ಬಾಂಬ್ ಬೆದರಿಕೆ: ಇಂಟರ್ ಸಿಟಿ ರೈಲು ತಪಾಸಣೆ
ಅರಸೀಕೆರೆ: ಬೆಂಗಳೂರಿಗೆ ತೆರಳುತ್ತಿದ್ದ ಸಿದ್ಧಗಂಗಾ ಇಂಟರ್ ಸಿಟಿ ರೈಲಿನಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಅನಾಮಧೇಯ ಕರೆ ಹಿನ್ನಲೆಯಲ್ಲಿ ಪಟ್ಟಣದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿ ರೈಲು ತಪಾಸಣೆ ನಡೆಸಿದ ಘಟನೆ ಬುಧವಾರ ನಡೆದಿದೆ. ಇದೊಂದು ಹುಸಿ ಕರೆ ಎಂಬುದು ತಿಳಿದ ಬಳಿಕ ಮಧ್ಯಾಹ್ನ 4 ಗಂಟೆಯ ನಂತರ ರೈಲು ಪ್ರಯಾಣಕ್ಕೆ ಅನುವು ಮಾಡಿಕೊಡಲಾಯಿತು. ಧಾರವಾಡದಿಂದ ಬೆಂಗಳೂರಿಗೆ ತೆರಳುವ ಇಂಟರ್ ಸಿಟಿ ರೈಲಿನಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಸುದ್ದಿ ಬೆಂಗಳೂರಿನ ಯಶವಂತಪುರ ರೇಲ್ವೆ ಕಂಟ್ರೋಲ್ ರೂಮಿನಿಂದ ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಸುದ್ದಿ ಬಂದ ತಕ್ಷಣ ಕಾರ್ಯಪ್ರವೃತ್ತರಾದ ಅರಸೀಕೆರೆ ಪೊಲೀಸರು ಡಿವೈಎಸ್ಪಿ ಐ.ಜಿ.ಮಂಜುನಾಥ್ ನೇತೃತ್ವದಲ್ಲಿ ರೈಲು ನಿಲ್ದಾಣಕ್ಕೆ ಆಗಮಿಸಿ ತಪಾಸಣೆ ನಡೆಸಿದರು.
ಪ್ರಯಾಣಿಕರ ಆತಂಕ: 21 ಭೋಗಿಗಳಲ್ಲಿ 2500ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ರೈಲಿನಲ್ಲಿ ಬಾಂಬ್ ಇದೆ ಎಂಬ ಸುದ್ದಿ ಹರಡುತ್ತಿದ್ದಂತೆ ಪ್ರಯಾಣಿಕರು ಪ್ರಾಣಭಯದಿಂದ ತಮ್ಮ ಲಗೇಜುಗಳೊಡನೆ ಇಳಿದು ಚೆಲ್ಲಾಪಿಲ್ಲಿಯಾದರು.