ಸೂಳೇಕೆರೆ ಬಳಿ ಚಿರತೆ ಅನುಮಾನಾಸ್ಪದ ಸಾವು
ಅರಸೀಕೆರೆ: ತಾಲೂಕಿನ ಸೂಳೇಕೆರೆ ಗ್ರಾಮದ ಕೆರೆಯ ಬಳಿ ಮೃತ ಚಿರತೆಯೊಂದರ ದೇಹ ಶುಕ್ರವಾರ ಪತ್ತೆಯಾಗಿದೆ. ಕೆರೆಯ ಏರಿಯ ಮೇಲೆ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ರೈತರು ಸ್ಥಳಕ್ಕೆ ಹೋಗಿ ನೋಡಿದಾಗ ಸುಮಾರು 6 ರಿಂದ 7 ವರ್ಷ ಪ್ರಾಯದ ಹೆಣ್ಣು ಚಿರತೆ ಅನುಮಾನಾಸ್ಪದ ರೀತಿಯಲ್ಲಿ ಸತ್ತಿರುವುದು ಕಂಡು ಬಂದಿತು.
ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ದೂರವಾಣಿ ಮೂಲಕ ತಮಗೆ ವಿಷಯ ತಿಳಿಸಿದರು ಎಂದು ಅರಣ್ಯ ವಲಯಾಧಿಕಾರಿ ಜೆ.ಬಿ. ರವಿ ತಿಳಿಸಿದ್ದಾರೆ. ಘಟನೆಯ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿ ಸ್ಥಳದ ಮಹಜರು ಮಾಡಿಕೊಂಡು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಇದು ಮೇಲ್ನೊಟಕ್ಕೆ ಸಹಜ ಸಾವು ಎಂದು ಕಂಡು ಬಂದರೂ ನಿರ್ದಿಷ್ಟ ಕಾರಣ ಇನ್ನೂ ಗೊತ್ತಾಗಿಲ್ಲ. ತಾಲೂಕಿನ ಅಗ್ಗುಂದ ಗ್ರಾಮದ ಪಶುವೈದ್ಯಾಧಿಕಾರಿ ಡಾ. ಹನುಮಂತಪ್ಪ ಅವರು ಮೃತ ಚಿರತೆಯ ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಿದರು. ಬಳಿಕ ಮೃತ್ತ ದೇಹವನ್ನು ಅಂತ್ಯ ಸಂಸ್ಕಾರವನ್ನು ಅರಣ್ಯ ಇಲಾಖೆ ಸಿಬ್ಬಂದಿ ನೆರವೇರಿಸಿತು.