ಸ್ವಚ್ಛತೆ ಕಾಪಾಡಿ ರೋಗದಿಂದ ದೂರವಿರಿ: ಡಾ. ಹಿರಣ್ಣಯ್ಯ
ಅರಕಲಗೂಡು: ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ರೋಗರುಜಿನಗಳಿಂದ ದೂರವಿರಬಹುದು ಎಂದು ಹಾಸನ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ.ಹಿರಣಯ್ಯ ಹೇಳಿದರು.
ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ವಾರ್ತಾ ಇಲಾಖೆ, ಶ್ರೀಗಂಧ ಸೇವಾಸಂಸ್ಥೆ, ಶಿಶು ಅಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಬಸವಾಪಟ್ಟಣ, ಸಿಎಂ.ಎಸ್ಎಸ್ ಸೇವಾ ಸಂಸ್ಥೆ ಆಶ್ರಯದಲ್ಲಿ ತಾಲೂಕಿನ ಬಸವಾಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟಸೋಗೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಮಲೇರಿಯಾ ನಿಯಂತ್ರಣ ಮಾಸಾಚರಣೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚಿಕಿತ್ಸೆ ಪಡೆಯಿರಿ: ಬಸವಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿನೋದ್ ಜೈನ್ ಅವರು ಮಾತನಾಡಿ, ಮಲೇರಿಯಾ ರೋಗವು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಹರಡುತ್ತದೆ. ಯಾರಿಗಾದರೂ ವಿಪರೀತ ಜ್ವರ, ಮೈ ಕೈ ನೋವು ಕಂಡುಬಂದಲ್ಲಿ ತಕ್ಷಣ ವೈದ್ಯರಲ್ಲಿ ಪರೀಕ್ಷಿಸಿ ಚಿಕಿತ್ಸೆ ಪಡೆಯುವುದು ಸೂಕ್ತ ಎಂದು ಹೇಳಿದರು.
ಆರೋಗ್ಯ ಇಲಾಖೆಯ ಅಧಿಕಾರಿಯಾದ ರಾಜೇಶ್ ಕುಲಕರ್ಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಬೀರ್ ಅಹ್ಮದ್, ಗ್ರಾಮ ಪಂಚಾಯ್ತಿ ಸದಸ್ಯ ಜಯ್ಕುಮಾರ್, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಜಾನಕಿ ರಾಣಿ, ಗ್ರಾಪಂ ಕಾರ್ಯದರ್ಶಿ ಮಂಜುನಾಥ್, ಎಸ್.ಡಿ.ಎಂ.ಸಿ ಅಧ್ಯಕ್ಷ ಜಯಣ್ಣ, ಶಾಲಾ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ನಾನಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಾಲಾಯಿತು.
ಮಾನದಂಡ ಸಡಿಲಿಕೆಗೆ ಖಂಡನೆ
ಹಾಸನ: ಅಲ್ಪಸಂಖ್ಯಾತ ಶಾಲೆಗಳ ಮಾನದಂಡವನ್ನು ಸಡಿಲಿಸಿ ಶೇ. 75 ರಿಂದ ಶೇ.25 ಕ್ಕೆ ಇಳಿಸಿರುವುದು ಮತ್ತು ಆರ್ಟಿಇ ಹಂತ ಹಂತವಾಗಿ ದುರ್ಬಲಗೊಳಿಸುತ್ತಿರುವುದನ್ನು ಹಾಸನ ಶಿಕ್ಷಣ ಹಕ್ಕು ಸಮಿತಿ ಖಂಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದು. ಈ ತೀರ್ಮಾನದ ಅನ್ವಯ ರಾಜ್ಯದ ಕೆಲ ಶಿಕ್ಷಣ ಸಂಸ್ಥೆಗಳು ಆರ್ಟಿಇ ಕಾಯ್ದೆ ಅಡಿ ಪರಿಸ್ಥಿತಿಯಲ್ಲಿರುವ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಶೇ. 25 ರಷ್ಟು ಮೀಸಲಿಡಬೇಕಾದ ನಿಯಮದಿಂದ ಹೊರ ಉಳಿಯಲಿದ್ದು ಬಡಮಕ್ಕಳಿಗೆ ಅನ್ಯಾಯವಾಗಲಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ಜಿ.ಗೋಪಾಲಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ವಿರೋಧಿ: ಒಂದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ನಮ್ಮ ಭಾಷೆ ಅಥವಾ ಧರ್ಮದ ಒಳಿತಿಗಾಗಿ ಶ್ರಮಿಸಲು ಸ್ಥಾಪಿತಗೊಂಡಿವೆ. ಅಂತಹ ಸಂಸ್ಥೆಗಳಲ್ಲಿ ಶೇ. 75 ರಷ್ಟು ಅದೇ ಧರ್ಮ ಅಥವಾ ಭಾಷೆಗೆ ಸೇರಿರಬೇಕು ಎಂಬುದು ಅವೈಜ್ಞಾನಿಕ. ಆದರೆ ಏಕಾಏಕಿ ಶೇ. 25 ಕ್ಕೆ ಇಳಿಸಿರುವುದು ಖಂಡನಾರ್ಹ ಎಂದಿದ್ದಾರೆ. ಶೇ. 25 ಕ್ಕೆ ಇಳಿಸಿದರೂ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಆರ್ಟಿಇ ಕಾಯಿದೆಯಿಂದ ಹೊರಗಿಡದೆ ತಮ್ಮದೇ ಅಲ್ಪಸಂಖ್ಯಾತ ದುರ್ಬಲ ವರ್ಗದ ಮಕ್ಕಳಿಗೆ ಪ್ರವೇಶ ನೀಡುವಂತೆ ಕಾನೂನು ರೂಪಿಸುವಂತೆ ಒತ್ತಾಯಿಸಿದ್ದಾರೆ.