ಸಕ್ರಮಕ್ಕಾಗಿ ನಿರ್ಮಿಸಿದ್ದ ಅಕ್ರಮ ಮನೆಗಳ ತೆರವು
ಅರಕಲಗೂಡು: ಸರ್ಕಾರ ಅಕ್ರಮ ಮನೆಗಳನ್ನು ಸಕ್ರಮಗೊಳಿಸಲಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ರುದ್ರಭೂಮಿ, ಗುಂಡು ತೋಪು ಮತ್ತು ಗ್ರಾಮಠಾಣೆ ಸ್ಥಳಗಳಲ್ಲಿ ಅತಿಕ್ರಮಣ ಮಾಡಿ ರಾತ್ರೋ ರಾತ್ರಿ ಗುಡಿಸಿಲುಗಳು, ಶಾಶ್ವತ ಕಟ್ಟಡಗಳೇ ನಿರ್ಮಾಣವಾಗಿಬಿಟ್ಟಿವೆ.
ತಾಲೂಕಿನ ಮಲ್ಲಿಪಟ್ಟಣದಲ್ಲಿ ಈ ಅಕ್ರಮ ನಿರ್ಮಾಣ ಕಾರ್ಯ ನಡೆದಿದ್ದು, ಕೇವಲ ಗುಡಿಸಿಲುಗಳಷ್ಟೇ ಅಲ್ಲದೇ ರಾತ್ರೋ ರಾತ್ರಿ ಇಟ್ಟಿಗೆಯಿಂದ ನಿರ್ಮಿಸಿದ ಮನೆಗಳು ತಲೆಎತ್ತಿವೆ. ಮಲ್ಲಿಪಟ್ಟಣದ ಸಂತೆಮಾಳದ ಪಕ್ಕದಲ್ಲಿರುವ ಈ ಪ್ರದೇಶ ಸುಮಾರು 3 ಎಕರೆ ಇದ್ದು ಈ ಸ್ಥಳದಲ್ಲಿ ಕೆಲ ಗ್ರಾಮಸ್ಥರು ಸುಮಾರು 35ಕ್ಕೂ ಹೆಚ್ಚು ಗುಡಿಸಲು ನಿರ್ಮಾಗೊಂಡಿವೆ. ಕಳೆದ 2 ದಿನಗಳ ಹಿಂದೆ ಇಲ್ಲದ ಗುಡಿಸಲುಗಳು ಏಕಾ ಏಕಿ ಹೇಗೆ ನಿರ್ಮಾಣಗೊಂಡಿವೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದು, ಇವುಗಳನ್ನು ತೆರವು ಗೊಳಿಸುವಂತೆ ತಹಸೀಲ್ದಾರ್ ಅವರಿಗೆ ಪತ್ರ ಬರೆದಿದ್ದಾರೆ.
ಗಾಳಿ ಸುದ್ದಿ: ಸರ್ಕಾರ ಅಕ್ರಮ-ಸಕ್ರಮಗಳ ಯೋಜನೆ ಮೂಲಕ ಸರ್ಕಾರಿ ಆಸ್ತಿಯಲ್ಲಿ ಮನೆ ಮಾಡಿರುವವರಿಗೆ ಸಕ್ರಮ ಮಾಡುತ್ತಾರೆ ಎಂಬ ಗಾಳಿ ಸುದ್ದಿ ಹರಡಿ ಮನೆಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅತಿಕ್ರಮಣಕ್ಕೆ ಮುಂದಾಗಿರುವುದು ಇದು 2ನೇ ಬಾರಿ. ಸುಮಾರು 4-5 ವರ್ಷಗಳ ಹಿಂದೆ ಇದೇ ರೀತಿಯ ಗಾಳಿ ಸುದ್ದಿಗೆ ಗ್ರಾಮ ಪಂಚಾಯಿತಿಯ ಗ್ರಾಮಠಾಣಾ ಸ್ಥಳದಲ್ಲಿ ಅತಿಕ್ರಮಣ ಕಾರರು ನಿವೇಶನಗಳನ್ನು ಅತಿಕ್ರಮಣ ಮಾಡಿಕೊಂಡು ಗುಡಿಸಲು ನಿರ್ಮಿಸಲು ಮುಂದಾದಾಗ ಗ್ರಾಮಪಂಚಾಯಿತಿಯ ಅಧಿಕಾರಿಗಳು ಜೆಸಿಬಿ ಮೂಲಕ ಅತಿಕ್ರಮಣಕಾರರ ಗುಡಿಸಲುಗಳನ್ನು ನೆಲಸಮ ಮಾಡಲಾಗಿತ್ತು.
ತೆರವಿಗೆ ಗ್ರಾಪಂ ಪತ್ರ: ಗ್ರಾಮದ ಸರ್ಕಾರಿ ಸ್ಥಳವನ್ನು ಅತಿಕ್ರಮಣ ಮಾಡಿಕೊಂಡು ರಾತ್ರೋ ರಾತ್ರಿ ಮನೆ ನಿರ್ಮಿಸಿಕೊಂಡಿರುವ ಅತಿಕ್ರಮಣಕಾರರನ್ನು ಕಾಲಿ ಮಾಡಿಸುವಂತೆ ತಾಲೂಕು ದಂಡಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಸಿದ್ದಯ್ಯ ತಿಳಿಸಿದರು. ಕ್ರಮಕ್ಕೆ ತಾಲೂಕು ಆಡಳಿತ: ವಿಷಯ ತಿಳಿದ ತಹಸೀಲ್ದಾರ್ ಜಗದೀಶ್ ಈ ವರದಿ ಪಡೆದದರು. ಬಳಿಕ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ತೆರಳಿ ಅಕ್ರಮ ನಿರ್ಮಾಣ ಕುರಿತಂತೆ ಅರಿವು ಮೂಡಿಸಿದರು. ಈ ಹಿನ್ನೆಲೆಯಲ್ಲಿ ಕೆಲವರು ತಾವು ಗುರುತಿಸಿಕೊಂಡಿದ್ದ ಸ್ಥಳಗಳನ್ನು ತೆರವು ಗೊಳಿಸಿದರು.