ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉಚಿತ ನೋಟ್ ಪುಸ್ತಕ ವಿತರಣೆ

Srinivasa Murthy VN
Updated On : 15 Jun 2014, 9:08 am

ಮೈಸೂರು ಆದರ್ಶ ಆಟೋ ರಿಕ್ಷಾ ಚಾಲಕರ ವೇದಿಕೆಯು ಜೂ.17ರ ಬೆಳಗ್ಗೆ 10.30ಕ್ಕೆ ಆಟೋ ರಿಕ್ಷಾ ಚಾಲಕರ ಮಕ್ಕಳಿಗೆ ವಿದ್ಯಾಭ್ಯಾಸ ಪೋಷಣೆ ಸಲುವಾಗಿ ನೋಟ್ ಪುಸ್ತಕ ಉಚಿತ ವಿತರಣೆ ಸಮಾರಂಭ ಏರ್ಪಡಿಸಲಾಗಿದೆ. ಹಾಗೆ 2 ಲಕ್ಷ ಪಾಲಿಸಿ ಮಾಡಿಸಿದ ಚಾಲಕರು ಸಮಾರಂಭದ ದಿನದಂದು ಪಾಲಿಸಿಯನ್ನು ಪಡೆದುಕೊಳ್ಳಬಹುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಮೊ. 97423 28926 ಸಂಪರ್ಕಿಸಬಹುದು.

ಸಂತಸದ ಶಿಬಿರ
ಕುವೆಂಪುನಗರದಲ್ಲಿರುವ ದಿ ಆರ್ಟ್ ಆಫ್ ಲೀವಿಂಗ್‌ನಲ್ಲಿ ಜೂ.17 ರಿಂದ 22 ರವರೆಗೆ ಸಂತಸದ ಶಿಬಿರ ಏರ್ಪಡಿಸಿದ್ದು, ಮೊ. 94480 48488 ಸಂಪರ್ಕಿಸಬಹುದು.

ರೈತರಿಗೆ ಕೃಷಿ ಯೋಜನೆಗಳ ಮಾಹಿತಿ ಅಗತ್ಯ: ಸಿದ್ದೇಗೌಡ
ಜಾವಗಲ್: ಜಾವಗಲ್ ಹೋಬಳಿಯ ಗುಡ್ಡದ ಕೆಂಗನಹಳ್ಳಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಭೂಚೇತನ ಯೋಜನೆಯ ಗುಚ್ಚ ಗ್ರಾಮ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಗ್ರಾಮದ ಹಿರಿಯ ರೈತ ಮುಖಂಡ ಸಿದ್ದೇಗೌಡ ಉದ್ಘಾಟಿಸಿದರು.  ನಂತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಯೋಜನೆಯ ಮಾಹಿತಿಯನ್ನು ಪಡೆದುಕೊಂಡು ಕೃಷಿಯಲ್ಲಿ ಆರ್ಥಿಕ ಸ್ವಾವಲಂಬಿಗಳಾಗಬೇಕೆಂದು ತಿಳಿಸಿದರು.  ಕೃಷಿ ಅಧಿಕಾರಿ ಕುಮಾರಸ್ವಾಮಿ ಮಾತನಾಡಿ, ಮಣ್ಣು ಮಾದರಿ ಸಂಗ್ರಹಣೆ, ಮಣ್ಣು ಪರೀಕ್ಷೆಗೆ ಮಣ್ಣುತೆಗೆಯುವ ವಿಧಾನ, ಹಸಿರೆಲೆ ಎರೆಹುಳ್ಳು ಗೊಬ್ಬರ ತಯಾರಿಕೆ ವಿಧಾನ, ಕ್ರಿಮಿನಾಶಕಗಳ ಬಳಕೆ ಸಮಯದಲ್ಲಿ ಆಕಸ್ಮಿಕ ಸೇವನೆಯಾದಲ್ಲಿ ಮಾಡುವ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ರೈತ ಅನುವುಗಾರ ಸಂತೋಷ್ ತಾಂತ್ರಿಕತೆ ಮತ್ತು ಬೀಜೋಪಚಾರದ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ರೈತಮುಖಂಡರಾದ ಶೇಖರಪ್ಪ, ಪುಟ್ಟಪ್ಪ, ತಿಮ್ಮೇಗೌಡ, ಚಿಕ್ಕಣ್ಣ, ರೇವಣಸಿದ್ದೇಶ್ವರ, ಮಲ್ಲಿಕಾಜುನ ಹನುಮಂತೆಗೌಢಯಶ್ರ ಭಾಗವಹಿಸಿದ್ದರು. ಕರಗುಂದ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೈತ ಸಂಘದ ನಿರ್ದೇಶಕ ಸಿದ್ದಮಲ್ಲಪ್ಪ ವಹಿಸಿದ್ದರು. ಗೊಮಟೇಶನಾಯಕ್, ಮಹದೇವಪ್ಪ, ಮಲ್ಲೇಶ್, ಪುನೀತ್ ಮಾತನಾಡಿದರು.

ಸುಶಿಕ್ಷಿತ ಸಮಾಜದಿಂದ ದೇಶದ ಪ್ರಗತಿ ಸಾಧ್ಯ
ಸಕಲೇಶಪುರ:  ಹಿಂದುಳಿದ ವರ್ಗವನ್ನು ಶಿಕ್ಷಣದ ಮೂಲಕ ಮೇಲೆತ್ತುವ ಸಂಕಲ್ಪದೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯನಿರ್ವಹಿಸುತ್ತಿದೆ ಎಂದು ಸಂಘಟನೆ ಮುಖಂಡ ಶಾಪಿ ಬೆಳ್ಳಾರೆ ಹೇಳಿದರು.ಪಟ್ಟಣದ ಕುಶಾಲನಗರ ಬಡಾವಣೆಯ ಎಂ.ಎಸ್. ಹಾಲ್‌ನಲ್ಲಿ ಇತ್ತೀಚೆಗೆ ನಡೆದ ಸ್ಕೂಲ್ ಚಲೋ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಸಮಾಜದಲ್ಲಿ ಹೆಚ್ಚಿರುವ ಅಜ್ಞಾನ, ಅನೈತಿಕತೆಗೆ ಶಿಕ್ಷಣದ ಕೊರತೆಯೇ ಕಾರಣ ಎಂದು ಹೇಳಿದರು.
 ಸುಶಿಕ್ಷಿತ ಸಮಾಜದಿಂದ ಮಾತ್ರ ದೇಶದ ಪ್ರಗತಿ ಸಾದ್ಯ. ಶಿಕ್ಷಣದ ಕೊರತೆ ಕಂಡು ಬರುವಲ್ಲಿ ಮಾತ್ರ ಅಶಾಂತಿ, ಅರಾಜಕತೆ ತಲೆ ಎತ್ತಲಿದೆ. ಆದ್ದರಿಂದ, ಶಿಕ್ಷಣವೆ ಇಂದಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲೆ ಕಲ್ಪನಕೀರ್ತಿ ಮಾತನಾಡಿದರು. ತಾಲೂಕು ಅಧ್ಯಕ್ಷ ಇರ್ಫಾನ್ ಪಾಷ್, ಜಿಲ್ಲಾಧ್ಯಕ್ಷ ಫಿರೋಜಾ ಪಾಷ, ಕಾರ್ಯದರ್ಶಿ ವಸೀಂ ಇತರರು ಇದ್ದರು.

ಶ್ರೀಗಂಧ ಕಳ್ಳ ಸಾಗಣೆ: ಆರೋಪಿ ಸೆರೆ
ಬೇಲೂರು: ಶ್ರೀಗಂಧವನ್ನು ಕದ್ದು ಸಾಗಿಸುತಿದ್ದ ಆರೋಪಿಯನ್ನು ಅರೇಹಳ್ಳಿ ಪೊಲೀಸರು ಬಂಧಿಸಿ  ರು. 25 ಸಾವಿರ ಮೌಲ್ಯದ  ಶ್ರೀಗಂಧವನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ  ಮಲ್ಲಾಪುರ ಗ್ರಾಮದ ಬಳಿ ಶನಿವಾರ ನಡೆದಿದೆ.
ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇಗರ್ಜೆಕೊಪ್ಪಲು ಗ್ರಾಮದ ಪಾಲಾಕ್ಷ ಎಂಬಾತನೇ ಬಂಧಿತ ಆರೋಪಿ. ಈತ  ಬ್ಯಾಗಿನಲ್ಲಿ ಸುಮಾರು 5ಕೆಜಿಗೂ ಹೆಚ್ಚು ಶ್ರೀಗಂಧವನ್ನು ಸಾಗಿಸುತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಆರೋಕಿಯಪ್ಪ ಹಾಗೂ ಸಿಬ್ಬಂದಿ ಆರೋಪಿಯನ್ನು ಹಿಡಿದು, ಆತನ  ಬಳಿಯಿದ್ದ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಮಾನಿಕೆರೆ ಶುದ್ಧೀಕರಣಕ್ಕೆ ಆಗ್ರಹ
ಚನ್ನರಾಯಪಟ್ಟಣ: ಚನ್ನರಾಯಪಟ್ಟಣದ ಅಮಾನಿ ಕೆರೆಯನ್ನು ಶುದ್ಧೀಕರಣಗೊಳಿಸಬೇಕೆಂದು   ಇಲ್ಲಿನ ಸುತ್ತಮುತ್ತಲ ನಿವಾಸಿಗಳು ಆಗ್ರಹಿಸಿದ್ದಾರೆ.
 ಪಟ್ಟಣದ ಅಮಾನಿಕೆರೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ಇತ್ತೀಚಿನ ವರ್ಷಗಳಲ್ಲಿ  ದೊಡ್ಡಕೆರೆಗೆ ತ್ಯಾಜ್ಯ ವಸ್ತುಗಳು, ಯುಜಿಡಿ ನೀರು ಹರಿದು ರೋಗ ರುಜಿನಗಳಿಗೆ ಕಾರಣವಾಗುತ್ತಿದೆ ಎಂದು ಇಲ್ಲಿನ ಸುತ್ತಲ ನಿವಾಸಿಗಳು ತಾಲೂಕು ಉಪ ತಹಸೀಲ್ದಾರ್‌ಗೆ ಮನವಿ ಪತ್ರ ನೀಡಿದರು.
 ಈ ಬಗ್ಗೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಏಳು ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಧರಣಿ ನಡೆಸುವುದಾಗಿ ಸ್ಥಳೀಯರು ಎಚ್ಚರಿದ್ದಾರೆ.  ತಹಸಿಲ್ದಾರ್ ಅವರ  ಪರವಾಗಿ ತಾಲೂಕು ಕಚೇರಿಯ ಮಣಿಯಮ್ಮ ಮನವಿ ಪತ್ರ  ಸ್ವೀಕರಿಸಿದರು.

ಲೋಕಾಯುಕ್ತರ ಭೇಟಿ 23ರಂದು
ಹಾಸನ: ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಭಾಸ್ಕರ್ ರಾವ್ ಅವರು    ಜೂ. 25 ರಂದು  ಹಾಸನಕ್ಕೆ ಆಗಮಿಸಲಿದ್ದಾರೆ.  ಸಾರ್ವಜನಿಕರು ಕರ್ನಾಟಕ ಲೋಕಾಯುಕ್ತ ಕಾಯಿದೆ, 1984ರ ಅಡಿಯಲ್ಲಿ ನಮೂನೆ-01 ಹಾಗೂ ನಮೂನೆ-02ರಲ್ಲಿ ಕ್ರಮಬದ್ಧವಾಗಿ ಸಲ್ಲಿಸುವ ದೂರು ಅರ್ಜಿಗಳನ್ನು ಸ್ವೀಕರಿಸಿ ನೊಂದಾಯಿಸಿ ವಿಚಾರಣೆಗೆ ಒಳಪಡಿಸುವ ಕಾರ್ಯಕ್ರಮವನ್ನು  ಜೂ. 23 ಮತ್ತು 24 ರಂದು ಬೆಳಗ್ಗೆ 10ರಿಂದ ಸಂಜೆಯವರೆಗೆ ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣಾ ಕಚೇರಿಯಲ್ಲಿ ಏರ್ಪಡಿಸಲಾಗಿದೆ.  ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎನ್.ಗೋಪಾಲಕೃಷ್ಣ  ಕೋರಿದ್ದಾರೆ.

ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪಿಸುವ ಭರವಸೆ
ಚನ್ನರಾಯಪಟ್ಟಣ: ಪಟ್ಟಣದ ನವೋದಯ ಕಾಲೇಜು ಆವರಣದಲ್ಲಿ ತಾಲೂಕಿನ ಎಲ್ಲಾ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಕುಟುಂಬ ವರ್ಗದವರಿಗೆ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಿತು.  ಪೊಲೀಸ್ ಇಲಾಖೆ ಹಾಗೂ ಮೈಸೂರಿನ ಪಾರ್ಟೀಸ್ ಕಾವೇರಿ ಹಾರ್ಟ ಹಾಸ್ಪೆಲ್ ಸಂಯುಕ್ತವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಹಾಗೂ ಅವರ ಕುಟುಂಬ ವರ್ಗ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.  ಆರೋಗ್ಯ ತಪಾಸಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಚಾಲನೆ ನೀಡಿ ಪೊಲೀಸರಿಗೆ ಆರೋಗ್ಯ ಮುಖ್ಯವಾಗಿದ್ದು, ಪ್ರತಿ ತಾಲೂಕಿನಲ್ಲಿಯೂ ಆರೋಗ್ಯ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಟ್ರಾಫಿಕ್ ಠಾಣೆ: ಚನ್ನರಾಯಪಟ್ಟಣದಲ್ಲಿ ಸಂಚಾರ ದಟ್ಟಣೆ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ತೆರೆಯುವ ಇಂಗಿತ ವ್ಯಕ್ತಪಡಿಸಿದ ಅವರು,  ಪಟ್ಟಣದಲ್ಲಿ ಸಂಚರಿಸುವ ಆಟೋಗಳಲ್ಲಿ ಚಾಲಕರು ತಮ್ಮ ಚಾಲನಾ ಪರವಾನಗಿ ಸೇರಿದಂತೆ ಇತರೆ ವಿವರಗಳುಳ್ಳ ಕಾರ್ಡನ್ನು ಅಳವಡಿಸಲು ಸೂಚಿಸಲಾಗಿದ್ದು, 200 ಆಟೋಗಳಿಗೆ ಅಳವಡಿಸಲಾಗಿದೆ ಎಂದರು.
ಟ್ರಾಫಿಕ್ ವಾರ್ಡನ್ ನೇಮಕ: ರಸ್ತೆ ಸುರಕ್ಷತೆ ಹಾಗೂ ಚಾಲನೆ ಕುರಿತಾಗಿ ಮಾಹಿತಿ ನೀಡುವ ಸಲುವಾಗಿ ತಮ್ಮ ಇಲಾಖೆ ವತಿಯಿಂದ ಟ್ರಾಫಿಕ್ ವಾರ್ಡನ್‌ಗಳನ್ನು ನೇಮಿಸಿ ಅವರುಗಳು ಶಾಲಾ ಕಾಲೇಜುಗಳಿಗೆ ತೆರಳಿ ಸಂಚಾರದ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.  ಹೊಳೆನರಸೀಪುರ ಎಎಸ್ಪಿ ವಿನಾಯಕ ರಾವ್ ಪಾಟೀಲ್, ಸರ್ಕಲ್ ಇನ್ಸ್‌ಪೆಕ್ಟರ್ ಶೈಲೇಂದ್ರ, ಸಬ್ ಇನ್ಸ್‌ಪೆಕ್ಟರ್ ರೇಖಾಬಾಯಿ ಇದ್ದರು.

ಸಂಭ್ರಮದ ಗಡಿಕಾರ ಹುಣ್ಣಿಮೆ
ಜಾವಗಲ್: ಹೋಬಳಿಯ ನಾನಾ ಕಡೆ ಇತ್ತೀಚೆಗೆ ಗಡಿಕಾರ ಹುಣ್ಣಿಮೆ ಸಂಭ್ರಮದಿಂದ ನಡೆಯಿತು. ಜಾವಗಲ್ ಮತ್ತು ನೇರ್ಲಿಗೆ ಗ್ರಾಮಗಳಲ್ಲಿ ಕೃಷಿಕರು ಕೃಷಿ ಚಟುವಟಿಕೆಗಳಿಗೆ ವಿರಾಮ ಕೊಟ್ಟುದನಕರುಗಳನ್ನು ತೊಳೆದು ಅಲಂಕರಿಸಿದರು. ಬಸವನಿಗೆ ಸಿಹಿ ತಳಿಗೆಯ ಎಡೆಕೊಟ್ಟು ಮಂಗಳಾರತಿ ಮಾಡಿ ಸಿಹಿ ತಿಂದು ಸಂಭ್ರಮಿಸಿದರು. ರಾತ್ರಿ ಊರಿನ ಕರಿಗಲ್ಲಿಗೆ ಪೂಜೆ ಸಲ್ಲಿಸಿ ಬೇಟೆಸೊಪ್ಪು ಬೇವಿನಸೊಪ್ಪು ಮತ್ತು ಹೊಂಬಳ್ಳಿಯಿಂದ ತಯಾರಿಸಿದ ಕರಿಯನ್ನು ಪೂಜಿಸಿ ಗ್ರಾಮದ ಕೆಲವು ಬೀದಿಗಳಲ್ಲಿ ಎಳೆದರು. ನವಧಾನ್ಯಗಳನ್ನಿಟ್ಟು ಪೂಜಿಸಿದರು.

ಪರಿಸರ ಜಾಗೃತಿ ಕಾರ್ಯಕ್ರಮ
ಹಾಸನ: ನಗರದ ಎಂ.ಕೃಷ್ಣಾ ಅಂಧಮಕ್ಕಳ ಶಾಲೆಯಲ್ಲಿ ಭಾನುವಾರ ಸ್ಪಂಧನ ವೇದಿಕೆ ಮತ್ತು ವೇದ ಭಾರತಿಯ ಸಂಯುಕ್ತಾಶ್ರಯದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮದ ನಿಮಿತ್ತ ಪರಿಸರ ಜಾಗೃತಿ ಯಜ್ಞ ಮತ್ತು ಗಿಡ ನೆಡುವ ಕಾರ್ಯಕ್ರಮ ನಡೆಯಿತು.  ವೇದ ಭಾರತಿಯ ಸಂಯೋಜಕ ಹರಿಹರಪುರ ಶ್ರೀಧರ್ ಮಾತನಾಡಿ, ಅಗ್ನಿ ಹೋತ್ರದ ಮಂತ್ರಗಳಿಂದ ಅಂತರಂಗ ಶುದ್ಧಿಯಾದರೆ ಅಗ್ನಿಹೋತ್ರದಲ್ಲಿ ಬಳಸುವ ತುಪ್ಪ, ಸಮಿತ್ತು ಮತ್ತು ಗಿಡ ಮೂಲಿಕೆಗಳು ಅಗ್ನಿಯಲ್ಲಿ ದಹನವಾಗಿ ಉಂಟಾಗುವ ರಾಸಾಯನಿಕ ಕ್ರಿಯೆಯಿಂದ ಪರಿಸರ ಶುದ್ಧವಾಗುವುದೆಂದು ತಿಳಿಸಿದರು.  ಪ್ರೊ.ಮಲ್ಲೇಶಗೌಡರು ಅಧ್ಯಕ್ಷತೆ ವಹಿಸಿದ್ದರು. ವೇದಭಾರತಿಯ ಕಾರ್ಯದರ್ಶಿ ಕಲಾವತಿ, ಶಾಲೆಯ ಆದಳಿತಾಧಿಕಾರಿ ಪ್ರೊ. ಜಯರಾಮ್ ಹಾಗೂ ವೇದಭಾರತಿ ಮತ್ತು ಸ್ಪಂದನ ವೇದಿಕೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement