'ಪ್ರತಿ ಗ್ರಾಮದಲ್ಲೂ ಆರೋಗ್ಯ ಶಿಬಿರ ಏರ್ಪಡಿಸಿ'
ಅರಸೀಕೆರೆ: ಪ್ರತಿಯೊಬ್ಬ ಮನುಷ್ಯನು ಸಮಾಜದಲ್ಲಿನ ದುರ್ಬಲರ ಶ್ರೇಯಸ್ಸಿಗಾಗಿ ಸಮಾಜ ಸೇವಾ ಕಾರ್ಯಗಳಲ್ಲಿ ಮುಂದಾಗುವುದು ಮನುಕುಲದ ಧರ್ಮವಾಗಿದೆ ಎಂದು ತಾಲೂಕಿನ ಬಾಣಾವರ ಗ್ರಾಪಂ ಸದಸ್ಯ ಜಿ.ಕೆ. ಸತೀಶ್ ತಿಳಿಸಿದರು.
ತಾಲೂಕಿನ ಬಾಣಾವರ ಗ್ರಾಮದ ವಾಸವಿ ಕ್ಲಬ್, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ, ಹಾಗೂ ಸಿಂಡಿಕೇಟ್ ಬ್ಯಾಂಕ್ ಸಹಯೋಗದಲ್ಲಿ ಇಲ್ಲಿನ ವಾಸವಿ ಕಲ್ಯಾಣ ಮಂದಿರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಉತ್ತಮ ಆರೋಗ್ಯಕರ ಹವ್ಯಾಸಗಳೊಂದಿಗೆ ತಮ್ಮ ಜೀವನ ಶೈಲಿಯನ್ನು ಬೆಳೆಸಿಕೊಳ್ಳುವುದು ಸೂಕ್ತ ಎಂದರು.
ಗ್ರಾಮಗಳಲ್ಲಿ ಶಿಬಿರ ನಡೆಸಿ: ವಾಸವಿ ಕ್ಲಬ್ ಅಧ್ಯಕ್ಷ ಪಿ.ಜಿ. ಶ್ರೀಕಾಂತ್ ಮಾತನಾಡಿ, ಸಮಾಜ ಸೇವಾ ಮನೋಭಾವನೆಯುಳ್ಳ ತಜ್ಞ ವೈದ್ಯರು ಮತ್ತು ಸ್ವಯಂಸೇವಾ ಸಂಘ ಸಂಸ್ಥೆಗಳು ಗ್ರಾಮೀಣಾ ಭಾಗಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಜನರಿಗೆ ಅನುಕೂಲಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಸತೀಶ್, ಸುರೇಶ್ ಮಹಾಲಿಂಗಪ್ಪ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.
ಸಹಕಾರ ಬ್ಯಾಂಕ್ ಶಾಖೆ ಉದ್ಘಾಟನೆ 19ಕ್ಕೆ
ಹೊಳೆನರಸೀಪುರ: ಪಟ್ಟಣದ ಶ್ರೀ ವಾಸವಾಂಬ ಕೋ-ಆಪರೇಟಿವ್ ಬ್ಯಾಂಕಿನ ಶತಮಾನೋತ್ಸವ ಸವಿನೆನಪಿಗಾಗಿ ಅರಕಲಗೂಡಿನಲ್ಲಿ ನೂತನವಾಗಿ ಆರಂಭಿಸಲಾಗುತ್ತಿರುವ ಬ್ಯಾಂಕ್ ಶಾಖೆಯ ಉದ್ಘಾಟನಾ ಸಮಾರಂಭವು ಜೂ.19ರಂದು ನಡೆಯಲಿದೆ ಎಂದು ಶ್ರೀ ವಾಸವಾಂಬ ಕೋ-ಆಪರೇಟಿವ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಎಸ್.ಆರ್.ಮೂರ್ತಿ ತಿಳಿಸಿದ್ದಾರೆ.
ಬ್ಯಾಂಕಿನ ನೂತನ ಶಾಖೆಯು ಅರಕಲಗೂಡಿನ ಪೇಟೆ ಬೀದಿಯಲ್ಲಿರುವ ಸಪ್ತಗಿರಿ ಟವರ್ಸ್‌ನ ಮೊದಲನೇ ಮಹಡಿಯಲ್ಲಿ ಆರಂಭಗೊಳ್ಳಲಿದ್ದು, ಶಾಖೆಯ ಚಾಲನೆಯನ್ನು ಬೆಂಗಳೂರು ಆರ್‌ಬಿಐನ ಸಹಾಯಕ ವ್ಯವಸ್ಥಾಪಕ ಆದ ಟಿ.ಎನ್.ಅಶೋಕ್ ನೆರವೇರಿಸುವರು. ಗಣಕಯಂತ್ರಗಳಿಗೆ ಹಾಸನ ವಿಭಾಗದ ಸಹಕಾರ ಸಂಘಗಳ ಉಪ-ನಿಬಂಧಕ ಎಚ್.ಪಿ.ಕುಮಾರ್ ಚಾಲನೆ ನೀಡುವರು. ಕೌಂಟರ್‌ಗಳಿಗೆ ಪಿ.ಎನ್.ಶಾಂತಕುಮಾರ್ ಚಾಲನೆ ನೀಡುವರು. ಶಾಖೆಯಲ್ಲಿನ ಭದ್ರತಾ ಕೊಠಡಿಗೆ ಕೆ.ಎನ್.ಅರುಣಣ್ಚಾಲನೆ ನೀಡುವರು. ಎ.ಆರ್.ರವಿಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.