ಅಣ್ಣೂರು ಗ್ರಾಮಕ್ಕೆ ಬಸ್ ಸೌಲಭ್ಯ
ಎಚ್.ಡಿ. ಕೋಟೆ: ತಾಲೂಕಿನ ಗಾಂಧಿನಗರದಲ್ಲಿ ಅಣ್ಣೂರು ಗ್ರಾಮಕ್ಕೆ ನೂತನ ಬಸ್ಗೆ ಶಾಸಕ ಎಸ್.ಚಿಕ್ಕಮಾದು ಬುಧವಾರ ಚಾಲನೆ ನೀಡಿದರು. ನಂತರ ಮಾತನಾಡಿ, ಪಟ್ಟಣದಿಂದ ವಡ್ಡರಗುಡಿ, ಸವ್ವೆ, ಗೆಂಡೇಗೌಡರ ಕಾಲೋನಿ, ಪಡುಕೋಟೆ ಗ್ರಾಮಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಈ ನೂತನ ಬಸ್ಗೆ ಚಾಲನೆ ನೀಡಲಾಗಿದ್ದು ಪಟ್ಟಣದಿಂದ ಬೆಳಗ್ಗೆ 7.30ಕ್ಕೆ ಹೊರಡಲಿದ್ದು, ಪ್ರತಿನಿತ್ಯ ನಾಲ್ಕು ಬಾರಿ ಚಲಿಸಲಿದೆ. ಈ ಹಿಂದೆ ಪ್ರಯಾಣಿಕರು ಖಾಸಗಿ ವಾಹನಗಳನ್ನು ಅವಲಂಬಿಸಿದ್ದು ಇನ್ನು ಮುಂದೆ ಸಾರಿಗೆ ಬಸ್ನಲ್ಲಿ ಚಲಿಸುವಂತೆ ಕರೆ ನೀಡಿದರು. ತಾಪಂ ಅಧ್ಯಕ್ಷೆ ಮಲ್ಲೇಶ್ವರಿ ತಂಗವೇಲು, ವೆಂಕಟೇಶ್, ಚಾ.ನಂಜುಂಡಮೂರ್ತಿ, ತಂಗವೇಲು, ರಾಮಕೃಷ್ಣ, ಬಾಲಕೃಷ್ಣ, ಅಶೋಕ, ಕೃಷ್ಣ, ಜವರೇಗೌಡ, ಅನ್ಸಾರಿ, ಗ್ರಾಮಸ್ಥರು ಇದ್ದರು.
ರಾಮನಾಥಪುರದಲ್ಲಿ ಪರಿಸರ ದಿನಾಚರಣೆ
ರಾಮನಾಥಪುರ: ಇಲ್ಲಿನ ನೈರುಧ್ಯ ಎನ್.ಜಿ.ಓ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಇಲ್ಲಿನ ಮುಖ್ಯ ರಸ್ತೆಯ ವಿಭಜಕದಲ್ಲಿ ಇತ್ತೀಚೆಗೆ ಸಸಿಗಳನ್ನು ನೆಡಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಸ್ವಾಮಿಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಂ.ಹೆಚ್. ಕೃಷ್ಣಮೂರ್ತಿ ಮತ್ತು ಮಾಜಿ ಅಧ್ಯಕ್ಷ ಆರ್.ಎಸ್. ನರಸಿಂಹಮೂರ್ತಿ ಗಿಡ ನೆಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ. ಪಾಂಡುರಂಗ ಮಾತನಾಡಿ, ಪರಿಸರ ವಾಯು ಮಾಲಿನ್ಯ ತಡೆಗಟ್ಟಲು ಗಿಡಮರಗಳನ್ನು ಬೆಳೆಸುವುದು ಅವಶ್ಯಕವಾಗಿದೆ ಮತ್ತು ಇದರಿಂದ ಮನುಷ್ಯರ ಆರೋಗ್ಯ ಹಾಗೂ ಪ್ರಕೃತಿಯಲ್ಲಿ ಆಗುವ ಹವಾಮಾನ ವೈಪರೀತ್ಯಗಳನ್ನು ತಡೆಗಟ್ಟಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಸಾಧ್ಯವಾದಷ್ಟು ಗಿಡಮರಗಳನ್ನು ಬೆಳೆಸುವಂತೆ ತಿಳಿಸಿದರು. ಆರ್. ಎಂ. ಸಿದ್ದಯ್ಯ ಇದ್ದರು.
ಅಪಘಾತದಲ್ಲಿ ಗಾಯಗೊಂಡಿದ್ದ ಪಾದಚಾರಿ ಸಾವು
ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಜೋಡಿಘಟ್ಟೆ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಪರಿಚಿತ ವಾಹನವೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಹಾಸನದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಚನ್ನರಾಯಪಟ್ಟಣ ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಹಿರೇಹಳ್ಳಿ ಗ್ರಾಮದ ರಾಜು(50) ಮೃತಪಟ್ಟ ದುರ್ಧೈವಿಯಾಗಿದ್ದು, ಇವರು ರಾಷ್ಟ್ರೀಯ ಹೆದ್ದಾರಿ ಜೋಡಿಘಟ್ಟೆ ಗ್ರಾಮದ ಬಳಿ ರಸ್ತೆ ದಾಟುವ ಸಂದರ್ಭದಲ್ಲಿ ಕಾರೊಂದು ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ರಾಜು ಅವರನ್ನು ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ. 20ವರ್ಷಗಳ ಕಾಲ ತಾಲೂಕು ಅರ್ಚಕರ ಸಂಘದ ಅಧ್ಯಕ್ಷರಾಗಿ ರಾಜು ಅವರು ಸೇವೆ ಸಲ್ಲಿಸಿದ್ದು, ರಾಜ್ಯ ಅರ್ಚಕರ ಸಂಘದ ಅಧ್ಯಕ್ಷ ಶ್ರೀವತ್ಸ, ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ರಘುಸ್ವಾಮಿ ತಾಲೂಕು ಅರ್ಚಕರ ಸಂಘದ ಪದಾಧಿಕಾರಿಗಳು ಮೃತರ ಮನೆಗೆ ತೆರಳಿ ಸಾಂತ್ವನ ತಿಳಿಸಿದರು.
ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಇಂದು
ಹಾಸನ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಹಯೋಗದೊಂದಿಗೆ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ಜೂ. 12ರಂದು ಬೆಳಿಗ್ಗೆ 8.30 ಕ್ಕೆ ಸಿದ್ದಯ್ಯನಗರದ ಅಂಗನವಾಡಿ ಕೇಂದ್ರದಿಂದ ಜನಜಾಗೃತಿ ಜಾಥಾ ಕಾರ್ಯಕ್ರಮ ನಡೆಯಲಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಜೆ. ಸತೀಶ್ ಸಿಂಗ್ ಮೊದಲ ಜಾಥಾಕ್ಕೆ ಚಾಲನೆ ನೀಡುವರು.
2ನೇ ಜನಜಾಗೃತಿ ಜಾಥಾಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚಿದಾನಂದ್ ಚಾ ಚಾಲನೆ ನೀಡುವರು.
ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಬೈಲಕುಪ್ಪೆ: ಡಿಟಿಡಿಸಿ ಕೋರಿಯರ್ ಸಂಸ್ಥೆಯು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ರೋಡ್ ಶೋ ನಡೆಸಿ ಮತ್ತು ಟಿಬೆಟಿಯನ್ ಲಾಮಾ ಕ್ಯಾಂಪಿನ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಮತ್ತು ಕುಶಾಲನಗರದಲ್ಲಿ ಬುಧವಾರ ನಡೆದ ಈ ವಾರ್ಷಿಕೋತ್ಸವದಲ್ಲಿ ಕಾವೇರಮ್ಮಗೆ ಪೂಜೆ ಸಲ್ಲಿಸಲಾಯಿತು. ಡಿಟಿಡಿಸಿ ದಕ್ಷಿಣ ವಲಯ ವ್ಯವಸ್ಥಾಪಕ ವೆಂಕಟೇಶ್ ಮಾತನಾಡಿ, 1990ರಲ್ಲಿ ಆರಂಭಗೊಂಡ ಈ ಕೋರಿಯರ್ ಸೇವೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಗ್ರಸ್ಥಾನದಲ್ಲಿದೆ. 6 ಸಾವಿರ ಶಾಖೆಗಳನ್ನು ಹೊಂದಿದ್ದು, ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿದೆ ಎಂದರು. ಹುಣಸೂರು ಕುಶಾಲನಗರ ವ್ಯವಸ್ಥಾಪಕ ಎಂ.ಎಂ.ರಾಜೇಗೌಡ, ಮಂಡ್ಯ ಜಿಲ್ಲೆ ವ್ಯವಸ್ಥಾಪಕ ವಿಜಯ್ಕುಮಾರ್, ದಿಲೀಪ್ ಇದ್ದರು.
ನೌಕರರ ಸಭೆ 14ಕ್ಕೆ
ಟಿ. ನರಸೀಪುರ: ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಹೊರಗುತ್ತಿಗೆ ನೌಕರರ ಸಂಘದ ಸಭೆ ಪಿರಿಯಾಪಟ್ಟಣದ ಎಪಿಎಂಸಿ ಆವರಣದಲ್ಲಿ ಜೂ.14ರ ಬೆಳಗ್ಗೆ 10ಕ್ಕೆ ನಡೆಯಲಿದೆ. ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವ ಹಿನ್ನೆಲೆಯಲ್ಲಿ ಈ ಸಭೆ ಆಯೋಜಿಸಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಶಿವರಾಮ ವಹಿಸಲಿದ್ದು, ಕಾರ್ಯದರ್ಶಿ ಸದಾಶಿವಯ್ಯ, ಖಜಾಂಚಿ ಚಂದ್ರಶೇಖರ್ ಭಾಗವಹಿಸುವರು.
ಖುಷ್ಕಿ ಬೇಸಾಯ: ಮಾಹಿತಿಗೆ ಸಲಹೆ
ಜಾವಗಲ್: ಗ್ರಾಮೀಣ ಭಾಗದ ರೈತರು ಕೃಷಿ ಬಗ್ಗೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ಪಡೆದುಕೊಳ್ಳುವಂತೆ ಮಾಜಿ ಪ್ರಧಾನ ಎನ್.ಪಿ. ಮಲ್ಲೇಶಪ್ಪ ಸಲಹೆ ನೀಡಿದರು. ಉಂಡಿಗನಾಳು ಗ್ರಾಮದಲ್ಲಿ ಏರ್ಪಡಿಸಿದ್ದ ಗುಚ್ಚ ಗ್ರಾಮ ಮಟ್ಟದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಹಾಗೂ ಖುಷ್ಕಿ ಬೇಸಾಯ ಪದ್ಧತಿಯ ಬಗ್ಗೆ ಮಾಹಿತಿ ಪಡೆದು ಅಧಿಕ ಇಳುವರಿ ತೆಗೆದು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಹೇಳಿದರು. ಪ್ರಗತಿ ಸಾಧಿಸಿ: ಗ್ರಾಪಂ ಮಾಜಿ ಅಧ್ಯಕ್ಷ ಶಾಂತಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಇಲಾಖೆಯೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ಕೃಷಿಯಲ್ಲಿ ಪ್ರಗತಿ ಸಾಧಿಸಬೇಕೆಂದರು. ಕೃಷಿ ಅಧಿಕಾರಿ ಕುಮಾರಸ್ವಾಮಿ ಸಸ್ಯ ಸಂರಕ್ಷಣೆಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿ ನೀಡಿದರು. ಹಿರಿಯ ಕೃಷಿಕರಾದ ಸಿದ್ದೇಗೌಡ, ಮಹಾಲಿಂಗಪ್ಪ, ಗಂಗಾಧರಪ್ಪ, ಯು.ಆರ್.ಜಗದೀಶ್ ಮತ್ತಿತರರು ಭಾಗವಹಿಸಿದ್ದರು.
ನಾನಾ ವೃತ್ತಿಗಳ ಪ್ರವೇಶಕ್ಕೆ ಅರ್ಜಿ
ಹಾಸನ: ಸಿಟಿಎಸ್ ಯೋಜನೆಯಡಿಯಲ್ಲಿರುವ ತಾಂತ್ರಿಕ ಹಾಗೂ ತಾಂತ್ರಿಕೇತರ ವೃತ್ತಿಗಳಿಗೆ ರಾಜ್ಯದ ಯಾವುದೇ ಭಾಗದಿಂದ ಎಸ್ಎಸ್ಎಲ್ಸಿ, ಪಿಯುಸಿ, ಜೆಒಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಐ.ಟಿ.ಐ.ನ ಫಿಟ್ಟರ್, ಟರ್ನರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್(ಇ.ಎಂ), ಎಂ.ಎಂ.ವಿ., ಎಂ.ಆರ್.ಎ.ಸಿ. ವೃತ್ತಿಗಳಿಗೆ ಪ್ರವೇಶ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂ. 14 ರವರೆಗೆ ವಿಸ್ತರಿಸಲಾಗಿದೆ. ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. www.emptrg.kar.nic.in www.detKarnataka.org.in. ವಿವರಗಳಿಗೆ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳುವಂತೆ ಬೇಲೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಕೋರಿದ್ದಾರೆ.
ಕಾಳು ಮೆಣಸು ಬಳ್ಳಿಗೆ ಸಹಾಯಧನ
ಹಾಸನ: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಕಲೇಶಪುರ ತಾಲೂಕಿನಲ್ಲಿ ಖಾಸಗಿ ನರ್ಸರಿಗಳಲ್ಲಿ ಈಗಾಗಲೇ ಕಾಳು ಮೆಣಸು ಬಳ್ಳಿಗಳನ್ನು ಉತ್ಪಾದನೆ ಮಾಡಿರುವ, ಮಾಡುತ್ತಿರುವ ಅರ್ಹ ಸಂಸ್ಥೆದಾರರು, ಕಾಳು ಮೆಣಸು ಬಳ್ಳಿಗಳನ್ನು ಮಾರಾಟ ಮಾಡುವವರು, ಯೋಗ್ಯವಾದ ಬಳ್ಳಿಗಳನ್ನು ತೋಟಗಾರಿಕೆ ಇಲಾಖಾ ವತಿಯಿಂದ ದೃಡೀಕರಿಸಿಕೊಂಡು ನಂತರ ನಗದು ಬಿಲ್ಲನ್ನು ಸಿದ್ಧಪಡಿಸಿಕೊಂಡು ದೃಢೀಕರಿಸಿರುವ ಯೋಗ್ಯವಾದ ಕಾಳು ಮೆಣಸು ಬಳ್ಳಿಗಳನ್ನು ಒದಗಿಸಲು ಆಸಕ್ತಿಯಿದ್ದಲ್ಲಿ ತಾಲೂಕಿನ ರೈತ ಫಲಾನುಭವಿಗಳು ತಮ್ಮಿಂದ ಖರೀದಿಸಿದ ಕಾಳು ಮೆಣಸು ಬಳ್ಳಿಗಳಿಗೆ ಸಹಾಯಧನ ನೀಡಲಾಗುವುದು. ಕಾಳು ಮೆಣಸು ಬಳ್ಳಿಗಳನ್ನು ಒದಗಿಸಲು ಇಚ್ಚೆಯುಳ್ಳ ಅರ್ಹ ಸಂಸ್ಥೆದಾರರು ಜೂನ್ 16ರೊಳಗಾಗಿ ಸಂಪರ್ಕಿಸಿ ತಮ್ಮ ಖಾಸಗಿ ನರ್ಸರಿಯನ್ನು ನೊಂದಾಯಿಸಿಕೊಳ್ಳಬಹುದೆಂದು ಸಕಲೇಶಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕೋರಿದ್ದಾರೆ.