ಯಗಚಿ ನೀರು ಕೆರೆಗಳಿಗೆ ಹರಿಸಲು ಆಗ್ರಹ
ಕ.ಪ್ರ. ವಾರ್ತೆ ಹಾರನಹಳ್ಳಿ ಜೂ 16
ಹಾರನಹಳ್ಳಿ ಯಗಚಿ ನದಿ ಮೂಲಕ ನೀರು ಹರಿಸುವಂತೆ ಗ್ರಾಮಸ್ಥರು, ಈ ಭಾಗದ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ರೈತ ಸಂಘದ ಮುಖಂಡರು ಸೋಮವಾರ ಅರಸೀಕೆರೆ- ಹಾಸನ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.
ಹಾರನಹಳ್ಳಿ ಸಂಪೂರ್ಣವಾಗಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿ ಸಂಪೂರ್ಣ ಬಂದ್ ಆಗಿದ್ದವು. ಹಾರನಹಳ್ಳಿ ದೊಡ್ಡಕೆರೆಯಿಂದ ಕೆರೆಗೆ ನೀರು ಬಿಡುವಂತೆ ಪ್ರತಿಭಟನೆಗಾರರು ಘೋಷಣೆಗಳನ್ನು ಕೂಗುತ್ತಾ ಸುಮಾರು 1 ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು.
ಬಿಜೆಪಿ ಬೆಂಬಲ: ಬಿಜೆಪಿ ಯುವ ಮೋರ್ಚಾ ತಾ. ಅಧ್ಯಕ್ಷ ರಮೇಶ್ ಮಾತನಾಡಿ, ಅರಸೀಕೆರೆ ತಾಲೂಕು ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದುಸ, ಇಂತಹ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಈ ಯೋಜನೆಯನ್ನು ಜಾರಿಗೆ ತರಲು ಭಾರತೀಯ ಜನತಾ ಪಕ್ಷ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಮಾತನಾಡಿ, ಕೃಷ್ಣ ಬೇಸಿನ್, ಕಾವೇರಿ ಬೇಸಿನ್ ಎಂದು ರೈತರನ್ನು ದಿಕ್ಕು ತಪ್ಪಿಸುತ್ತಿದ್ದು, ಈಗ ಅರಸೀಕೆರೆಗೆ ಕುಡಿಯುವ ನೀರಿಗಾಗಿ ಹೇಮಾವತಿ ನದಿಯಿಂದ ನೀರು ತರುವ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಇದ್ದರು.
ಸಿಎಂ ಜೊತೆ ಚರ್ಚೆ: ಸ್ವಾಮೀಜಿಯವರು ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿ, ಹಾರನಹಳ್ಳಿ ಕೆರೆ ಸುಮಾರು 8 ಶತಮಾನಗಳ ಪುರಾತನ ಕೆರೆಯಾಗಿದೆ. ಈಗ ತಾಲೂಕಿನಲ್ಲಿ ಬರದ ವಾತಾವರಣ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಗಚಿ ನದಿಯಿಂದ ಅರಸೀಕೆರೆ ತಾಲೂಕಿಗೆ ನೀರಾವರಿ ಯೋಜನೆ ನಿರ್ಮಿಸುವಂತೆ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲಿ ನೀಡುವುದಾಗಿ ತಿಳಿಸಿದರಲ್ಲದೆ, ಈ ಯೋಜನೆಯ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಬಳಿ ಮಾತನಾಡುವುದಾಗಿ ತಿಳಿಸಿದರು.
ರೈತ ಸಂಘದ ಮುಖಂಡ ಪ್ರಸನ್ನ ಕುಮಾರ್ ಮಾತನಾಡಿ, ಯೋಜನೆಯ ಸಂಪೂರ್ಣ ವರದಿ ತಯಾರಿಸಿ ಮುಂದಿನ ಅಧಿವೇಶನದೊಳಗೆ ಸರ್ಕಾರಕ್ಕೆ ಕಳುಹಿಸಿ ಕೋಡುವಂತೆ ಒತ್ತಾಯಿಸಿದರು.
64 ಕೆರೆಗೆ ನೀರು: ಪ್ರತಿಭಟನಾ ಸ್ಥಳಕ್ಕೆ ಬೇಲೂರು ಯಗಚಿ ನೀರಾವರಿ ಇಲಾಖೆ ಯ ಎಂಜಿನಿಯರ್ ಪುಟ್ಟಸ್ವಾಮಿಗೌಡ ರೈತರಿಂದ ಮನವಿ ಸ್ವೀಕರಿಸಿ, ಈಗಾಗಲೇ ಸುಮಾರು 129 ಕೋಟಿ ಅಂದಾಜಿನಲ್ಲಿ ಪ್ರಾಥಮಿಕ ಅಂದಾಜು ಪಟ್ಟಿ ತಯಾರಿಸಲಾಗಿದೆ. ಈ ಯೋಜನೆಯಲ್ಲಿ ಬೇಲೂರು, ಅರಸೀಕೆರೆ ತಿಪಟೂರು ತಾ ಕುಡಿಯುವ ನೀರಿನ ಯೋಜನೆಗಳು ಸೇರಿವೆ. ಸುಮಾರು 1 ಟಿಎಂಸಿ ನೀರನ್ನು 64 ಕೆರೆಗಳಿಗೆ ನೀರು ಕೊಡಬಹುದಾಗಿದೆ ಎಂದರು. ತಾಲೂಕು ಕಚೇರಿ ವತಿಯಿಂದ ಶಿರಸ್ತೇದಾರ್ ಪುಟ್ಟಯ್ಯ ಸ್ಥಳಕ್ಕೆ ಆಗಮಿಸಿ ರೈತರ ಅಹವಾಲುಗಳನ್ನು ಆಲಿಸಿ, ಮನವಿ ಸರ್ಕಾರಕ್ಕೆ ಕಳುಹಿಸಲಾಗುವುದೆಂದರು. ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಎಸ್.ನಂದೀಶ್ ಮತ್ತು ಕರೀಂಸಾಬ್, ಉಪಾಧ್ಯಕ್ಷ ಓಂಕಾರಮೂರ್ತಿ, ಗ್ರಾಪಂ ಅಧ್ಯಕ್ಷೆ ರೇಣುಕಮ್ಮ, ಮಹದೇವಪ್ಪ, ಆಟೋ ಚಾಲಕರ ಸಂಘ, ರಕ್ಷಣಾ ವೇದಿಕೆ ಮುಖಂಡರು, ವರ್ತಕರ ಸಂಘ, ರೈತ ಮುಖಂಡರು ಹಾಜರಿದ್ದರು.