ಅರೇಹಳ್ಳಿ ರಸ್ತೆ ಕಾಂಕ್ರೀಟ್: ಎಚ್ಕೆಕೆ ಭರವಸೆ
ಸಕಲೇಶಪುರ: ಪಟ್ಟಣದ ಅರೇಹಳ್ಳಿ ಬೀದಿಯಲ್ಲಿನ ರಸ್ತೆ ಅಭಿವೃದ್ದಿ ಕಾಮಗಾರಿ ಲೋಕೋಪಯೋಗಿ ಇಲಾಖೆ ಹಾಗೂ ವಿದ್ಯುತ್ ಇಲಾಖೆ ನಡುವಿನ ಶೀತಲ ಸಮರದಿಂದಾಗಿ ಅರ್ಧಕ್ಕೆ ಸ್ಥಗಿತಗೊಳ್ಳುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಬೇಲೂರು ತಾಲೂಕು ಅರೇಹಳ್ಳಿಗ್ರಾಮದಿಂದ ಚಂಗಡಿಹಳ್ಳಿ ಗ್ರಾಮದವರೆಗಿನ 58 ಕಿ..ಮೀ. ರಸ್ತೆಯನ್ನು ಸುಮಾರು 28 ಕೋಟಿ ರು. ವೆಚ್ಚದಲ್ಲಿ ಅಭಿವೃದ್ದಿಪಡಿಸುವ ಕಾಮಗಾರಿ ನಡೆಯುತ್ತಿದ್ದು ಪಟ್ಟಣದಲ್ಲಿ ಹಾದುಹೋಗುವ ಅರೇಹಳ್ಳಿ ಬೀದಿಯ 400 ಮೀಟರ್ ರಸ್ತೆಯ ಅಂಚಿನಲ್ಲಿರುವ ವಿದ್ಯುತ್ ಕಂಬಗಳನ್ನು ವಿದ್ಯುತ್ ಇಲಾಖೆ ಸ್ವಂತ ಖರ್ಚಿನಿಂದ ತೆರವುಗೊಳಿಸಲು ಸಿದ್ಧವಿಲ್ಲದ ಕಾರಣ ಕಾಮಗಾರಿ ನೆನಗುದಿಗೆ ಬಿಳುವಂತಾಗಿದೆ. ಇದರಿಂದಾಗಿ ಬೇಸಿಗೆಯಲ್ಲಿ ಧೂಳು ಹಾಗೂ ಮಳೆಯಲ್ಲಿ ಕೆಸರಿನಿಂದಾಗಿ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ .
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎಚ್.ಕೆ. ಕುಮಾರಸ್ವಾಮಿ, ಉಳಿದಿರುವ 400 ಮೀಟರ್ ರಸ್ತೆಯನ್ನು ಕಾಂಕ್ರೀಟಿಕರಣ ಮಾಡುವ ಉದ್ದೇಶದಿಂದ ಬಿಡಲಾಗಿದೆ ಎಂದು ಸ್ವಷ್ಟಪಡಿಸಿದ್ದಾರೆ.