ಪಾರ್ಥೇನಿಯಂ ನಿರ್ವಹಣೆ ರೈತರಿಗೆ ಪ್ರಾತ್ಯಕ್ಷಿಕೆ
ಹಾಸನ: ತಾಲೂಕಿನ ಕಂದಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಪಾರ್ಥೇನಿಯಂ ಕಳೆಯ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಕೆವಿಕೆ ವಿಜ್ಞಾನಿಗಳಾದ ಡಾ. ಬಿ.ಎಸ್. ಬಸವರಾಜು, ಡಾ. ಎಸ್. ಚನ್ನಕೇಶವ, ಡಾ. ಜಿ.ಎಸ್. ಕೃಷ್ಣಾರೆಡ್ಡಿ, ಡಾ. ಜಾಧವ್‌ಬಾಲಾಜಿ, ಪಾರ್ಥೇನಿಯಂ ಕಳೆಯ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಪಾರ್ಥೇನಿಯಂ (ಪಾರ್ಥೇನಿಯಂ ಹಿಸ್ಟಿರೋಪೋರಸ್) ಒಂದು ಅತ್ಯಂತ ವಿನಾಶಕಾರಿಯಾದ ಕಳೆ. ಈ ಕಳೆಯು ಸಾಮಾನ್ಯವಾಗಿ ಬಂಜರು ಭೂಮಿಯಲ್ಲಿ ಹಾಗೂ ಇತರೆ ಎಲ್ಲಾ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವರ್ಷಪೂರ್ತಿ ಕಂಡುಬರುವಂತಹದ್ದು.
ಈ ಕಳೆಯನ್ನು ಸಾಮಾನ್ಯವಾಗಿ ನಕ್ಷತ್ರ ಕಳೆ, ಕ್ಯಾರೆಟ್ ಕಳೆ, ಪಾರ್ಥೇನಿಯಂ ಕಳೆ, ಬಿಳಿಟೋಪಿ ಎಂಬ ಅನೇಕ ಹೆಸರುಗಳಿಂದ ಕರೆಯಲ್ಪಡುತ್ತದೆ. ಇದು ಸೂರ್ಯಕಾಂತಿ ಬೆಳೆಯ ಕುಟುಂಬಕ್ಕೆ ಸೇರಿದ ಒಂದು ಸಸ್ಯ ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ ದಕ್ಷಿಣ ಹಾಗೂ ಉತ್ತರ ಕನ್ನಡ, ಉಡುಪಿ ಜಿಲ್ಲೆ, ಸಮುದ್ರ ತೀರ ಪ್ರದೇಶ ಹಾಗೂ ಪೂರ್ವಭಾಗದ ಬೆಟ್ಟಗುಡ್ಡ ಹೊರತುಪಡಿಸಿ ಇತರ ಎಲ್ಲ ಕಡೆ ಇದರ ಪ್ರಾಭಲ್ಯತೆ ಕಾಣಬಹುದಾಗಿದೆ ಎಂದು ಹೇಳಿದರು.
ಕಳೆ ನಿರ್ವಹಣೆ ವಿಧಾನಗಳು: ಕೈಯಿಂದ ಕಳೆ ಕೀಳುವಿಕೆ - ಕಳೆಯನ್ನು ಹೂವಾಗುವ ಮೊದಲು ಕೈಯಿಗೆ ರಕ್ಷಣಾ ಕವಚಗಳನ್ನು ಧರಿಸಿ, ಮೈಯಿಯ ಎಲ್ಲಾ ಭಾಗಗಳನ್ನು ಮುಚ್ಚಿಕೊಂಡು ಗಿಡಗಳನ್ನು ಕಿತ್ತು ತೆಗೆಯುವುದು ಉತ್ತಮ. ಹೂವಾದ ಮೇಲೆ ಕಿತ್ತ ಸಸ್ಯಗಳನ್ನು ಸುಟ್ಟು ಹಾಕಬೇಕು. ಅಥವಾ ಹೂವಾಗುವ ಮುನ್ನ ಬೇರೆ ಕಸ ಕಡ್ಡಿಗಳ ಜೊತೆ ಕಾಂಪೋಸ್ಟ್ ಗೊಬ್ಬರ ಮಾಡಿ ನಂತರ ಚೆನ್ನಾಗಿ ಕೊಳೆತ ಮೇಲೆ ಉಪಯೋಗ ಮಾಡತಕ್ಕದ್ದು ಎಂದು ವಿವರಿಸಿದರು.