ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೈತ ಸಂಜೀವಿನಿ ಅಪಘಾತ ವಿಮೆ ಪರಿಹಾರದ ಚೆಕ್ ವಿತರಣೆ

Srinivasa Murthy VN
Updated On : 4 Jun 2014, 9:32 am

ಹೊಳೆನರಸೀಪುರ:  ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ರೈತ ಸಂಜೀವಿನಿ ಅಪಘಾತ ವಿಮೆ ಯೋಜನೆಯಡಿ ಪರಿಹಾರದ ಚೆಕ್ಕನ್ನು ಶಾಸಕ ಎಚ್.ಡಿ.ರೇವಣ್ಣ ಫಲಾನುಭವಿಗೆ ತಾಲೂಕು ಕಚೇರಿಯ ಸಭಾಂಗಣದಲ್ಲಿ ವಿತರಿಸಿದರು. ತಾಲೂಕಿನ ದೊಡ್ಡಕಾಡನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚಿಕ್ಕನಹಳ್ಳಿಕೊಪ್ಪಲು ಗ್ರಾಮದ ಮಂಜುನಾಥ ಹಾಗೂ ಆತನ ಮಗ ಚನ್ನರಾಯಿ ಎಂಬುವವರು ಡಿ.11, 2013ರಂದು ಗ್ರಾಮದಲ್ಲಿನ ಕೆರೆಯಲ್ಲಿ ಕುರಿಗಳನ್ನು ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದರು. ಇವರು ಕೃಷಿಕರಾಗಿದ್ದ ಕಾರಣದಿಂದಾಗಿ ಇಲ್ಲಿನ ಎಪಿಎಂಸಿ ವತಿಯಿಂದ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆ ಯಡಿ ಮೃತಪಟ್ಟ ಇಬ್ಬರು ಕುಟುಂಬದವರಿಗೂ ತಲಾ ರು. 50 ಸಾವಿರ ಪರಿಹಾರದ ಚೆಕ್ಕನ್ನು ಮೃತರ ಕುಟುಂಬದವರಿಗೆ ಶಾಸಕ ಎಚ್.ಡಿ. ರೇವಣ್ಣ ತಾಲೂಕು ಕಚೇರಿ ಸಭಾಂಗಣದಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಎಸ್.ರಾಘವೇಂದ್ರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಮಹೇಶ್ ಇದ್ದರು.

ಕೆ-ಕಿಸಾನ್ ಯೋಜನೆ ರೈತರಿಗೆ ಅನುಕೂಲ
ಹಾಸನ: ರಾಜ್ಯ ಸರ್ಕಾರ ರೈತರ ಸಮಗ್ರ ಮಾಹಿತಿ ಸಂಗ್ರಹಿಸುವ ಕೆ-ಕಿಸಾನ್ ಕರ್ನಾಟಕ (ಕೃಷಿ ಮಾಹಿತಿ ಸೇವೆಗಳು ಮತ್ತು  ನೆಟ್‌ವರ್ಕಿಂಗ್) ಯೋಜನೆ ಜಾರಿಗೊಳಿಸಿದೆ. ಆಧಾರ್ ಮಾದರಿಯಲ್ಲಿ ಕೆ-ಕಿಸಾನ್ ಯೋಜನೆ ಜಾರಿಗೆ ತಂದಿದ್ದು, ಅರ್ಹ ರೈತ ಫಲಾನುಭವಿಗಳಿಗೆ ಕೃಷಿಗೆ ಸಂಬಂಧಿಸಿದ ಸೌಲಭ್ಯಗಳನ್ನು ತಲುಪಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. ಪ್ರಾಯೋಗಿಕವಾಗಿ ತಾಲೂಕಿನ ಕಸಬಾ ಹೋಬಳಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಎ.ಎಸ್. ಕೋಕಿಲ ತಿಳಿಸಿದ್ದಾರೆ. ಕಸಬಾ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಗೆ ಒಳಪಡುವ ರೈತರ ದತ್ತಾಂಶವನ್ನು ರೈತ ಅನುವುಗಾರರ  ಮುಖಾಂತರ ಸಂಗ್ರಹಿಸಿ ಗಣಕ ಯಂತ್ರದಲ್ಲಿ ಅಳವಡಿಸಲಾಗುತ್ತದೆ. ರೈತ ಅನುವುಗಾರರ ನೆರವಿನಿಂದ ರೈತನ ಕುಟುಂಬ, ಭೂ ಹಿಡುವಳಿ ವಿವರ, ಮತದಾರರ ಪಟ್ಟಿ ಸಂಖ್ಯೆ, ಅಥವಾ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಕೃಷಿ ಬೆಳೆಗಳ ವಿವರಗಳನ್ನು ಪಡೆದು ಗಣಕ ಯಂತ್ರದಲ್ಲಿ ಅಳವಡಿಸಲಾಗುವುದು. ಇದರಿಂದ ಬೇರೆಯವರ ಪಹಣಿ ತೋರಿಸಿ, ಬಿತ್ತನೆ ಬೀಜ ಅಥವಾ ಇತರೆ ಕೃಷಿ ಪರಿಕರ ಪಡೆಯಲು ಸಾಧ್ಯವಿರುವುದಿಲ್ಲ ಹಾಗೂ ರೈತರ ಸಮಗ್ರ ಮಾಹಿತಿಯನ್ನು ಗಣಕೀಕರಣಗೊಳಿಸಿ ಗುಣಮಟ್ಟದ ಸೇವೆಯನ್ನು ನೀಡಲು ಕೆ-ಕಿಸಾನ್ ಯೋಜನೆಯು ಸಹಕಾರಿಯಾಗುತ್ತದೆ. ಕಸಬಾ ಹೋಬಳಿಯ ಎಲ್ಲ ರೈತರು ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ಹಾಗೂ ಅಗತ್ಯವಿರುವ  ಪಹಣಿ, ಗುರುತಿನ ಸಂಖ್ಯೆ, ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ನೋಂದಣಿ ಸಮಯದಲ್ಲಿ ನೀಡಲು ಹಾಗೂ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕರಾದ ಎ.ಎಸ್. ಕೋಕಿಲ ಕೋರಿದ್ದಾರೆ.

ಗೃಹಿಣಿ ಕೊಲೆ
ಸಕಲೇಶಪುರ : ಮಲಗಿದ್ದಲ್ಲೇ ಗೃಹಣಿಯೊಬ್ಬರನ್ನು ಕುತ್ತಿಗೆ ಕಡಿದು ಕೊಲೆಗೈದಿರುವ ಘಟನೆ ಬೈಕೆರೆ ಗ್ರಾಮ ಸಮೀಪ ಮಂಗಳವಾರ ರಾತ್ರಿ ನಡೆದಿದೆ. ಚಂದ್ರವತಿ(27) ಕೊಲೆಯಾದವರು. ಮೂಲತಃ ತಾಲೂಕಿನ ಮರಗುಂದ ನಿವಾಸಿಯಾದ ಇವರು, ಬೈಕೆರೆ ಗ್ರಾಮದ ಧರ್ಮಣ್ಣ ಎಂಬುವರ ಕಾಫಿ ತೋಟದ ಕೂಲಿ ಕೆಲಸಕ್ಕೆಂದು ತನ್ನ ಪತಿ ರಘುವಿನೊಂದಿಗೆ ಕಳೆದ 6 ತಿಂಗಳ ಹಿಂದೆ ಬಂದು ನೆಲಸಿದ್ದರು ಎನ್ನಲಾಗಿದೆ. ಪತಿ ಬೇರೊಂದು ಮದುವೆಯಾಗಿದ್ದು ಅಪರೂಪಕ್ಕೊಮ್ಮೆ ಬೈಕೆರೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದ್ದು ಕಳೆದ ರಾತ್ರಿಯೂ ಈ ವ್ಯಕ್ತಿ ಮನೆಗೆ ಬಂದಿದ್ದ ಎಂಬ ಅನುಮಾನ ಹರಿದಾಡುತ್ತಿದ್ದು, ಪತಿಯೇ ಕೊಲೇಗೈದಿರಬಹುದು ಗ್ರಾಮಾಂತರ ಠಾಣೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮನೆಗಳ್ಳನ ಬಂಧನ: 1.46 ಲಕ್ಷ ಮೌಲ್ಯದ ಚಿನ್ನ, ನಗದು ವಶ
ಹಾಸನ: ಗ್ರಾಮಾಂತರ ಠಾಣೆಯ ಪೊಲೀಸರು ಮನೆಗಳ್ಳನೊಬ್ಬನನ್ನು ಇತ್ತೀಚೆಗೆ ಬಂಧಿಸಿದ್ದು, ಆತನಿಂದ  1,43,472 ಬೆಲೆಯ 50 ಗ್ರಾಂ ಚಿನ್ನಾಭರಣ ಮತ್ತು ರು. 3,000 ನಗದನ್ನು ವಶಪಡಿಸಿಕೊಂಡಿದ್ದಾರೆ. ಕಟ್ಟಾಯ ಹೋಬಳಿ ಮಲ್ಲಿಗೆವಾಳು ಗ್ರಾಮದ ಎಂ.ಪಿ. ರಮೇಶ್(33) ಬಂಧಿತ ಆರೋಪಿಯಾಗಿದ್ದು, ಗೊರೂರು ಠಾಣಾ ವ್ಯಾಪ್ತಿಯಲ್ಲಿ ಹಲವು ಮನೆಗಳಲ್ಲಿ ಕಳವು ನಡೆಸಿದ್ದಾನೆ.  ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಜೆ.ಕೆ. ರಶ್ಮಿ ಹಾಗೂ ಡಿವೈಎಸ್ಪಿ ಪರಮೇಶ್, ಎಚ್. ಭೀಮಕ್ಕನವರ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ವೀರೇಂದ್ರಪ್ರಸಾದ್, ಸಬ್‌ಇನ್ಸ್‌ಪೆಕ್ಟರ್ ಜಯರಾಂ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಈ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶ್ವ ಪರಿಸರ ದಿನಾಚರಣೆ ಯೋಜನೆಯ ಕಾರ್ಯಾಗಾರ
ಹಾಸನ:  ವಿಶ್ವ ಪರಿಸರ ದಿನಾಚರಣೆಯನ್ನು ಹಾಸನ ಜಿಲ್ಲಾಡಳಿತ, ಅರಣ್ಯ ಇಲಾಖೆ ಮಾಲಿನ್ಯ ನಿಯಂತ್ರಣ ಮಂಡಳಿ, ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ನಗರ ಸಭೆ, ವನ್ಯಪ್ರಾಣಿ ಪರಿಪಾಲಕರ ಸಂಘ, ನಮ್ಮೂರ ಸೇವೆ, ಸಂಘಟನೆ, ಬಿ.ಸಿ.ಆರ್.ಟಿ. ಸಂಸ್ಥೆ, ಗ್ರಾಮ ಅರಣ್ಯ ಸಮಿತಿಗಳು ಹಾಗೂ ಇತರೆ ಸಂಘ-ಸಂಸ್ಥೆಗಳ ಸಹಕರದೊಂದಿಗೆ ಜೂನ್ 5 ರಂದು ಏರ್ಪಡಿಸಲಾಗಿದೆ. ಬೆಳಗ್ಗೆ 8 ಕ್ಕೆ ಗಿಡ ನೆಡುವ ಕಾರ್ಯಕ್ರಮ. ಬೆಳಗ್ಗೆ 8.30 ಗಂಟೆಗೆ ರೇಸ್ ಕೋರ್ಸ್ ರಸ್ತೆಯ ಶ್ರೀಗಂಧದ ಕೋಠಿ ಆವರಣದಿಂದ ಕಲಾಭವನದವರೆಗೆ ಪರಿಸರ ಜಾಥಾ. ಬೆಳಗ್ಗೆ 10ಗಂಟೆಯಿಂದ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪರಿಸರ ಪ್ರೇಮಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ. ಮಾಹಿತಿಗೆ ಮೊ. 9844488217 ಸಂಪರ್ಕಿಸಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ಭಟ್ ಕೋರಿದ್ದಾರೆ.

ನಾಗರೀಕ ಸೇವಾ ಪರೀಕ್ಷೆ  2014
ಹಾಸನ: ಕೇಂದ್ರ ಲೋಕಸೇವಾ ಆಯೋಗ ಐಎಎಸ್., ಐಪಿಎಸ್., ಐಎಫ್‌ಎಸ್., ಐಅರ್‌ಎಸ್., ಮುಂತಾದ ಸುಮಾರು 1291 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾನಿಲಯದ ಯಾವುದಾದರೂ ಪದವಿ ಪಡೆದಿರಬೇಕು.
ವಿಶೇಷ ಸೂಚನೆ: ಪ್ರಸಕ್ತ ಸಾಲಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿರುವವರೂ ಅರ್ಜಿ ಸಲ್ಲಿಸಬಹುದು. 2014ರ ಆಗಸ್ಟ್ 1ಕ್ಕೆ   21 ವರ್ಷ ತುಂಬಿರಬೇಕು ಮತ್ತು 32 ವರ್ಷದೊಳಗಿರಬೇಕು. (ಪ.ಜಾ, ಪ.ಪಂಗಡಕ್ಕೆ 5 ವರ್ಷ, ಕೇಂದ್ರ ಓಬಿಸಿಗೆ 3 ವರ್ಷ ರಿಯಾಯಿತಿ ಇರುತ್ತದೆ), ಅರ್ಜಿ ಸಲ್ಲಿಸಲು ಜೂನ್ 30 ಕಡೇ ದಿನ. ಆಗಸ್ಟ್ 24 ರಂದು ಪರೀಕ್ಷೆ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ -ಢಿಢಿಢಿ.್ಡಠಡ್ಛ್ಟಟಿಟ್ಝಟಿಜ.ಟ್ಝ್ಛಿ.್ಝಟಿ ವೆಬ್ ಸೈಟ್‌ನಲ್ಲಿ ಆನ್‌ಲೈನ್ ಮೂಲಕ 30-6-2014 ರ ರಾತ್ರಿ 11.59 ರವರೆಗೆ ಸಲ್ಲಿಸಬಹುದು ಹೆಚ್ಚಿನ ಮಾಹಿತಿಗೆ  ಲೋಕಸೇವಾ ಆಯೋಗದ ವೆಬ್‌ಸೈಟ್ ಡಿಡಿಠಣಣಣಢಿಢಿಢಿ.್ಡಠಡ್ಛ.್ಜ್ಟಢ.್ಝಟಿಣ  ನೋಡಿ ಅಥವಾ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ಇವರನ್ನು ಸಂಪರ್ಕಿಸಿ. ದೂ: 0821-2516844, 9449686641
ವಿ.ಸೂ: ಪರೀಕ್ಷೆಗೆ ಸಂಬಂಧಪಟ್ಟ ಮಾಹಿತಿ, ಪರೀಕ್ಷಾ ವಿಧಾನ, ಪಠ್ಯಕ್ರಮ, ಹಳೆ ಪ್ರಶ್ನೆಪತ್ರಿಕೆಗಳು ಮತ್ತು ಗೈಡ್‌ಗಳು  ಮೇಲ್ಕಂಡ ಕಚೇರಿಯಲ್ಲಿ ಲಭ್ಯವಿದ್ದು ಆಸಕ್ತರು ಅವುಗಳ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರದ ಉಪಮುಖ್ಯಸ್ಥರಾದ ಎ.ಎವೆಂಕಟೇಶಪ್ಪ ಕೋರಿದ್ದಾರೆ.

ಭಾರತ್ ಗ್ಯಾಸ್ ಏಜೆನ್ಸಿ ಸ್ಥಳಾಂತರ
ಹಾಸನ: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಹಾಸನ. ಇವರು ಭಾರತ ಗ್ಯಾಸ್ ಏಜೆಸ್ಸಿ ಹೊಂದಿದ್ದು ಹಾಸನ ನಗರದ ಕೆ.ಆರ್.ಪುರಂ ಬಡಾವಣೆ 2ನೇ ಕ್ರಾಸ್ , ನಂ. 878 ರಲ್ಲಿ ಗ್ಯಾಸ್ ಶೋ ರೂಂಅನ್ನು ಜೂನ್ 1ರಿಂದ ಹಾಸನದ ಹೊಯ್ಸಳ ನಗರದ (ಕುವೆಂಪು ನಗರ) ಗಣಪತಿ ದೇವಸ್ಥಾನದ ಹತ್ತಿರ ಶ್ರೀ ಲಕ್ಷ್ಮೀ ಟವರ್ ಮೊದಲನೇ ಮಹಡಿ ನಂ-225 ಕ್ಕೆ ಬದಲಾಯಿಸಲಾಗಿದೆ. ಆದ್ದರಿಂದ ಗ್ರಾಹಕರು ಎಂದಿನಂತೆ ಸಹಕರಿಸಬೇಕಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ಕೋರಿದ್ದಾರೆ.

ಖರ್ಗೆ ಆಯ್ಕೆಗೆ ಅಭಿನಂದನೆ
ಮೈಸೂರು: ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರನ್ನಾಗಿ ಎಂ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದ ಪಕ್ಷದ ವರಿಷ್ಠರನ್ನು ವಿನಾಯಕ ಯುವಕ ಕ್ರೀಡಾ ಸಂಸ್ಥೆ ಅಭಿನಂದಿಸಿದೆ. ರಾಜ್ಯ ರಾಜಕೀಯ ಕ್ಷೇತ್ರದಲ್ಲಿ ಸೌಮ್ಯ ವ್ಯಕ್ತಿಯಾಗಿರುವ, ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾದ ಖರ್ಗೆ ಅವರಿಗೆ ಒಳ್ಳೆಯ ಹುದ್ದೆ ನೀಡಿರುವುದು ಸಂತೋಷವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಮಾದಯ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement