ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೌಬೌ ಹಾವಳಿ: ಸದಸ್ಯರ ಗರಂ

Srinivasa Murthy VN
Updated On : 16 Jun 2014, 9:48 am

ಹಾಸನ: ನಗರದಲ್ಲಿ ಉಲ್ಬಣಿಸಿರುವ ಬೀದಿ ನಾಯಿಗಳ ಉಪಳಕ್ಕೆ ಕಡಿವಾಣ ಬೀಳುವ ಲಕ್ಷಣಗಳೇ ಕಾಣುತ್ತಿಲ್ಲ.
ಏಕೆಂದರೆ ನಗರ ವ್ಯಾಪ್ತಿಯಲ್ಲಿ ಇರುವ ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನೀಡುವ ಹಾಗೂ ರೇಬಿಸ್ ಚುಚ್ಚು ಮದ್ದು ಹಾಕಲು ಜಿಲ್ಲಾಡಳಿತ ಬೆಂಗಳೂರು ಮೂಲದ ಸರ್ವೋದಯ ಸೇವಾಭಾವಿ ಸಂಸ್ಥೆಗೆ ನೀಡಿದ್ದ ಟೆಂಡರ್ ಅನ್ನು ರದ್ದು ಪಡಿಸುವಂತೆ ನಗರಸಭೆ ಸದಸ್ಯರು ಸೋಮವಾರ ನಗರಸಭೆಯ ಸಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.
ಅಧ್ಯಕ್ಷೆ ಭರವಸೆ: ಇದಕ್ಕೆ ಪ್ರತಿಕ್ರಿಯಿಸಿ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಈ ಬಗ್ಗೆ ಸೂಕ್ತ ತೀರ್ಮಾನಕೈಗೊಳ್ಳುವಾಗಿ ಭರವಸೆ ನೀಡಿದರು.
ನಗರಸಭೆ ಸದಸ್ಯ ಯಶ್ವಂತ್ ಮಾತನಾಡಿ, ಪ್ರಸ್ತುತ ನಾಯಿಗಳನ್ನು ಹಿಡಿದು ಸಂತಾಹನ ಹರಣಚಿಕಿತ್ಸೆಗಾಗಿ ರು. 60 ಲಕ್ಷ ಮೀಸಲಿಡಲಾಗಿದೆ. ಈ ಹಿಂದೆಯೂ ಎರಡುವರೆ ಸಾವಿರ ನಾಯಿಗಳಿಗೆ ಈ ಚಿಕಿತ್ಸೆ ನೀಡಲಾಗಿದೆ. ಆದರೆ ಇದರಿಂದ ಯಾವ ಪ್ರಯೋಜನವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ದುಬಾರಿ ಟೆಂಡರ್: ಸದಸ್ಯ ಗೋಪಾಲ್ ಮಾತನಾಡಿ, ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆಗಾಗಿ ರು. 60 ಲಕ್ಷ ಮೀಸಲಿಟ್ಟಿರುವುದಕ್ಕೆ ನಮ್ಮ ಒಪ್ಪಿಗೆ ಇಲ್ಲ ಹಾಗೂ ಇದು ದುಬಾರಿಯಾಗಿದೆ. ಕೆ.ಆರ್.ನಗರದಲ್ಲಿ ಒಬ್ಬರು 300 ರು.ನಿಂದ 350 ರು.ಗಳಿಗೆ ಈ ಕೆಲಸವನ್ನು ನಿರ್ವಹಿಸುವವರಿದ್ದಾರೆ. ಆದ್ದರಿಂದ ಕೂಡಲೇ ಟೆಂಡರ್ ರದ್ದುಪಡಿಸಿ, ಕೆ.ಆರ್.ನಗರದವರನ್ನು ಸಂಪರ್ಕಿಸಬೇಕು ಎಂದರು.
ಸದಸ್ಯ ಸುರೇಶ್ ಕುಮಾರ್ ಮಾತನಾಡಿ, ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಟೆಂಡರ್ ಮಾಹಿತಿ ಸರಿಯಾಗಿ ನೀಡಿಲ್ಲ. ಪ್ರತಿ ನಾಯಿಗೆ ರು. 950 ಟೆಂಡರ್ ನೀಡಲು ಅನುಮೋದಿಸಿದ್ದೀರಿ. ಈ ಹಿಂದೆ 2500 ನಾಯಿಗಳಿದ್ದದ್ದು, ಈಗ 6 ಸಾವಿರ ನಾಯಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನು ನಂಬುವುದಾದರೂ ಹೇಗೆ. ಆದ್ದರಿಂದ ಈ ಟೆಂಡರ್ ರದ್ದುಪಡಿಸಬೇಕು ಎಂದರು.
ರು. 72 ಕೋಟಿ ಬಜೆಟ್: ಈ ಬಾರಿ ನಗರಸಭೆಯ ಆಯವ್ಯಯವನ್ನು 132 ಕೋಟಿ ಬೃಹತ್ ಬಜೆಟ್ ಮಂಡಿಸಿದ್ದಾರೆ. ಇದರಿಂದ ಸಾರ್ವಜನಿಕರ ನಿರೀಕ್ಷೆ ಕೂಡ ಹೆಚ್ಚಾಗಿದೆ. ಆದರೆ ಇದರಲ್ಲಿ ಹೆಚ್ಚುವರಿಯಾಗಿ ಮಂಡಿಸಿರುವ ರು. 60 ಕೋಟಿ ಅನುದಾನ ಜಿಲ್ಲಾಧಿಕಾರಿಗಳಿಗೆ ಬರಲಿದೆ. ಆದರೆ ನಗರಸಭೆಗೆ ಕೇವಲ ರು. 72 ಕೋಟಿ ಮಾತ್ರ ಬರಲಿದೆ. ಆದ್ದರಿಂದ ನಗರಸಭೆ ಅಧ್ಯಕ್ಷರು ರು. 72 ಕೋಟಿ ಬಜೆಟ್ ಅನ್ನೋದನ್ನು ಜನರಿಗೆ ಮತ್ತೊಮ್ಮೆ ಹೇಳಬೇಕು ಎಂದು ಆಗ್ರಹಿಸಿದರು.
ನಾಯಿಗಳ ಹಲ್ಲು ಕಟ್ ಮಾಡಿದೆ: ನಗರದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು, ಮಕ್ಕಳು ರಸ್ತೆಗಳಲ್ಲಿ ಓಡಾಡಲುಸಾಧ್ಯವಾಗುತ್ತಿಲ್ಲ. ಆದ್ದರಿಂದ ಅದರ ಹಾವಳಿ ತಡೆಗಟ್ಟಲು ನಾಯಿಗಳನ್ನು ಹಿಡಿದು ಅದರ ಹಲ್ಲುಗಳನ್ನು ತೆಗೆದು ಹಾಕಿದೆ ಎಂದು ನಗರಸಭೆ ಸದಸ್ಯ ಅಮೀರ್ ಜಾನ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್ ಕುಮಾರ್, ನಾಯಿಗಳ ಹಲ್ಲುಗಳನ್ನು ತೆಗೆದು ಹಾಕಿದರೆ ನಾಯಿಗಳಿಗೆ ನಗರಸಭೆ ಹಾಲನ್ನು ಹಾಕಬೇಕಾಗುತ್ತದೆ ಎಂದು ಹಾಸ್ಯ ಮಾಡಿದರು.
ರು. 3.86 ಕೋಟಿ-ಆಕ್ಷೇಪ: ಸದಸ್ಯ ಯಶ್ವಂತ್ ಮಾತನಾಡಿ, 2011-12 ಮತ್ತು 2012-13ನೇ ಸಾಲಿನ ಆಡಿಟರ್ ವರದಿಯ ಪ್ರಕಾರ 3.86 ಕೋಟಿ ರು.ಹಣ ಆಕ್ಷೇಪಣೆಯಾಗಿದೆ ಮತ್ತು ರು. 18.39 ಲಕ್ಷ ವಸೂಲಿಯಾಗಬೇಕಾಗಿದೆ ಎಂದು ವರದಿಯನ್ನು ನೀಡಿದ್ದಾರೆ. ಇಲ್ಲಿ ಸಾರ್ವಜನಿಕರ ಹಣ ಲೂಟಿಯಾಗಿದೆ ಎಂದು ಆರೋಪಿಸಿದರು.
ಮಗುವಿಗೆ ಪರಿಹಾರ ನೀಡಿ: ನಗರಸಭೆ ಸದಸ್ಯ ರಮೇಂಶ್ ಬಾಬು ಅವರು ಬೀದಿ ನಾಯಿಗಳ ಹಾವಳಿಗೆ ತುತ್ತಾಗಿದ್ದ ಬಾಲಕನನ್ನು ಸಭೆಗೆ ಕರೆತಂದು ಎಲ್ಲರ ಗಮನ ಸೆಳೆದರು. ಬಾಲಕನಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ. ಆದ್ದರಿಂದ ಈ ಬಾಲಕನಿಗೆ ರು. 5ರಿಂದ 10 ಸಾವಿರ ಪರಿಹಾರವನ್ನು ನೀಡುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಇರ್ಷಾದ್ ಪಾಷಾ, ಆಯುಕ್ತ ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement