ಕಚೇರಿಗೆ ಬೀಗ ಜಡಿದು, ಪಿಡಿಒಗೆ ದಿಗ್ಬಂಧನ
ಹಾಸನ: ಸಮರ್ಪಕ ಕುಡಿಯುವ ನೀರು ಪೂರೈಸದ ಕಾರಣ ತಾಲೂಕಿನ ಹರಳಹಳ್ಳಿ ಗ್ರಾಮಸ್ಥರು ಸೋಮವಾರ ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಪಿಡಿಓ ಅಧಿಕಾರಿಗೆ ದಿಗ್ಬಂಧನ ಹಾಕಿ ಪ್ರತಿಭಟಿಸಿದರು.
ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಮುಂದೆ ಜಮಾಯಿಸಿ ಕಚೇರಿಗೆ ಬೀಗ ಹಾಕಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರು ಬಾರದೆ ಗ್ರಾಮಸ್ಥರು ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ನೀರಿಲ್ಲದೆ ಗ್ರಾಮದಲ್ಲಿ ತೊಂದರೆ ಉಂಟಾಗಿದ್ದು, ದೂರದ ಸ್ಥಳದಿಂದ ನೀರನ್ನು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಷ್ಟಕ್ಕೆ ಸ್ಪಂದಿಸುತ್ತಿಲ್ಲ: ಇರುವಂತಹ ಬೋರ್ವೆಲ್ಗಳಲ್ಲಿ ನೀರು ಬರುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯ್ತಿಗೆ ಬಂದು ಕೇಳಿದರೇ ಮೋಟರ್ ದುರಸ್ತಿಯಲ್ಲಿದೆ ಎಂಬ ಕುಂಟು ನೆಪ ಹೇಳಿ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ಗ್ರಾಪಂ ಸದಸ್ಯರು ಕೇವಲ ಸಭೆಯಲ್ಲಿ ಪಾಲ್ಗೊಂಡು ಹೋಗುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಮ ಪಂಚಾಯ್ತಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದ ನಂತರ, ಅಧಿಕಾರಿಗಳು ಒಂದು ತಾಸಿನೊಳಗೆ ನೀರು ಕೊಡುವ ಭರವಸೆ ನೀಡಿದ ಬಳಿಕ ಕಚೇರಿಯ ಬೀಗ ತೆಗೆದ ಗ್ರಾಮಸ್ಥರು, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಅನಂತಕುಮಾರ್, ಹರೀಶ್, ಅಂಗಡಿ ರಾಜಣ್ಣ, ಶಾಮಿಯಾನ ರಂಗಣ್ಣ, ಕೇಬಲಲ್ಪರಮೇಶ್, ಬಲರಾಮ್, ಸರೋಜಮ್ಮ ಹಾಗೂ ಇತರರು ಇದ್ದರು.