ರಾಮನಾಥಪುರ ಬಸ್ ಡಿಪೋ ಸಮಸ್ಯೆಗಳ ಆಗರ
ಕ.ಪ್ರ.ವಾರ್ತೆ, ರಾಮನಾಥಪುರ, ಜೂನ್ 4
ಅರಕಲಗೂಡು ತಾಲೂಕಿನ ರಾಮನಾಥಪುರದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಸಾಕಷ್ಟು ಹದಗೆಟ್ಟಿದ್ದು, ಸಮಸ್ಯೆಗಳ ಆಗರ ಆಗಿದೆ. ಇಲ್ಲಿನ ಡಿಪೋದಲ್ಲಿ ಒಟ್ಟು 94 ಬಸ್‌ಗಳಿದ್ದು, ಅದರಲ್ಲಿ ಸುಮಾರು 60ರಿಂದ 70 ಬಸ್‌ಗಳು ಬರಿ ಸ್ಕ್ರಾಪ್ ಗಾಡಿಗಳೇ ಆಗಿವೆ. ಇಂತಹ ಬಸ್‌ಗಳು ದಿನನಿತ್ಯ ಸಂಚಾರಕ್ಕೆ ಹೊರಗೆ ಹೋದರಂತೂ ಅಲ್ಲಲ್ಲಿ ಕೆಟ್ಟುನಿಲ್ಲುವ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ.
ಇಲ್ಲಿನ ಡಿಪೋದಲ್ಲಿ ಸುಮಾರು 300ರಿಂದ 350 ಡ್ರೈವರ್ ಕಂಡಕ್ಟರ್‌ಗಳು ಹಾಗೂ 40 ಮೆಕ್ಯಾನಿಕ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಅಬ್ಬಬ್ಬಾ ಎಂದರೆ ಸುಮಾರು 20 ಬಸ್‌ಗಳು ತಕ್ಕಮಟ್ಟಿಗೆ ಇವೆ.
ಕೆ.ಎಸ್.ಆರ್.ಟಿ.ಸಿ. ಇಲಾಖೆ ಆರಂಭದ ಕಾಲದಿಂದಲೂ ಸಂಸ್ಥೆಗೆ ಸೇರಿದ ಬಸ್‌ಗಳ ಪೈಕಿ ಒಂದು ನಿಯಮವಿತ್ತು. ಟಾಟಾ ಬಸ್‌ಗಳು 8 ಲಕ್ಷ ಓಡಿದರೆ ಮತ್ತು ಲೈಲ್ಯಾಂಡ್ ಬಸ್‌ಗಳು 9 ಲಕ್ಷ ಓಡಿದರೆ ಇಂತಹವುಗಳನ್ನು ಸ್ಕ್ರಾಪ್ ಗಾಡಿಗಳ ಪಟ್ಟಿಗೆ ಸೇರಿಸುವುದರೊಂದಿಗೆ ಈ ಬಸ್‌ಗಳನ್ನು ಸಂಚಾರಕ್ಕೆ ಯೋಗ್ಯವಲ್ಲ ಎಂದು ಬಳಸುತ್ತಿರಲಿಲ್ಲ. ಆದರೆ, ಈ ರಾಮನಾಥಪುರದ ಡಿಪೋದಲ್ಲಿ ಇರುವ ಬಹುತೇಕ ಬಸ್‌ಗಳಂತೂ ಕೆಎ 15, ಕೆಎ 16, ಕೆಎ 17ರ ಸೀರಿಯಲ್ ಗಾಡಿಗಳ ನಿಗದಿತ ಕಿ.ಮೀ. 8ರಿಂದ 9 ಲಕ್ಷ ಮುಗಿದು ಹೋಗಿವೆಯಾದರೂ ಸಂಚಾರಕ್ಕೆ ಬಳಸುತ್ತಾ ಅದರಲ್ಲೂ ಬೆಂಗಳೂರು, ಮೈಸೂರು, ಊಟಿಯಂತಹ ದೂರದ ಪ್ರಯಾಣಗಳಿಗೆ ಈ ರೀತಿ ವೇಗದೂತ ವಾಹನಗಳನ್ನು ಕಳುಹಿಸುತ್ತಿರುವುದು ನಿಜಕ್ಕೂ ಪ್ರಯಾಣಿಕರ ದುರದೃಷ್ಟಕರ.
ಇಂತಹ ಬಸ್‌ಗಳು ಸಂಚಾರ ಮಾರ್ಗದಲ್ಲಿ ತೊಡಗಿರುವಾಗ ಹಗಲು ಅಥವಾ ರಾತ್ರಿ ವೇಳೆ ಕೆಟ್ಟು ನಿಲ್ಲುವುದರಿಂದ ಪ್ರಯಾಣಿಕರ ಪರದಾಟವಂತೂ ಹೇಳತೀರದು.
ಇಲ್ಲಿನ ಡಿಪೋಗೆ ಬರುವ ಆದಾಯಕ್ಕಿಂತಲೂ ಗಾಡಿಗಳ ರಿಪೇರಿಯ ಖರ್ಚೇ ಜಾಸ್ತಿ. 1997 ಮಾರ್ಚ್ 28ರಂದು ಆರಂಭವಾದ ರಾಮನಾಥಪುರ ಡಿಪೋ ಅಂದಿನ ಶಾಸಕರಾದ ಎ.ಟಿ. ರಾಮಸ್ವಾಮಿಯವರ ಹೋರಾಟದ ಫಲ ಎಂದರೆ ತಪ್ಪಾಗಲಾರದು.
ಉತ್ತಮ ಆದಾಯ ಹರಿದು ಬರುತ್ತಿತ್ತು: ಅರಕಲಗೂಡು ತಾಲೂಕಿಗೆ ಮತ್ತೊಂದು ಡಿಪೋ ಅವಶ್ಯವಿರುವುದನ್ನು ಗಮನಿಸಿ ಅರಕಲಗೂಡಿಗೆ ಮತ್ತೊಂದು ಡಿಪೋ ತಂದ ಹೆಗ್ಗಳಿಕೆ ಶಾಸಕ ಎ.ಮಂಜು ಅವರದು. ತಾಲೂಕಿನಲ್ಲಿ 2 ಡಿಪೊಗಳಿದ್ದರೂ ಉತ್ತಮ ಆದಾಯ ಬರುತ್ತಿತ್ತು. ಜತೆಗೆ ಸಾರ್ವಜನಿಕರಿಗೆ ಅನುಕೂಲವೂ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಾಲೂಕಿನ ಕಳಪೆ ರಸ್ತೆ ಒಂದೆಡೆಯಾದರೆ ಈ ರೀತಿಯ ಸ್ಕ್ರಾಪ್ ಗಾಡಿಗಳನ್ನು ಡಿಪೋದಲ್ಲಿ ಹೆಚ್ಚು ಬಳಸುತ್ತಿರುವುದರಿಂದ ಮುಂದೊಂದು ದಿನ ರಾಮನಾಥಪುರ ಡಿಪೋ ಮುಚ್ಚಿದರೂ ಆಶ್ಚರ್ಯವೇನಿಲ್ಲ. ಒಂದೇ ತಾಲೂನಲ್ಲಿ 2 ಡಿಪೊಗಳಿದ್ದು, ಅರಕಲಗೂಡಿನ ಡಿಪೋ ಬಸ್‌ಗಳು ಉತ್ತಮವಾಗಿದ್ದು, ಆದರೆ ರಾಮನಾಥಪುರ ಡಿಪೋ ಬಗ್ಗೆ ಕಡೆಗಣಿಸುತ್ತಿರುವುದಾದರೂ ಏಕೆ ತಾಲೂಕಿಗೆ 2 ಕಣ್ಣುಗಳಂತಿರುವ ಡಿಪೋಗಳ ಪೈಕಿ ಸರ್ಕಾರ ಮತ್ತು ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೊಳಗಾಗಿ ರಾಮನಾಥಪುರ ಡಿಪೋ ಎಂಬ ಕಣ್ಣು ಎಲ್ಲಿ ಕಳೆದುಕೊಳ್ಳಬಹುದೋ ಎಂದು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
ಕರ್ತವ್ಯದಲ್ಲಿ ಹಿರಿಯ ಮತ್ತು ಕಿರಿಯ ಎಂಬ ಭೇದ ಭಾವವಿಲ್ಲದೆ ಅಧಿಕಾರಿಗಳು ತಮ್ಮ ದರ್ಪ ದೌರ್ಜನ್ಯಗಳನ್ನು ಬದಿಗೊತ್ತಿ ಮೊದಲು ಮಾನವೀಯತೆಗೆ ಬೆಲೆ ತೆತ್ತು ಸಿಬ್ಬಂದಿಗಳ ಜೊತೆ ಸೌಜನ್ಯವಾಗಿ ವರ್ತಿಸುತ್ತಾ ಅವರು ಮುಂದುವರೆಯಲು ಹಾಗೂ ಸಂಸ್ಥೆಗೆ ಒಳ್ಳೆಯ ಹೆಸರು ಕೀರ್ತಿ ತರಲು ಮುಂದಾದರೂ ಸಹಕಾರ ನೀಡುವರೆ. ಈ ಡಿಪೋ ಸಮಸ್ಯೆ ಬಗೆಹರಿಯುವುದೆ ಕಾದು ನೋಡಬೇಕು.
ಹೇಳಿಕೆ
ಕಳೆದ ಬಾರಿ ಡಿಪೋನ ಆದಾಯ 2 ಕೋಟಿ 53 ಲಕ್ಷ ಆಗಿದ್ದು, ಈ ಬಾರಿ ಡಿಪೋನ ಆದಾಯ 3 ಕೋಟಿ 3 ಸಾವಿರದ ನಾನ್ನೂರ ಮುವ್ವತ್ತು ರೂಪಾಯಿ ಆದರೆ, ಉತ್ತಮ ಗಾಡಿಗಳು ಡಿಪೋಗೆ ಬಂದಲ್ಲಿ ಇನ್ನಷ್ಟು ಆದಾಯ ಹೆಚ್ಚುವ ನಿರೀಕ್ಷೆಯಿದೆ. ಈ ಕುರಿತು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ.
-ರಘು , ಡಿಪೋ ಮ್ಯಾನೇಜರ್