ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ

Srinivasa Murthy VN
Updated On : 3 Mar 2014, 10:35 am

ಹಾಸನ: ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾ.4ರಂದು ಬೆಳಗ್ಗೆ 11 ಕ್ಕೆ ಹಾಸನಕ್ಕೆ ಆಗಮಿಸುವರು. ಬೆಳಗ್ಗೆ  11 .30ಕ್ಕೆ ನಗರದ  ಹಾಸನಾಂಬ ಕಲಾ ಕ್ಷೇತ್ರದಲ್ಲಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭಗಳಲ್ಲಿ ಭಾಗವಹಿಸುವರು. ನಂತರ ಸಾರ್ವಜನಿಕರ ಭೇಟಿ ಮತ್ತು ಕುಂದು ಕೊರತೆಗಳ ವಿಚಾರಣೆ ನಡೆಸುವರು.

ಇಂದು ವಿವಿಧ  ಕಾಮಗಾರಿಗೆ ಶಂಕು
ಹಾಸನ: ಸಾರ್ವಜನಿಕ ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಪೌರಾಡಳಿತ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭ ಮಾ.4 ರಂದು ಬೆಳಗ್ಗೆ 11.30ಕ್ಕೆ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಸ್ಥಳೀಯ ಲೋಕಸಭಾ ಸದಸ್ಯ ಎಚ್.ಡಿ. ದೇವೇಗೌಡ ಕಾರ್ಯಕ್ರಮದಲ್ಲಿ ಗೌರವಾನ್ವಿತ ಉಪಸ್ಥಿತಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ  ಡಾ. ಮಹದೇವಪ್ಪ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವರು. ಸಚಿವರಾದ ಆರ್.ವಿ. ದೇಶಪಾಂಡೆ, ಖಮರುಲ್ ಇಸ್ಲಾಂ, ಎಚ್. ಆಂಜನೇಯ, ಕಿಮ್ಮನೆ ರತ್ನಾಕರ ಭಾಗವಹಿಸುವರು. ಶಾಸಕ ಎಚ್.ಎಸ್. ಪ್ರಕಾಶ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎಚ್.ಡಿ.ರೇವಣ್ಣ, ಎಚ್.ಕೆ.ಕುಮಾರಸ್ವಾಮಿ, ಎ.ಮಂಜು, ವೈ.ಎನ್.ರುದ್ರೇಶಗೌಡ, ಕೆ.ಎಂ.ಶಿವಲಿಂಗೇಗೌಡ, ಸಿ.ಎನ್.ಬಾಲಕೃಷ್ಣ,  ಪಟೇಲ್ ಶಿವರಾಂ, ಬಿ.ಬಿ.ಶಿವಪ್ಪ, ಜಿಪಂ ಅಧ್ಯಕ್ಷೆ ಡಿ.ಜಿ.ಅಂಬಿಕಾ ರಾಮಣ್ಣ, ನಗರಸಭೆ ಅಧ್ಯಕ್ಷೆ ವಿದ್ಯಾ ಆನಂದ್ ಭಾಗವಹಿಸುವರು.

ಆರ್ಥಿಕ ಸ್ಥಿತಿ ವಿಚಾರ ಸಂಕಿರಣ
ಹಾಸನ: ನಗರದ ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಇತ್ತೀಚೆಗೆ   ಪದವಿ ವಿದ್ಯಾರ್ಥಿಗಳಿಗಾಗಿ ಒಂದು ದಿನದ  'ಬಹುರಾಷ್ಟ್ರೀಯ ಕಂಪನಿಗಳು' ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ವಿಚಾರ ಸಂಕಿರಣದಲ್ಲಿ ಸುಮಾರು 200 ವಿದ್ಯಾರ್ಥಿಗಳು ಪಾಲ್ಗೊಂಡು, ಹಲವು ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಕಂಪನಿಗಳು ಇಂದು ಆರ್ಥಿಕ ವ್ಯವಸ್ಥೆಯಲ್ಲಿ ವಹಿಸುತ್ತಿರುವ ಪಾತ್ರದ ಬಗ್ಗೆ ತಿಳಿಸಿದರು. ಬಹು ರಾಷ್ಟ್ರೀಯ ಕಂಪನಿಗಳು ಸೃಷ್ಟಿಸುವ ಉದ್ಯೋಗಗಳಿಗಿಂತಲೂ ಹೆಚ್ಚು ಉದ್ಯೋಗ ಸೃಷ್ಟಿಸಿಬಹುದೆಂದು ತಮ್ಮ ಪ್ರಬಂಧದಲ್ಲಿ ಮಂಡಿಸಿದರು. ಪ್ರಾಂಶುಪಾಲೆ ಡಾ.ಜೆ.ಶೈಲಜಕುಮಾರಿ  ಮಾತನಾಡಿದರು. ವಿಭಾಗ ಮುಖ್ಯಸ್ಥೆ ಪ್ರೊ.ಟಿ. ಎಸ್. ನಿರ್ಮಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.

'ಬಿ.ಬಿ.ಶಿವಪ್ಪಗೆ ಬಿಜೆಪಿ ಟಿಕೆಟ್ ನೀಡಿ'
ಹಾಸನ: ಮುಂಬರುವ ಹಾಸನ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಬಿ.ಬಿ.ಶಿವಪ್ಪನವರಿಗೆ ಟಿಕೆಟ್ ನೀಡುವಂತೆ ನರೇಂದ್ರ ಮೋದಿ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಜಾನೇಕೆರೆ ಹೇಮಂತ್ ಒತ್ತಾಯಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಪ್ಪನವರು ಅನುಭವಿ ಹಾಗೂ ಸ್ನೇಹಜೀವಿಯಾಗಿದ್ದು, ಬಿಜೆಪಿಯ ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಯುವಕರು ಸೇರಿದಂತೆ ಜಿಲ್ಲೆಯ ಜನರ ಸಂಪೂರ್ಣವಾದ ಬೆಂಬಲವಿದೆ ಎಂದರು.ಪಕ್ಷದಲ್ಲಿ ಅಭ್ಯರ್ಥಿಗಳ ಆಕಾಂಕ್ಷಿಗಳ ಪಟ್ಟಿಯನ್ನು ನೋಡಿ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತಿವೆ. ಸಮರ್ಥರಲ್ಲದವರು ಹೆಸರು ಪಟ್ಟಿಯಲ್ಲಿ ಕೇಳಿ ಬಂದಿದೆ. ಒಂದು ವೇಳೆ ಶಿವಪ್ಪ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದಲ್ಲಿ ಪರ್ಯಾಯ ಮಾರ್ಗ ಅನುಸರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸೋದರಳ್ಳಿ ಕುಮಾರ್, ಮೋಹನ್, ದರ್ಶನ್, ಮಂಜುನಾಥ್, ಸುನಿಲ್ ಮತ್ತಿತರರು ಇದ್ದರು.

ಕ್ಯಾತನಹಳ್ಳಿ ನೀರಾವರಿಗೆ ಅನುದಾನ ಹಂಚಿಕೆ
ಹಾಸನ: ತಾಲೂಕಿನ ಸಾಲಗಾಮೆ ಹೋಬಳಿಯ ಯಗಚಿ ಕ್ಯಾತನಹಳ್ಳಿ ಏತ ನೀರಾವರಿ ಯೋಜನೆಯನ್ನು ಯಗಚಿ ಎಡದಂಡೆ ಕಾಲುವೆಯ 33.133 ಕಿ.ಮೀ ನಿಂದ ನೀರನ್ನು ಎತ್ತಿ ಎರಡು ಹಂತಗಳಲ್ಲಿ 2301 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಯಗಚಿ ಕ್ಯಾತನಹಳ್ಳಿ ಏತ ನೀರಾವರಿ ಯೋಜನೆ ರೂಪಿಸಲಾಗಿದೆ.ಯೋಜನೆಯ ಮೊದಲನೇ ಹಂತದಲ್ಲಿ 777 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆಯಲ್ಲಿ ನಿಟ್ಟೂರು ಗ್ರಾಮಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಪ್ರಸ್ತಾವನೆ ಇರುವುದಿಲ್ಲವೆಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ವಿಧಾನ ಪರಿಷತ್‌ನಲ್ಲಿ  ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಗಂಗೂರಿನ ಗೊಬಳಿ ಅರಣ್ಯದಲ್ಲಿ ಭೂಮಿ ಹಂಚಿಕೆಯಾಗದೆ ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವ ದಲಿತ ಜೀತ ಕುಟುಂಬಗಳು ಯಾವುದು ಇರುವುದಿಲ್ಲವೆಂದು ಅರಕಲಗೂಡು ತಹಸಿಲ್ದಾರ್ ವರದಿ ಮಾಡಿದ್ದಾರೆ  ಎಂದು ಕಂದಾಯ ಸಚಿವ  ಶ್ರೀನಿವಾಸ ಪ್ರಸಾದ್ ಪಟೇಲ್ ಶಿವರಾಂ ಪ್ರಶ್ನೆಗೆ ಉತ್ತರಿಸಿದ್ದಾರೆ.

ಜಿಲ್ಲೆಯ ಕೆರೆಗಳಿಗೆ ತಡೆಗೋಡೆ ನಿರ್ಮಾಣ
ಹಾಸನ: ಜಿಲ್ಲೆಯಲ್ಲಿ ಮುಖ್ಯ ರಸ್ತೆಗಳಿಗೆ ಹೊಂದಿಕೊಂಡಂತೆ ಸಣ್ಣ ನೀರಾವರಿ ಇಲಾಖೆಯ 56 ಕೆರೆಗಳಿದ್ದು. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅರಸೀಕರೆ  ದೊಡ್ಡಕೆರೆ ಏರಿಯ ಮೇಲೆ ಹಾಗೂ ಬೇಲೂರು ತಾಲೂಕಿನ ವಿಷ್ಣುಸಮುದ್ರ ಕೆರೆ ಏರಿ ಮೇಲೆ ಕ್ರಾಶ್‌ಬ್ಯಾರಿಯಲ್ ನಿರ್ಮಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್. ತಂಗಡಗಿ, ಪಟೇಲ್ ಶಿವರಾಂ ವಿಧಾನಪರಿಷತ್‌ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.  ವಿಷ್ಣುಸಮುದ್ರ ಕೆರೆ ಏರಿ ಮೇಲೆ 2013-14 ನೇ ಸಾಲಿನಲ್ಲಿ ಅಪಘಾತ ಸಂಭವಿಸಿತ್ತು. ಆದರೆ ಕೆರೆಗಳ ಮೇಲೆ ಹಾದು ಹೋಗುವ ರಸ್ತೆಗಳಿಗೆ ತಡೆಗೋಡೆ ನಿರ್ಮಿಸುವುದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಸಚಿವರು ತಿಳಿಸಿದರು.

ವೀರಶೈವ ಶಿವದೀಕ್ಷಾ ಯಶಸ್ವಿ ಕಾರ್ಯಕ್ರಮ
ರಾಮನಾಥಪುರ: ವಿಭೂತಿ ಕೇವಲ ಒಂದು ಜಾತಿ, ಧರ್ಮ ಅಥವಾ ವರ್ಗದ ಸಂಕೇತವಲ್ಲ, ಬದಲಾಗಿ ಮನುಷ್ಯನ ಹತ್ತು ಹಲವು ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ ಎಂದು ಶಿರದನಹಳ್ಳಿ ಬಸವ ಕಲ್ಯಾಣ ಮಠದ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು. ರಾಮನಾಥಪುರ ಹತ್ತಿರವಿರುವ ಕೊಣನೂರು ಹೋಬಳಿ ಕೆಸವತ್ತೂರು ಸಿದ್ದಲಿಂಗೇಶ್ವರಸ್ವಾಮಿ ಮಠದಲ್ಲಿ ಇತ್ತೀಚೆಗೆ ನಡೆದ ಅರಕಲಗೂಡು ತಾಲೂಕು ವಿಶ್ವ ವೀರಶೈವ ಲಿಂಗಾಯಿತ ಮಹಾವೇದಿಕೆ ಹಮ್ಮಿಕೊಂಡಿದ್ದ ಶಿವದೀಕ್ಷಾ ಕಾರ್ಯಕ್ರಮದಲ್ಲಿ 60 ವೀರಶೈವ ವಟುಗಳಿಗೆ ಲಿಂಗ-ದೀಕ್ಷಾ ನೀಡಿ ಮಾತನಾಡಿದರು. ವೀರಶೈವ ಧರ್ಮದಲ್ಲಿ ಲಿಂಗ ದೀಕ್ಷೆಗೆ ಮಹತ್ವವಿದೆ. ಯಾವುದೇ ವೀರಶೈವರು ಗುರು ಕಾರುಣ್ಯದಿಂದ ಲಿಂಗ ದೀಕ್ಷೆ ಪಡೆದುಕೊಂಡರೆ ಮಾತ್ರ ವೀರಶೈವನಾಗುತ್ತಾನೆ ಎಂದು ತಿಳಿಸಿದರು.ಕೆಸವತ್ತೂರು ಸಿದ್ದಲಿಂಗೇಶ್ವರಸ್ವಾಮಿ ಮಠದ ಬಸವರಾಜೇಂದ್ರ ಸ್ವಾಮೀಜಿ ಅಶೀರ್ವಚನ ನೀಡಿ, ಮಾನವ ಕೇವಲ ಬಹಿರಂಗ ಶುದ್ಧಿಗೆ ಗಮನ ನೀಡದೆ, ಅಂತರಂಗದ ಶುದ್ಧಿ ಮಾಡುವ ಮೂಲಕ ಮಾನವೀಯತೆ, ಹೃದಯ ಶ್ರೀಮಂತಿಕೆ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.   ಅರಕಲಗೂಡು ತಾಲೂಕು ವಿಶ್ವ ವೀರಶೈವ-ಲಿಂಗಾಯಿತ ಮಹಾವೇದಿಕೆ ಗೌರವ ಅಧ್ಯಕ್ಷ ಬೂದನೂರು ಕಾಂತರಾಜ್, ಅಖಿಲ ಭಾರತ ಘಟಕದ ಮಲ್ಲಿಪಟ್ಟಣ ಹೋಬಳಿ ಅಧ್ಯಕ್ಷ ಕೊಳ್ಳಂಗಿ ಚಂದ್ರಪ್ಪ ಹಾಗೂ ಕೊಣನೂರು ಹೋಬಳಿ ಅಧ್ಯಕ್ಷ ಪ್ರೇಮಕುಮಾರ್, ಗ್ರಾಮದ ಮುಖಂಡರಾದ ಪುಟ್ಟಬಸಪ್ಪ, ಪರಮಮೇಶ, ಸುರೇಶ್, ಮಹೇಶ್, ತಾಲೂಕು ವಿಶ್ವ ವೀರಶೈವ-ಲಿಂಗಾಯಿತ ಮಹಾವೇದಿಕೆ ಅಧ್ಯಕ್ಷ ಕುಮಾರಸ್ವಾಮಿ ಮತ್ತಿತರರು ಭಾಗವಹಿಸಿದ್ದರು.  

ವೈಜ್ಞಾನಿಕ ಭಾವ ಬೆಳೆಸಲು ಸಲಹೆ
ಅರಸೀಕೆರೆ: ತಾಲೂಕು ವಿಜ್ಞಾನ ಪರಿಷತ್ ಘಟಕವು ಕಳೆದ 25 ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮೀಣ ಪ್ರದೇಶದ ಜನರಿಗಾಗಿ ವೈಜ್ಞಾನಿಕ
ಮನೋಭಾವ ಬಿತ್ತಲು ವಿಶೇಷ ಕಾರ್ಯಕ್ರಮ ರೂಪಿಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಗೌರವಾಧ್ಯಕ್ಷ ಡಾ ಪಿ.ಎನ್.ಜಗದೀಶ್ ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಸನ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಖ್ಯಾತ ವಿಜ್ಞಾನಿ ಸರ್.ಸಿ.ವಿ.ರಾಮನ್ ಸ್ಮರಣಾರ್ಥ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಾಲೂಕಿನ ನಾಗಪುರಿ ಅರಣ್ಯ ಪ್ರದೇಶದಲ್ಲಿ ವಿಜ್ಞಾನ ದಿನಾಚರಣೆ ಅಂಗವಾಗಿ ನಾನಾ ಜಾತಿಗಳ ಮರಗಳನ್ನು ಗುರುತಿಸುವುದು ಬೀಜ ಬಿತ್ತನೆಯಂತಹ ವಿಶೇಷ ಕಾರ್ಯಕ್ರಮ  ರೂಪಿಸುವ ಮೂಲಕ ವಿಶೇಷ ಕಾಳಜಿವಹಿಸಿದೆ ಎಂದರು.ವಿಜ್ಞಾನ ಶಿಕ್ಷಕ ಮಂಜುನಾಥ್ ಮಾತನಾಡಿ, ಸಿ.ವಿ.ರಾಮನ್ ವ್ಯಕ್ತಿತ್ವ, ಸಾಧನೆ, ಅವರಿಗೆ ದೊರೆತ ಪುರಸ್ಕಾರಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಬಿಇಒ ಎಸ್.ಪಿ. ನಟರಾಜ್, ಗಂಗಾಧರ್ ಸ್ವಾಮಿ, ಡಾ.ಎಚ್.ಆರ್.ಸ್ವಾಮಿ, ಶ್ರೀನಿವಾಸ್ ನಟೇಕರ್, ಡಿ.ಎಸ್.ರಾಮಸ್ವಾಮಿ, ಸಂತೋಷ್, ಮಹೇಶ್ ಇದ್ದರು.

ಇಂದು ಆದಿಶಕ್ತಿ ತೋಪಮ್ಮ ಜಾತ್ರೆ
ಕೆ.ಆರ್. ನಗರ: ಪಟ್ಟಣದ ಹೊರವಲಯದ ಹಾಸನ- ಮೈಸೂರು ರಸ್ತೆಯಲ್ಲಿ ಪ್ರೇಮಿಗಳ ದೇವತೆ ಎಂದೇ ಹೆಸರುವಾಸಿಯಾಗಿರುವ ಆದಿಶಕ್ತಿ ತೋಪಮ್ಮನವರ ಜಾತ್ರಾ ಮಹೋತ್ಸವ ಮತ್ತು ದನಗಳ ಜಾತ್ರೆ ಮಾ.4ರಂದು ನಡೆಯಲಿದೆ. ಜಾತ್ರೆಯಲ್ಲಿ ರಥೋತ್ಸವ ನಡೆಯದಿರುವುದು ವಿಶೇಷವಾಗಿದ್ದು, ಬೆಳಗ್ಗೆಯಿಂದ ರಾತ್ರಿವರೆಗೂ ಜಾತ್ರೆಗೆ ಬರುವ ಭಕ್ತರು ದೇವಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಲಿದ್ದಾರೆ. ದೇವಸ್ಥಾನ ಪಟ್ಟಣದ ಸುತ್ತಲಿನ 9 ಗ್ರಾಮಗಳಿಗೆ ಸೇರಿದ್ದು, ಗ್ರಾಮಗಳ ಮುಖಂಡರು ಮತ್ತು ಸಾರ್ವಜನಿಕರು ಜಾತ್ರೆಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಮರದ ವ್ಯಾಪಾರಿಗಳ ಸಂಘದ ವತಿಯಿಂದ ಜಾತ್ರೆಗೆ ಬರುವ ಎಲ್ಲ ಭಕ್ತರಿಗೆ ಪ್ರಸಾದ, ಪಾನಕ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement