ್ನು ವಿಧ್ವಂಸಕ ಕೃತ್ಯಕ್ಕೆ ಕಾರಸ್ಥಾನವನ್ನಾಗಿಸುವ ಹುನ್ನಾರ ನಡೆಸಿರುವುದು ರಾಷ್ಟ್ರದ ಮಟ್ಟಿಗೆ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಹಾಗೂ ವಕೀಲ ಎನ್.ಡಿ. ಪ್ರಸಾದ್ ಹೇಳಿದ್ದಾರೆ.
ದೇಶದ್ರೋಹ ಚಟುವಟಿಕೆಯಿಂದ ನಿಷೇಧಕ್ಕೊಳಗಾಗಿದ್ದ ಪಾಕ್ ಪ್ರಚೋದಿತ ಸಿಮಿ ಉಗ್ರಗಾಮಿ ಸಂಘಟನೆ ಆಪರೇಷನ್ ಕೆ.ಕೆ ಎಂಬ ಹೆಸರಿನಲ್ಲಿ ಮತ್ತೆ ತಲೆಯತ್ತಿ ನಿಂತಿರುವುದು ಹಾಗೂ 20 ಜನ ಆತ್ಮಾಹುತಿ ಬಾಂಬರ್ಗಳನ್ನು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಕ್ಕೆ ನೇಮಿಸಿರುವ ಯೋಜನೆಯಿಂದಾಗಿ ಈ ಎರಡೂ ರಾಜ್ಯಗಳಿಗೆ ಗಂಡಾಂತರ ಕಾದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದವರು ಆತಂಕ ವ್ಯಕ್ತ ಪಡಿಸಿದ್ದಾರೆ.
ಹೆಸರಾಂತ ತನಿಖಾ ಸಂಸ್ಥೆಗಳಾದ ಸಿಬಿ, ಎನ್.ಐ.ಎ, ಆರ್.ಐ, ಮುಂತಾದ ಸಂಸ್ಥೆಗಳು ಸಿಮಿ ಉಗ್ರಗಾಮಿ ಸಂಘಟನೆ ಕರ್ನಾಟಕ ಮತ್ತು ಕೇರಳದಲ್ಲಿ ಆತ್ಮಾಹುತಿ ಬಾಂಬರ್ಗಳನ್ನು ಸಿಡಿಸಲು ವ್ಯವಸ್ಥಿತವಾಗಿ ಸಂಘಟಿತರಾಗುತ್ತಿರುವ ಭಯಾನಕ ಸಾಧ್ಯತೆಗಳನ್ನು ಈಗಾಗಲೇ ಕೇಂದ್ರ ಗೃಹ ಇಲಾಖೆಗೆ ರವಾನಿಸಿದ್ದು ಇದರಿಂದಾಗಿ ರಾಜ್ಯದ ಜನತೆ ತಲ್ಲಣಗೊಂಡಿದ್ದಾರೆಂದು ಅವರು ತಿಳಿಸಿದ್ದಾರೆ.
ಮತ್ತೊಂದು ಅಘಾತಕಾರಿ ವಿಷಯವೆಂದರೆ ಉಗ್ರಗಾಮಿಗಳ ಈ ದುಷ್ಕತ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹವೇ ಕಾರಸ್ಥಾನವಾಗಿರುವುದು ರಾಜ್ಯದ ಗೃಹ ಇಲಾಖೆಯ ಕಾರ್ಯಶೈಲಿಗೆ ಕನ್ನಡಿಯಾಗಿದೆ ಅಲ್ಲದೆ ಇತ್ತೀಚೆಗೆ ಐ.ಪಿ.ಎಸ್ ಮಟ್ಟದ ಅಧಿಕಾರಿಗಳ ಹಾದಿ ಬೀದಿ ರಂಪಾಟಗಳು, ಒಬ್ಬರನೊಬ್ಬರು ಮುಗಿಸಬೇಕೆಂಬ ವೃತ್ತಿ ಮಾತ್ಸರ್ಯದ ಅಸಹ್ಯ ಘಟನಾವಳಿಗಳು ಶಿಸ್ತು ಸಂಮಮ ಮತ್ತು ನಡವಳಿಕೆಗೆ ಹೆಸರಾದ ಇಲಾಖೆ ರಾಜ್ಯ ಸರ್ಕಾರದ ಎಡಬಿಡಂಗಿ ನಿಲುವುಗಳಿಂದಾಗಿ ಸಿಬ್ಬಂದಿ ಪ್ರತಿಬಟನಾ ಹಂತಕ್ಕೆ ತಲುಪಿರುವುದು ಗೋಚರವಾಗುತ್ತಿದ್ದರೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತವರ ಸಂಪುಟದ ಸದಸ್ಯರು ಮಹತ್ ಸಾಧನೆಯನ್ನು ಮಾಡಿರುವಹಾಗೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆಡಳಿತ ವೈಪಲ್ಯದಿಂದಾಗಿ ರಾಜ್ಯವನ್ನು ಸರ್ವತೋಮುಖ ಅದೋಗತಿಗೆ ತಳ್ಳಿರುವ ಮುಖ್ಯಮಂತ್ರಿಗಳು ಕೂಡಲೇ ಅವರ ಸ್ಥಾನಕ್ಕೆ ರಾಜಿನಾಮೆ ನೀಡಿ ವಿಧಾನ ಸಭೆಯನ್ನು ವಿಸರ್ಜಿಸಿ ಹೊಸ ಜನಾದೇಶಕ್ಕೆ ಮುಂದಾಗುವ ಮೂಲಕ ಮಾಡಿರುವ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದು ಪ್ರಸಾದ್ ಆಗ್ರಹಿಸಿದ್ದಾರೆ.