ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಖಾತ್ರಿ ಮಾಹಿತಿ ಕೇಳಿದ ವ್ಯಕ್ತಿಗೆ ಥಳಿತ

Srinivasa Murthy VN
Updated On : 13 Jun 2014, 11:04 am

ರಾಮನಾಥಪುರ: ಕೊಣನೂರು ಹೋಬಳಿಯ ಹಂಡ್ರಂಗಿ ಪಂಚಾಯ್ತಿ ವ್ಯಾಪ್ತಿಯ 2012ನೇ ಸಾಲಿನ ಉದ್ಯೋಗ ಖಾತ್ರಿ ಅನ್ವಯ ಸರಿಯಾದ ದಿನಕ್ಕೆ ಉದ್ಯೋಗ ನೀಡದೆ ಸತಾಯಿಸುತ್ತಿದ್ದು, ಈ ಬಗ್ಗೆ ಮಾಹಿತಿ ಹಕ್ಕಿನಡಿ ವಿವರ ಕೇಳಿದ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೆಚ್.ಇ. ಜಗದೀಶ್ ಅವರನ್ನು ಪಂಚಾಯ್ತಿಗೆ ಬರಮಾಡಿಕೊಂಡು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಂಡ್ರಂಗಿ ಪಂಚಾಯ್ತಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನಾಮಧೇಯ ಹೆಸರಿನಲ್ಲಿ ಬಿಲ್ ಪಡೆದಿರುವ ಬಗ್ಗೆ ಮಾಹಿತಿ ಹಕ್ಕು ಕೇಳಿದ್ದು, ಇದನ್ನು ಪಡೆಯಲು ಬಂದ ಜಗದೀಶ್ ಹಾಗೂ ಪಂಚಾಯ್ತಿ ಕಾರ್ಯದರ್ಶಿ ನಡುವೆ ವಾಗ್ವಾದ ನಡೆದಿದೆ. ಆಗ ಅಲ್ಲಿಯೇ ಇದ್ದ ರಮೇಶ ಅರಸ್, ಹೆಗ್ಗತ್ತೂರಿನ ನಿವಾಸಿ ಇನ್ನೊಮ್ಮೆ ಉದ್ಯೋಗ ಖಾತ್ರಿ ವಿಚಾರವಾಗಿ ಬಂದೀಯ ಜೋಕೆ ಎಂದು ಹೆದರಿಸಿ ಹಿಗ್ಗಾಮುಗ್ಗ ಥಳಿಸಿದರು ಎನ್ನಲಾಗಿದೆ. ತೀವ್ರ ಅಸ್ವಸ್ಥರಾದ ಜಗದೀಶ್ ಅವರನ್ನು ಕೊಣನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಿದ್ದಲ್ಲಿ ವಿಧಾನ ಸೌಧದ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಿನಾರಾಯಣ ಎಚ್ಚರಿಸಿದ್ದಾರೆ.

ತಿರುಪತಿಹಳ್ಳಿಯಲ್ಲಿ ಭೂಚೇತನ ಕಾರ್ಯಕ್ರಮ
ಜಾವಗಲ್: ಹೋಬಳಿಯ ತಿರುಪತಿ ಹಳ್ಳಿಯಲ್ಲಿ ನಡೆದ ಭೂಚೇತನ ಕಾರ್ಯಕ್ರಮವನ್ನು ಗ್ರಾಪಂ ಮಾಜಿ ಅಧ್ಯಕ್ಷೆ ಪಾರ್ವತಮ್ಮ ಉದ್ಘಾಟಿಸಿದರು.  ನಂತರ ಮಾತನಾಡಿದ ಅವರು,  ಜಿಪ್ಸಂ, ಬಿಎಸ್,ಬಿ ಹಾಗೂ ಭೂಚೇತನ ಪರಿಕರಗಳನ್ನು ಬಳಸಿ ಅಧಿಕ ಇಳುವರಿ ಪಡೆದು ರೈತರು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂದರು. ಕೃಷಿ ಅಧಿಕಾರಿ ಕುಮಾರ ಸ್ವಾಮಿ ಮಾತನಾಡಿ,  ಸಾವಯವ ಗೊಬ್ಬರ, ಎರೆಹುಳು ಗೊಬ್ಬರ ತಯರಿಕೆ ಬ್ಯಾಕ್ಟೀರಿಯಗಳ ಸಂತತಿ ಕಾಪಾಡುವುದರ ಬಗ್ಗೆ ಮಾಹಿತಿ ನೀಡಿದರು.

ಉತ್ತಮ ಇಳುವರಿಗೆ ಮಣ್ಣು ಪರೀಕ್ಷೆ ಮಾಡಿಸಿ
ಜಾವಗಲ್: ಮಣ್ಣು ಮಾದರಿ ಪರೀಕ್ಷೆಯಿಂದ ಮಣ್ಣಿನಲ್ಲಿರುವ ಫಲವತ್ತತೆಯ ಮಟ್ಟವನ್ನು ರೈತರು ತಿಳಿದುಕೊಳ್ಳುವುದು ಮುಖ್ಯವೆಂದು ಆತ್ಮಯೋಜನೆಯ ಅರಸೀಕೆರೆ ತಾಲೂಕು ವ್ಯವಸ್ಥಾಪಕ ಗೋಮಟೇಶ ನಾಯ್ಕ ರೈತರಿಗೆ ಸಲಹೆ ನೀಡಿದರು. ಜಾವಗಲ್ ಹೋಬಳಿ ವೃಂದಾವನಹಳ್ಳಿಯಲ್ಲಿ ಏರ್ಪಡಿಸಿದ್ದ ಗುಚ್ಚ ಗ್ರಾಮ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಣ್ಣು ಪರೀಕ್ಷೆಯ ನಂತರ ಕೊಟ್ಟಿಗೆ ಮತ್ತು ಹಸಿರೆಲೆ ಗೊಬ್ಬರ, ಲಘು ಪೋಷಕಾಂಶಗಳನ್ನು ಬಳಸಿ ಅಧಿಕ ಇಳುವರಿ ಪಡೆಯಬಹುದೆಂದರು.

ಬೈಕ್ ಹರಿದು ವೃದ್ಧೆಗೆ ಗಾಯ
ಹಾಸನ: ಬೈಕ್ ಸವಾರನೊಬ್ಬ ಅತಿ ವೇಗದಲ್ಲಿ ಚಲಿಸಿದ ಕಾರಣ ವೃದ್ಧೆಯೊಬ್ಬರ ಮೇಲೆ ಹರಿದು ತೀವ್ರ ಗಾಯಗೊಂಡ ಘಟನೆ ಇತ್ತೀಚೆಗೆ ನಡೆದಿದೆ.  ನಗರದ ಎಂಜಿ ರಸ್ತೆ, ಆದಿಚುಂಚನಗಿರಿ ಮುಂಭಾಗ ಡಬಲ್ ರಸ್ತೆಯಲ್ಲಿ ರವೀಂದ್ರನಗರ ನಿವಾಸಿ ವೃದ್ಧೆ ಪದ್ಮಮ್ಮ (84) ಎಂಬವರೇ ಬೈಕ್ ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು.  ಆರೋಪಿ ಕೆ.ಆರ್. ಪುರಂನ ಇಸ್ಮಾಯಿಲ್ ಬೈಕ್ ಲಾಕ್ ಮಾಡಿ ಪರಾರಿಯಾಗಿದ್ದಾನೆ. ಘಟನೆಯಿಂದ ಕೋಪಗೊಂಡ ಸಾರ್ವಜನಿಕರು ಬೈಕನ್ನು ಸುಟ್ಟು ಹಾಕಲು ಮುಂದಾಗಿದ್ದು, ಅಷ್ಟರಲ್ಲಿ ಕೆಲವರು ರಕ್ಷಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಬೈಕ್ ವಶಪಡಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಸ್ ಸೌಲಭ್ಯ ಕಲ್ಪಿಸಲು ಮನವಿ
ಅರಸೀಕೆರೆ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅರಸೀಕೆರೆ ಘಟಕ ವ್ಯವಸ್ಥಾಪಕರಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡ ಚನ್ನಬಸಪ್ಪ ಅವರಿಗೆ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸುವ ನೌಕರ ವೃಂದದವರು ಸನ್ಮಾನಿಸಿ ತಮ್ಮ  ಬೇಡಿಕೆಯನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು. ಪಟ್ಟಣದಿಂದ ಬಾಣಾವರ, ಕಲ್ಲುಸಾದರಹಳ್ಳಿ, ಕಣಕಟ್ಟೆ, ಪಂಚನಹಳ್ಳಿ, ಬೆಲಗೂರು ವರೆಗೆ ಸುಮಾರು 45-50 ಸರ್ಕಾರಿ ನೌಕರರು, ಅಧಿಕಾರಿಗಳು, ಬ್ಯಾಂಕ್ ಉದ್ಯೋಗಿಗಳು ಸರ್ಕಾರಿ ಬಸ್ಸುಗಳಲ್ಲಿ ಪಾಸ್ ಪಡೆದು ಪ್ರಯಾಣಿಸುತ್ತಿದ್ದು, ಇತ್ತೀಚೆಗೆ ಕಳಪೆ ಬಸ್ಸುಗಳನ್ನು ಈ ಮಾರ್ಗದಲ್ಲಿ ಓಡಿಸುತ್ತಿರುವುದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಬೆಳೆ ವಿಮೆಪಾವತಿಗೆ ಜೂ.30 ಕಡೇ ದಿನ
ಅರಸೀಕೆರೆ: ತಾಲೂಕಿನಲ್ಲಿ ರೈತರು ಬಿತ್ತನೆ ಮಾಡಿರುವ ಬೆಳೆಗಳಿಗೆ ರಾಷ್ಟ್ರೀಯ ಬೆಳೆ ವಿಮಾ ಕಾರ್ಯಕ್ರಮದ ಯೋಜನೆಯಡಿಯಲ್ಲಿ ಬೆಳೆಯ ವಿಮಾ ಕಂತನ್ನು ಪಾವತಿಸಲು ಜೂ. 30 ಕೊನೆಯ ದಿನ ಎಂದು ಸಹಾಯಕ ಕೃಷಿ ನಿರ್ದೇಶಕ ಕೆಂಪಚೌಡಪ್ಪ ತಿಳಿಸಿದ್ದಾರೆ.  ತಾಲೂಕಿನಲ್ಲಿ ರಾಗಿ, ಜೋಳ, ಮುಸುಕಿನ ಜೋಳ, ಸಾಮೆ, ಹೆಸರು, ಉದ್ದು, ತೊಗರಿ, ಹುರುಳಿ, ಎಳ್ಳು, ಹರಳು ಮತ್ತು ಸೂರ್ಯಕಾಂತಿ ಬೆಳೆಗಳಿಗೆ ಪ್ರಕೃತಿ ವಿಕೋಪಗಳಿಂದ ಬೆಳೆಗಳು ಹಾಳಾದಲ್ಲಿ ರೈತರಿಗೆ ಬೆಳೆ ವಿಮಾ ಪರಿಹಾರ  ನೀಡಲಾಗುವುದು ಎಂದು ಹೇಳಿದ್ದಾರೆ.  ತಾಲೂಕಿನಲ್ಲಿ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಸಂಸ್ಥೆಯನ್ನು ಈ ಬೆಳೆ ವಿಮಾ ಯೋಜನೆಯ ಅನುಷ್ಠಾನಕ್ಕೆ ಆಯ್ಕೆ ಮಾಡಲಾಗಿದ್ದು, ಮಾಹಿತಿಗಾಗಿ ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳನ್ನು ರೈತರು ಸಂಪರ್ಕಿಸಿ.

ಜಿಲ್ಲಾ ಕೃಷಿ ಮೇಳ 20 ರಂದು
ಹಾಸನ: ಮುಂಗಾರು ಹಂಗಾಮಿನಲ್ಲಿ ಆಂದೋಲನದ ರೂಪದಲ್ಲಿ ಕಾರ್ಯಕ್ರಮ ರೂಪಿಸಿ ನಗರದ ಹಾಸನಾಂಬ ಕಲಾ ಭವನದಲ್ಲಿ ಜೂ. 20 ರಂದು ಕೃಷಿ ಮೇಳ ಆಯೋಜಿಸಲಾಗಿದೆ.  ಮೇಳದಲ್ಲಿ ಜಿಲ್ಲೆಯ ರೈತರಿಗೆ ಹವಾಮಾನ ಬದಲಾವಣೆ, ಪರ್ಯಾಯ ಬೆಳೆ ಯೋಜನೆ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ, ಜಲಾನಯನ, ಮೀನಗಾರಿಕೆ, ಪಶುಸಂಗೋಪನೆ ಇಲಾಖೆಗಳ ಕಾರ್ಯಕ್ರಮಗಳು ಹಾಗೂ ಆಧುನಿಕ ಪರಿಕರಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಶಿವರಾಜ್ ತಿಳಿಸಿದ್ದಾರೆ. ಪೂರ್ವಭಾವಿ ಸಭೆ: ಜಂಟಿ ಕೃಷಿ ನಿರ್ದೇಶಕ ಕಚೇರಿಯಲ್ಲಿ ಇತ್ತೀಚೆಗೆ ಜಿಲ್ಲಾ ಮಟ್ಟದ ಕೃಷಿ ಮೇಳ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಹನಿ ನೀರಾವರಿ, ಸಾವಯವ ಕೃಷಿ ಯೋಜನೆ, ಕೀಟನಾಶಕ, ಬಿತ್ತನೆ ಬೀಜ, ಪರಿಕರ ಸರಬರಾಜು, ರಸಗೊಬ್ಬರ ಕುರಿತು ಸಹ ರೈತರಿಗೆ ಮಾಹಿತಿ ನೀಡಲು ಸಂಬಂಧಪಟ್ಟವರೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ಸೂಚಿಸಿದರು.  ಜಿಲ್ಲಾ ಪಂಚಾಯ್ತಿ  ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ ಇದ್ದರು. ಜಿಲ್ಲಾ ಜಲಾನಯನ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ  ಡಾ. ಜಯರಾಂ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಮತ್ತು ನಾನಾ ಸಂಸ್ಥೆಯ ಪದಾಧಿಕಾರಿಗಳು ಸಭೆಯಲ್ಲಿ ಇದ್ದರು.

ದೇವಾಲಯ ಉದ್ಘಾಟನಾ ಕಾರ್ಯಕ್ರಮ
ಹಾಸನ:  ಹೊಳೆನರಸೀಪುರ ತಾಲೂಕು ಹಳೇಕೋಟೆ ಹೋಬಳಿ ಮಾವಿನಕೆರೆ (ಕಾಮಸಮುದ್ರ) ಗ್ರಾಮದಲ್ಲಿರುವ ಶ್ರೀ ಹಳಿಯೂರು ಮಾರಮ್ಮ ದೇವಸ್ಥಾನವನ್ನು ಪುನರ್ ನಿರ್ಮಿಸಲಾಗಿದ್ದು, ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮವನ್ನು  ಜೂ. 18 ರಿಂದ ಜೂ. 20 ರವರೆಗೆ ಹಮ್ಮಿಕೊಳ್ಳಲಾಗಿದೆ. ಈ  ಪ್ರಯುಕ್ತ ಜೂ. 15 ರಿಂದಲೇ  ದೇವಸ್ಥಾನದ ಆವರಣದಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಬೇಕಾಗಿರುವುದರಿಂದ ಭಕ್ತರು ಜೂ. 15 ರಿಂದ ಜೂ. 23 ರವರೆಗೆ ಪೂಜಾ ಕಾರ್ಯಕ್ರಮವನ್ನು ಹೊರತುಪಡಿಸಿ ದೇವರಿಗೆ ಯಾವುದೇ ಬಲಿ ನೀಡುವುದಾಗಲೀ  ಅಥವಾ ಮಾಂಸಾಹಾರಿ ಊಟದ ಕಾರ್ಯಕ್ರಮಗಳನ್ನು ನಡೆಸಬಾರದೆಂದು ಕೋರಲಾಗಿದೆ.

ಅರಸೀಕೆರೆ: ವಿದ್ಯುತ್ ವ್ಯತ್ಯಯ 18ರಂದು
ಹಾಸನ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಹಾಸನ ವೃತ್ತ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ ಹಾಸನ ವಿದ್ಯುತ್ ವಿತರಣಾ  ಕೇಂದ್ರದಿಂದ ಹೊರ ಹೊಮ್ಮುವ ಅರಸೀಕೆರೆಯ ಕಲ್ಲು ಸಾದರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ ಗಂಜಿಗೆರೆಪುರ 11 ಕೆವಿ ಮಾರ್ಗವನ್ನು ಜೂ. 18 ರಂದು  ಬೆಳಗ್ಗೆ 9 ರಿಂದ   ಸಂಜೆ 5 ರವರೆಗೆ  ವಿದ್ಯುತ್ ನಿಲುಗಡೆಯಾಗುವುದು. ಗ್ರಾಹಕರು ಎಂದಿನಂತೆ  ಸಹಕರಿಸಬೇಕೆಂದು ಚೆಸ್ಕಾಂ ವೃತ್ತ ಕಚೇರಿಯ ಅಧೀಕ್ಷಕ ಎಂಜಿನಿಯರ್ ಕೋರಿದ್ದಾರೆ.

ಡಿ.ಇಡಿ, ಡಿ.ಪಿಇಡಿಗೆ ಅರ್ಜಿ ಆಹ್ವಾನ
ಹಾಸನ: ಡಿ.ಇಡಿ ಮತ್ತು ಡಿ.ಪಿಇಡಿ ಕೋರ್ಸ್‌ಗೆ ಆನ್‌ಲೈನ್ ಮೂಲಕ ಜೂನ್ 16 ರಿಂದ ಜೂನ್ 30 ರವರೆಗೆ  ಅರ್ಜಿಗಳನ್ನು ವೆಬ್‌ಸೈಟ್  WWW.Schooleducation.kar.nic.in ನಲ್ಲಿ ಸ್ವೀಕರಿಸಲಾಗುವುದು ಎಂದು ಡಯಟ್‌ನ ಪ್ರಾಂಶುಪಾಲ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಪದನಿಮಿತ್ತ ಉಪನಿರ್ದೇಶಕಿ ಪಿ. ಪದ್ಮಮ್ಮ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement