ಇಲಾಖೆ ವಿಲೀನಕ್ಕೆ ವಿರೋಧ
ಹಾಸನ: ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನ ಮಾಡಲು ಹೊರಟಿರುವ ರಾಜ್ಯ ಸರ್ಕಾರ ತನ್ನ ಆದೇಶವನ್ನು ಕೈಬಿಡಬೇಕು ಎಂದು ರೇಷ್ಮೆ ಬೆಳೆಗಾರರ ಸಂಘ ಆಗ್ರಹಿಸಿದೆ.
ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿ ರೈತರಿಗೆ ಲಾಭದಾಯಕವಾಗಿರುವ ರೇಷ್ಮೆ ಇಲಾಖೆಯನ್ನು ಒಂದು ತಿಂಗಳಿನಲ್ಲಿ ವಿಲೀನ ಮಾಡಲು ಆದೇಶಿಸಿರುವ ಕ್ರಮ ಸರಿಯಲ್ಲಿ ಎಂದು ಸಂಘದ ಅಧ್ಯಕ್ಷ ರಾಜೇಶ್ ಪ್ರಭು ಪತ್ರಿಕಾ ಗೋಷ್ಠಿಯಲ್ಲಿ ಟೀಕಿಸಿದರು.
ರೈತರಿಗೆ ಅನ್ಯಾಯ: ರಾಜ್ಯ ಸರ್ಕಾರ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಇತರೆ ಜಿಲ್ಲೆಯಲ್ಲಿಯೂ ರೇಷ್ಮೆ ಉತ್ಪತ್ತಿ ಮಾಡುತ್ತಾರೆ. ಆದರೆ ಕರ್ನಾಟಕ ಹೆಚ್ಚು ರೇಷ್ಮೆಯನ್ನು ಉತ್ಪತ್ತಿ ಮಾಡುತ್ತಿದೆ. ಈಗಿರುವಾಗ ರಾಜ್ಯ ಸರ್ಕಾರ ಇಲಾಖೆಯನ್ನು ವಿಲೀನ ಮಾಡುತ್ತಿರುವುದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂದರು.
ಈಗಾಗಲೇ ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾಹಿಸಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕಾಣುತ್ತಿದೆ. ಇಲಾಖೆಯನ್ನು ವಿಲೀನ ಮಾಡಿದರೆ ತಾಂತ್ರಿಕ ಕೆಲಸ ಕಾರ್ಯಗಳಿಗೆ ತೊಂದರೆ ಉಂಟಾಗುತ್ತದೆ ಎಂದರು.
ರು. 2 ಸಾವಿರ ಕೋಟಿ ವಹಿವಾಟು: ದೇಶದಲ್ಲಿ ಉತ್ತಮವಾದ ರೇಷ್ಮೆಯನ್ನು ಉತ್ಪಾದಿಸಿ ವಿದೇಶಕ್ಕೆ ರಪ್ತು ಮಾಡುವ ಮೂಲಕ ಲಾಭದಾಯಕ ಹುದ್ದೆಯಾಗಿ ಪರಿಣಮಿಸಿದೆ. ವಾರ್ಷಿಕ 2 ಸಾವಿರ ಕೋಟಿ ರು.ಗಳ ವಹಿವಾಟವನ್ನು ನಡೆಸುತ್ತಿದ್ದು, ವಿದೇಶಗಳಿಗೆ ರೇಷ್ಮೆಯನ್ನು ರಫ್ತು ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ದೇಶದ ರೇಷ್ಮೆಗೆ ವಿದೇಶಗಳ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆ ಇದೆ. ಆರ್ಥಿಕವಾಗಿ ಲಾಭದಾಯಕವಾಗಿರುವ ರೇಷ್ಮೆ ಇಲಾಖೆಯನ್ನು ವಿಲೀನ ಮಾಡುವುದು ಸರಿಯಲ್ಲ.
ನಿಷ್ಕ್ರಿಯಗೊಳಿಸಬೇಡಿ: ವಿಶ್ವದಲ್ಲಿ ರೇಷ್ಮೆ ಉತ್ಪತ್ತಿಯಲ್ಲಿ ಚೈನಾ ಪ್ರಥಮ ಸ್ಥಾನದಲ್ಲಿ ಇದ್ದರೆ, ನಂತರದಲ್ಲಿ ಭಾರತ ಇದೆ. ಇಂತಹ ಇಲಾಖೆಯನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ. ಕೃಷಿ ಇಲಾಖೆಯೊಂದಿಗೆ ವಿಲೀನ ಮಾಡಿದರೆ ರೇಷ್ಮೆ ಇಲಾಖೆಯ ತಾಂತ್ರಿಕ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಲಿದೆ ಎಂದರು. ಆದ್ದರಿಂದ ರಾಜ್ಯ ಸರ್ಕಾರ ಕೃಷಿ ಇಲಾಖೆಯೊಂದಿಗೆ ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸು ಹೊರಟಿರುವ ತೀರ್ಮಾನವನ್ನು ಕೈಬಿಟ್ಟು, ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೇಷ್ಮೆ ಬೆಳೆಗಾರರಾದ ನಾಗಣ್ಣ, ಬಸವರಾಜ್, ಕುಬೇರ್, ರಾಮೇಗೌಡ ಹಾಗೂ ಇತರರು ಇದ್ದರು.