ಮಣ್ಣು ಪರೀಕ್ಷೆ ಬಳಿಕ ಗೊಬ್ಬರ ಬಳಸಿ: ರೈತರಿಗೆ ಸಲಹೆ
ಅರಸೀಕೆರೆ: ಇತ್ತೀಚಿನ ದಿನಗಳಲ್ಲಿ ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಕಂಡುಬಂದಿದ್ದು, ಮಣ್ಣು ಪರೀಕ್ಷೆ ಮಾಡಿಸಿ ಗೊಬ್ಬರ ಬಳಸುವಂತೆ ಸಹಾಯಕ ಕೃಷಿ ಅಧಿಕಾರಿ ಮಿಥುನ್ ತಿಳಿಸಿದರು. ತಾಲೂಕಿನ ಬಾಣಾವರ ಹೋಬಳಿ ಬೆಟ್ಟದಪುರ ಗ್ರಾಮದಲ್ಲಿ ಭೂಚೇತನ ಯೋಜನೆಯಡಿ ಗುಚ್ಚಗ್ರಾಮ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರು ಸಾವಯವ ಕೃಷಿಯತ್ತ ಗಮನಹರಿಸಬೇಕಾಗಿದೆ. ಒಂದೇ ಜಾತಿಯ ಬೆಳೆಯನ್ನು ಬೆಳೆಯುವ ಬದಲು ಕೃಷಿಯಲ್ಲಿ ಮುಖ್ಯವಾಗಿ ಆಹಾರ ಧಾನ್ಯಗಳು ಎಣ್ಣೆ ಕಾಳು ಬೆಳೆಗಳು ಬಹುವಾರ್ಷಿಕ ಬೆಳೆಗಳು ಬೆಳೆಯುವುದನ್ನು ರೂಡಿಸಿಕೊಳ್ಳುವಂತೆ ತಿಳಿಸಿದರು.
ಮಣ್ಣಿನ ಫಲವತ್ತತೆ ಕಾಪಾಡಿ: ರೈತ ಅನುವುಗಾರ ತೇಜ್‌ಪಾಲ್ ಮಾತನಾಡಿ ರೈತರು ತಮ್ಮ ಜಮೀನುಗಳಲ್ಲಿ ಮುಖ್ಯವಾಗಿ ಮಣ್ಣಿನ ಸಂರಕ್ಷಣೆ ಮತ್ತು ನೀರಿನ ಸಂರಕ್ಷಣೆ ಬಹಳ ಮುಖ್ಯವಾಗಿದ್ದು ಸಾವಿರಾರು ವರ್ಷಗಳಿಂದ ರೂಪುಗೊಂಡ ಇಂತಹಾ ಫಲವತ್ತಾದ ಮಣ್ಣು ಮಳೆಯಲ್ಲಿ ಕೊಚ್ಚಿಹೋಗದಂತೆ ತಡೆಯಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ಗ್ರಾಮ ಪಂಚಾಯ್ತಿ ಸದಸ್ಯ ರಂಗೇಗೌಡ ನೆರವೇರಿಸಿದರು.