ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೀದಿ ನಾಯಿ ಹಾವಳಿ ನಿಯಂತ್ರಣಕ್ಕೆ ಮುಂದಾದ ಜಿಲ್ಲಾಡಳಿತ

Srinivasa Murthy VN
Updated On : 4 Jun 2014, 9:30 am

-ಪಿ.ರವಿಕುಮಾರ್
ಹಾಸನ: ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಸಜ್ಜಾಗಿದ್ದು, ಮುಂದಿನ ವಾರದಿಂದ ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆ ಪ್ರಾರಂಭವಾಗಲಿದೆ.
ಬೀದಿನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆ ಹಾಗೂ ಪ್ರತಿ ನಾಯಿಗೆ ರೇಬಿಸ್ ನಿರೋಧಕ ಚುಚ್ಚು ಮದ್ದು ನೀಡುವುದಕ್ಕೆ ಜಿಲ್ಲಾಡಳಿತ ಬೆಂಗಳೂರು ಮೂಲದ ಸರ್ವೋದಯ ಸೇವಾ ಬಾವಿ ಸಂಸ್ಥೆಗೆ ಟೆಂಡರ್  ನೀಡಿದೆ. ಈ ಸಂಸ್ಥೆಯು ಮುಂದಿನ ವಾರದಿಂದ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಪ್ರಾರಂಭಿಸಲಿದೆ. ಇದರಿಂದ ನಾಯಿಗಳ ಹಾವಳಿಯಿಂದ ತತ್ತರಿಸಿದ್ದ ನಗರದ ಜನತೆ ಇನ್ನು ಮುಂದೆ ಕೊಂಚ ನಿರಾಳರಾಗಬಹುದಾಗಿದೆ.
ನಗರದಲ್ಲಿ ಬೀದಿನಾಯಿಗಳ ಸಂತತಿ ಹೆಚ್ಚಾಗಿರುವುದರಿಂದ ಬೀದಿಗಳಲ್ಲಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಸಾರ್ವಜನಿಕರು ನಾಯಿಗಳ ಹಾವಳಿಗೆ ಬೇಸತ್ತು ಹೋಗಿದ್ದರು. ಬೀದಿನಾಯಿಗಳ ಕಡಿತಕ್ಕೆ ತುತ್ತಾಗಿ ಸಂಕಷ್ಟ ಎದರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಸಣ್ಣ ಪುಟ್ಟ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿದ್ದಾಗ ನಾಯಿಗಳ ಕ್ರೌರ್ಯಕ್ಕೆ ತುತ್ತಾಗಿದ್ದರು.
ಹಾಸನ ನಗರದಲ್ಲಿ ಸುಮಾರು 5 ಸಾವಿರದಷ್ಟು ಬೀದಿನಾಯಿಗಳಿದ್ದು, ಈ ಪೈಕಿ 2666 ಬೀದಿನಾಯಿಗಳಿಗೆ ಸಂತಾನ ಹರಣ ಯೋಜನೆಯಡಿ ಕಿವಿಗಳನ್ನು ಕತ್ತರಿಸಲಾಗಿದೆ. 2009-10ರಲ್ಲಿ 3 ಸಾವಿರ ನಾಯಿಗಳು ಇದ್ದದ್ದು, ಪ್ರಸ್ತುತ ಐದು ಸಾವರ ಗಡಿ  ದಾಟಿವೆ. ಇದರಿಂದ ನಗರದ ಬೀದಿಗಳಲ್ಲಿ ನಾಯಿಗಳ ಹಿಂಡು ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾವೆ.
ಎಚ್ಚೆತ್ತ ಜಿಲ್ಲಾಡಳಿತ ನಗರಸಭೆಯ ಮೂಲಕ ಬೆಂಗಳೂರು ಮೂಲದ ಸರ್ವೋದಯ ಸೇವಾ ಬಾವಿ ಸಂಸ್ಥೆಗೆ ಟೆಂಡರ್ ನೀಡಿದೆ. ಪ್ರತಿ ಒಂದು ಗಂಡು ನಾಯಿಗೆ 925 ರು. ಹಾಗೂ ಪ್ರತಿ ಒಂದು ಹೆಣ್ಣು ನಾಯಿಗೆ 950 ರು., ಜೊತೆಗೆ ಈಗಾಗಲೇ ಶಸ್ತ್ರ ಚಿಕಿತ್ಸೆ ಮಾಡಲಾಗಿರುವ ಪ್ರತಿ ನಾಯಿಗೆ ರೇಬಿಸ್ ನಿರೋಧಕ ಚುಚ್ಚುಮದ್ದು ನೀಡುವುದಕ್ಕೆ 120 ರು. ಹಾಗೂ ನಾಯಿ ಹಿಡಿಯುವುದು ಸೇರಿದಂತೆ ಇತರೆಗಳಿಗೆ 100 ರು.ನಂತೆ ದರ ನಿಗದಿ ಪಡಿಸಿದೆ.
ಹಿಡಿದಂತಹ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿದ ನಂತರ ಅವುಗಳನ್ನು ನೋಡಿಕೊಂಡು ವೈದ್ಯಕೀಯ ಹಾರೈಕೆ ನಂತರ ಪುನಃ ಆದೇ ಸ್ಥಳಕ್ಕೆ ನಾಯಿಗಳನ್ನು ಬಿಡಲಾಗುತ್ತದೆ. ಇದಕ್ಕಾಗಿ ನಗರದ ಸಂತೇಪೇಟೆ ಮತ್ತು ಪಂಪ್‌ಹೌಸ್‌ನ  ಜಾಗದಲ್ಲಿ ಚಿಕಿತ್ಸೆ ನೀಡಲು ಸ್ಥಳ ಗುರುತಿಸಲಾಗಿದೆ. ನಾಯಿಗಳ ಆರೈಕೆ, ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದಂತೆ ತಗಲುವ ವೆಚ್ಚವನ್ನು ನಗರಸಭಾ ನಿಧಿಯಿಂದ ಭರಿಸಲಾಗುತ್ತದೆ.

ಈ ಹಿಂದೆ ಸಂತಾನ ಹರಣ ಯೋಜನೆಯಡಿ ನಾಯಿಗಳಿಗೆ ಕಿವಿಯನ್ನು ಕತ್ತರಿಸಲಾಗುತ್ತಿತ್ತು. ಆದರೂ ಕೆಲವೊಂದು ಸಂತಾನ ಹರಣ ಆಗದ ನಾಯಿಗಳು ಬೇರೆಡೆಯಿಂದ ನಗರಕ್ಕೆ ಬಂದು ಸಂತಾನ ಹೆಚ್ಚಿಸುತ್ತಿದ್ದವು. ಈಗ ಸಂಪೂರ್ಣವಾಗಿ ಬೀದಿನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ನಡೆಸುವುದರಿಂದ ನಾಯಿಗಳ ಹಾವಳಿ ಕಡಿಮೆ ಯಾಗುವುದೇ ಎಂಬುದನ್ನು ಕಾದು ನಾಡಬೇಕಾಗಿದೆ.
-ಕೃಷ್ಣಮೂರ್ತಿ, ನಗರಸಭೆ ಆಯುಕ್ತ

ಇತ್ತೀಚೆಗೆ ಬೀದಿ ನಾಯಿಗಳ ಹಾವಳಿಯಿಂದ ನಗರದಲ್ಲಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ನಾಯಿಗಳ ಹಾವಳಿಯನ್ನು ನಿಯಂತ್ರಣಕ್ಕೆ ತರಲು ಬೆಂಗಳೂರಿನ ಸಂಸ್ಥೆಗೆ ಟೆಂಡರ್ ನೀಡಿದ್ದು, ಅವರು ನಾಯಿಗಳನ್ನು ಹಿಡಿದು ಸಂತಾನಹರಣ ಹಾಗೂ ರೇಬಿಸ್ ನಿರೋಧಕ ಚುಚ್ಚುಮದ್ದನ್ನು ನೀಡಿ ನಾಯಿಗಳ ಆರೋಗ್ಯವನ್ನು ಆರೈಕೆ ಮಾಡಿ ನಂತರ ಅದನ್ನು ಬಿಡಲಿದ್ದಾರೆ. ಮುಂದಿನ ವಾರದಿಂದ ಅವರು ಕಾರ್ಯಾಚರಣೆಯನ್ನು ಪ್ರಾರಂಭಿಸಲಿದ್ದಾರೆ.
-ಕುಮಾರ್, ನಗರದ ನಿವಾಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement