ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚನ್ನಕೇಶವಸ್ವಾಮಿ ದೇಗುಲದಲ್ಲಿ ಭಕ್ತರ ಪರದಾಟ

Srinivasa Murthy VN
Updated On : 15 Jun 2014, 9:06 am

ಎ. ರಾಘವೇಂದ್ರ ಹೊಳ್ಳ.
ಬೇಲೂರು: ವಿಶ್ವ ವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ದೇಗುಲದಲ್ಲಿ ಮುಜರಾಯಿ ಇಲಾಖೆಯ ಆಡಳಿತದಲ್ಲಿ ಹಿಡಿತವಿಲ್ಲದೆ, ಹೇಳುವವರು, ಕೇಳುವವರು ಯಾರು ಇಲ್ಲದಂತಾಗಿದೆ. ಇದರಿಂದ ಪೂಜೆ ಪುನಸ್ಕಾರ ನೆರವೇರಿಸಲು ಬರುವ ಭಕ್ತರು ನರಕ ಯಾತನೆ ಅನುಭವಿಸುಂತಾಗಿದೆ.
  ಚೆಲುವ ಚೆನ್ನಿಗನ ಅಲಂಕಾರ, ಅಭಿಷೇಕದ ಜೊತೆಗೆ ಮನಸಿಗೆ ಶಾಂತಿ, ನೆಮ್ಮದಿಯನ್ನು ಪಡೆಯಲು ದೇಶದ ನಾನಾ ಮೂಲೆಗಳಿಂದ ಭಕ್ತರು ಬರುತ್ತಾರೆ. ಆದರೆ ದೇಗುಲದಲ್ಲಿ ಇರುವ ಅವ್ಯವಸ್ಥೆಗಳು ಭಕ್ತರ ನೆಮ್ಮದಿ ಹಾಳು ಮಾಡುವುದರ ಜೊತೆಗೆ ದೇಗುಲದ ಸಹವಾಸ ಸಾಕು ಎನ್ನುವಸ್ಟು ಬೇಸರವಾಗುತ್ತದೆ ಎಂಬುದಾಗಿ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರಲ್ಲದೆ, ನಾನಾ ಹರಕೆಯನ್ನು ತೀರಿಸಲು ಬರುವ ಭಕ್ತರಿಗೆ ಸರಿಯಾದ ವ್ಯವಸ್ಥೆ ಇಲ್ಲದೆ ಮುಜುರಾಯಿ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ನಿಗದಿತ ಸಮಯಕ್ಕೆ ಮುನ್ನವೇ ಪೂಜೆ: ರಾಮಕೃಷ್ಣ ಹಾಗು ಸತ್ಯ ಎಂಬುವರು ಶನಿವಾರ ತಮ್ಮ 20 ಮಂದಿ ಕುಟುಂಬದ ಸದಸ್ಯರೊಂದಿಗೆ ಚೆನ್ನಕೇಶವನ ಅಭಿಷೇಕಕ್ಕಾಗಿ ಬೆಂಗಳೂರಿನಿಂದ ಬಂದಿದ್ದರು. 11 ಗಂಟೆಗೆ ಅಭಿಷೇಕ ಇರುವುದಾಗಿ ಇವರಿಗೆ ತಿಳಿಸಲಾಗಿತ್ತು. 10.30 ಕ್ಕೆ ಸರಿಯಾಗಿ ದೇಗುಲಕ್ಕೆ ಕುಟುಂಬ ಸಮೇತರಾಗಿ ಇವರುಗಳು ಬಂದಾಗ  ಚೆನ್ನಕೇಶವಸ್ವಾಮಿ ಮೂರ್ತಿಗೆ ಅಭಿಷೇಕ ಮುಗಿದಿತ್ತು.
 ತಮಗೆ 11 ಗಂಟೆಗೆ ಬನ್ನಿ ಎಂದು ಹೇಳಿ 9 ಗಂಟೆಗೆ ಹೇಗೆ ಪೂಜೆ ಮುಗಿಸಿದರು ಎಂಬುದು ರಾಮಕೃಷ್ಣ ಹಾಗು ಸತ್ಯ ಅವರ ಪ್ರಶ್ನೆಯಾಗಿತ್ತು. ಅಲ್ಲದೆ ಅವರು ತೀವ್ರ ಆಕ್ರೋಶಗೊಂಡು ಅರ್ಚಕರ ವಿರುದ್ದ ಹರಿಹಾಯ್ದರು. ನಾವು ಇಲ್ಲದಿದ್ದಾಗ ನೀವು ಹೇಗೆ ಅಭಿಷೇಕ ಮಾಡಿದಿರಿ ಎಂದು ತರಾಟೆತೆಗೆದುಕೊಂಡರು. ಇದಕ್ಕೆ ಅರ್ಚಕರು ದೇಗುಲ ಆಡಳಿತ ತಿಳಿಸಿದ ಸಮಯಕ್ಕೆ ಅಭಿಷೇಕ ಮಾಡಿದ್ದಾಗಿ ಸಮರ್ಥಿಸಿಕೊಂಡರು.
ಅಧಿಕಾರಿಯ ನಿರ್ಲಕ್ಷ್ಯೆ: ಇದರಿಂದ ರೊಚ್ಚಿಗೆದ್ದ ರಾಮಕೃಷ್ಣ ಹಾಗು ಸತ್ಯ ಹಾಗು ಕುಟುಂಬದವರು ದೇಗುಲ ಕಚೇರಿಯ ಕಾರ್ಯನಿರ್ವಹಣಾಧಿಕಾರಿಯನ್ನು ಪ್ರಶ್ನಿಸಲು ಮುಂದಾದರು. ದೇಗುಲ ಇಓ ಗುರುಪ್ರಸಾದ್ ರಜೆಯ ಮೇಲೆ ಇರುವುದಾಗಿ ಮತ್ತೊಬ್ಬ ಅಧಿಕಾರಿ ಮಂಜುನಾಥ್ ತಿಳಿಸಿದರಲ್ಲದೆ, ತಮ್ಮ ಹತ್ತಿರ ಏನೂ ಹೇಳಬೇಡಿ, ನಿಮ್ಮ ವ್ಯವಹಾರ ಏನಿದ್ದರೂ ಇಓ ಹತ್ತಿರ ಹೇಳಿ ಎಂದು ಉಡಾಫೆ ಉತ್ತರ ನೀಡಿದರು.
 ಇದರಿಂದ ಇನ್ನೂ ಕುಪಿತರಾದ ಭಕ್ತರು, ಅಭಿಷೇಕಕ್ಕಾಗಿ ಸಾವಿರಾರು ರುಪಾಯಿ ಕೊಟ್ಟು ಮುಂಗಡವಾಗಿ ಕಾಯ್ದಿರಿಸುತ್ತೇವೆ. ನಮಗೆ ತಿಳಿಸಿದ ದಿನದಂದು ಸರಿಯಾದ ಸಮಯಕ್ಕೆ ಬಂದರೂ ಇಲ್ಲಿ ಕೇಳುವವರೇ ಗತಿಯಿಲ್ಲ ಎಂದು ಆಕ್ರೋಶ ವ್ಯಕ್ತಡಿಸಿದರು.
ರಜೆ..ರಜೆ..: ಇಓ ರಜೆ ಮೇಲೆ ತೆರಳಿರುವ ಬಗ್ಗೆ ಹಾಜರಿ ಪುಸ್ತಕ ಪರಿಶೀಲಿಸಿದಾಗ ಗೈರು ಹಾಜರಿ ಜಾಗ ಖಾಲಿ ಬಿಟ್ಟಿದ್ದು ಕಂಡುಬಂತು. ಈ ಬಗ್ಗೆ ಕೋಪ ವ್ಯಕ್ತಪಡಿಸಿದ ಸ್ಥಳಿಯ ಭಕ್ತರು, 1 ವರ್ಷದ ಹಿಂದೆ ದೇಗುಲಕ್ಕೆ ಇಓ ವರ್ಗವಾಗಿ ಬಂದಿದ್ದು, ಬೆರಳೆಣಿಕೆ ದಿನದಷ್ಟು ಮಾತ್ರ ಕೆಲಸ ಮಾಡಿದ್ದಾರೆ. ಯಾವಾಗಲೂ ರಜೆ ಮೇಲಿರುತ್ತಾರೆ. ಆದರೆ ಹಾಜರಿ ಪುಸ್ತಕದಲ್ಲಿ ಮಾತ್ರ ಹಾಜರಿ ಹಾಕಿರುತ್ತಾರೆ ಎದು ದೂರಿದರು.  ಇವರು ಬಂದ ಮೇಲೆ ಇಲ್ಲಿನ ಒಳಾಂಗಣ ಹಾಗು ಹೊರಾಂಗಣ ನೌಕರರಿಗೆ ಲಂಗು ಲಗಾಮು ಇಲ್ಲದಂತಾಗಿದೆ. ಭಕ್ತರಿಗೆ ಸರಿಯಾದ ಸೇವೆ ದೊರಕದಂತಾಗಿದೆ. ಈ ಬಗ್ಗೆ ಮುಖ್ಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಇತ್ತ ಗಮನ ಹರಿಸಲಿ ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement