ಬೀಳುವ ಸ್ಥಿತಿಯಲ್ಲಿ ಫ್ಲೆಕ್ಸ್ ಇದೆ.. ಗಮನಿಸಿ ಸಂಭಾವ್ಯ ಹಾನಿ ತಪ್ಪಿಸುವರೇ?
ಹಾಸನ: ನಗರದ ಸ್ಲೇಟರ್ಸ್ ಹಾಲ್ ವೃತ್ತದ ಬಳಿ ಕಟ್ಟಡದ ಮೇಲಿರುವ ದೊಡ್ಡ ಫ್ಲೆಕ್ಸ್ವೊಂದು ಗಾಳಿಗೆ ಹರಿದು ಹೋಗಿದ್ದು, ಯಾವಾಗಲಾದರೂ ಜನರ ಮೇಲೆ ಬೀಳುವ ಸ್ಥಿತಿಯಲ್ಲಿ ಇದ್ದು, ಅಪಾಯದ ಮುನ್ಸೂಚನೆ ಎದುರಾಗಿದೆ. ಕಬ್ಬಿಣದ ಸಲಾಕೆಯಿಂದ ಬಹು ಎತ್ತರದ ಕಟ್ಟಡದ ಮೇಲೆ ಜ್ಯುವೆಲ್ಲರಿ ಸಂಸ್ಥೆಯೊಂದರ ನಾಮಫ ಲಕದ ಫ್ಲೆಕ್ಸ್ ಹಾಕಲಾಗಿದೆ. ಕೆಲ ದಿನಗಳ ಹಿಂದೆ ಗಾಳಿ-ಮಳೆಗೆ ಹರಿದು ಹೋಗಿ ಹಾಕಲಾಗಿದ್ದ ಕಬ್ಬಿಣದ ಸಲಾಕೆಯು ಕೆಳಗೆ ಬಿದ್ದು ಹೋಗಿದೆ. ಈಗ ಪೂರ್ಣ ಬೀಳುವ ಸ್ಥಿತಿಯಲ್ಲಿದೆ.
ಈ ಜಾಗದಲ್ಲಿ ಪ್ರತಿನಿತ್ಯ ನೂರಾರು ಜನರು ಹಾದು ಹೋಗುತ್ತಾರೆ. ಫ್ಲೆಕ್ಸ್ ಕೆಳಗೆ ಅಂಗಡಿಗಳಿವೆ. ಕೆಳಗೆ ಅಪ್ಪಿತಪ್ಪಿ ಫ್ಲೆಕ್ಸ್ ಬಿದ್ದರೆ ಪ್ರಾಣಹಾನಿ ಸಂಭವಿಸುವುದು ನಿಶ್ಚಿತವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಮೂರು ತಿಂಗಳ ಹಿಂದೆ ಸಹ್ಯಾದ್ರಿ ಚಿತ್ರ ಮಂದಿರದ ಬಳಿ ಎತ್ತರದ ಕಟ್ಟಡ ಮೇಲಿದ್ದ ಕಬ್ಬಿಣ ಉಳ್ಳ ದೊಡ್ಡ ಗಾತ್ರದ ಫ್ಲೆಕ್ಸ್ ಕೆಳಗೆ ಬಿದ್ದಿತ್ತು. ಇದರ ಪರಿಣಾಮ ಫ್ಲೆಕ್ಸ್ ಕೆಳಗೆ ವಿದ್ಯುತ್ ತಂತಿ ಹಾದು ಹೋಗಿ ಸ್ವಲ್ಪದರಲ್ಲಿಯೇ ವ್ಯಕ್ತಿಯೊಬ್ಬರ ಪ್ರಾಣ ಹಾನಿ ತಪ್ಪಿದಂತಾಗಿತ್ತು.