ರಸ್ತೆ ಅಗೆತ: ಪ್ರಯಾಣಿಕರಿಗೆ ಕಿರಿಕಿರಿ
ಬೇಲೂರು: ತಾಲೂಕಿನ ಬಿಕ್ಕೋಡು ಹೊಬಳಿ ಪಡುವಳಲು ಗ್ರಾಮದಲ್ಲಿನ ರಸ್ತೆಗೆ ಡಾಂಬರೀಕರಣ ಮಾಡುವ ಉದ್ದೇಶದಿಂದ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪದ ರಸ್ತೆಗೆ ಜಲ್ಲಿಯನ್ನು ಹಾಕಿ ಸಾರ್ವಜನಿಕರು ಹಾಗೂ ಪ್ರಯಾಣಿಕರು, ವಾಹನ ಚಾಲಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಜಯ ಕರ್ನಾಟಕ ಸಂಘಟನೆ ಬಿಕ್ಕೋಡು ಹೋಬಳಿ ಸಂಘಟನಾ ಸಂಚಾಲಕ ಚಂದ್ರಶೇಖರ್ ಆರೋಪಿಸಿದ್ದಾರೆ.
ಕಳೆದ ಒಂದು ತಿಂಗಳಿನ ಹಿಂದೆ ರಸ್ತೆಗೆ ಡಾಂಬರಿಕರಣ ಮಾಡುವುದಕ್ಕಾಗಿ ರಸ್ತೆಯನ್ನು ಅಗೆದು ಒಂದು ತಿಂಗಳುಗಳ ಕಾಲ ಹಾಗೆಯೆ ಬಿಟ್ಟು ನಂತರ ಈ ರಸ್ತೆಗೆ ಜಲ್ಲಿಯನ್ನು ತಂದು ಹಾಕಿ ಡಾಂಬರೀಕರಣ ಮಾಡದೆ ರಸ್ತೆಯಲ್ಲಿನ ಜಲ್ಲಿ ಕಲ್ಲುಗಳು ರಸ್ತೆಯ ತುಂಬೆಲ್ಲ ಚೆಲ್ಲಾಡಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಹಾಗೂ ವಾಹನಗಳ ಚಾಲಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುವುದರ ಜತೆಗೆ ಸಾಕಷ್ಟು ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳು ನಡೆದಿವೆ.
ಆದರೂ ಸಂಬಂಧಪಟ್ಟ ಗುತ್ತಿಗೆದಾರರಾಗಲಿ, ಅಧಿಕಾರಿಗಳಾಗಲಿ ಹಾಗೂ ಈ ಭಾಗದ ಜನ ಪ್ರತಿನಿಧಿಗಳಾಗಲಿ ಗಮನ ಹರಿಸದಿರುವುದು ನೋಡಿದರೆ ಸಾರ್ವಜನಿಕರ ಮೇಲೆ ಇವರುಗಳಿಗಿರುವ ತಾತ್ಸಾರ ಭಾವನೆ ತಿಳಿಯುತ್ತದೆ, ಮತ್ತು ಮುಂದಿನ ಕೆಲವೇ ದಿನಗಳಲ್ಲಿ ಈ ರಸ್ತೆಗೆ ಹಾಕಿರುವ ಜಲ್ಲಿ ಕಲ್ಲಿಯನ್ನು ಸರಿಪಡಿಸಿ ರಸ್ತೆಗೆ ಶೀಘ್ರವಾಗಿ ಡಾಂಬರೀಕರಣ ಮಾಡಬೇಕು ಇಲ್ಲದಿದ್ದಲ್ಲಿ ತಾಲೂಕು ಜಯ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಸಂಘಟನೆಯ ಬಿಕ್ಕೋಡು ಹೋಬಳಿ ಚಂದನ್, ಸಂದೀಪ್, ರಾಜು, ಸುಂದ್ರೇಶ್, ಯೋಗೇಶ್ ಎಚ್ಚರಿಸಿದ್ದಾರೆ.
ಲಕ್ಷ್ಮೀವಿಲಾಸ್ ಬ್ಯಾಂಕ್ ಶಾಖೆ ಕಾರ್ಯಾರಂಭ
ಹಾಸನ: ದೇಶದ ಖಾಸಗಿ ವಲಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಲಕ್ಷ್ಮಿ ವಿಲಾಸ್ ಬ್ಯಾಂಕ್ 355ನೇ ಶಾಖೆಯನ್ನು ಇತ್ತೀಚೆಗೆ ಹಾಸನದ ಮಹಲ್‌ರಸ್ತೆಯಲ್ಲಿರುವ ಶರಣ್ಯ ಆರ್ಕೇಡ್‌ನ ಮಳಿಗೆ ಸಂಖ್ಯೆ 72 ರಲ್ಲಿ ಶಾಸಕ ಎಚ್.ಎಸ್. ಪ್ರಕಾಶ್ ಇತ್ತೀಚೆಗೆ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಹಾಸನ ಜಿಲ್ಲೆ ಪ್ರಗತಿಯತ್ತ ಸಾಗುತ್ತಿದೆ. ಕೃಷಿ ಜೊತೆಗೆ ವಾಣಿಜ್ಯ ಚಟುವಟಿಕೆಗಳು ಹೆಚ್ಚುತ್ತಿವೆ.
ಅದಕ್ಕೆ ಪೂರಕವಾಗಿ ಬ್ಯಾಂಕ್‌ಗಳು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಎಚ್.ಟಿ. ಚಂದ್ರಶೇಖರ್ ಮಾತನಾಡಿ, ಇನ್ನೂ ಹತ್ತು ಹೊಸ ಬ್ಯಾಂಕ್‌ಗಳು ಹಾಸನಕ್ಕೆ ಕಾಲಿಡಲಿವೆ. ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವುದರಿಂದ ಮಾತ್ರ ಬ್ಯಾಂಕ್‌ಗಳು ಬೆಳೆಯಲು ಸಾಧ್ಯ ಎಂದರು.
ಬ್ಯಾಂಕ್‌ನ ಸಹಾಯಕ ಮಹಾ ಪ್ರಬಂಧಕ ದಿನಕರನ್, ಹಾಸನ ಶಾಖೆ ಮುಖ್ಯಸ್ಥ ಎಸ್. ಮುರಳಿ ಮೋಹನ್ ಮಾತನಾಡಿದರು.ಕಟ್ಟಡದ ಮಾಲೀಕ ರವಿಚಂದ್ರ ಇದ್ದರು. ಅರುಣಾ ಸ್ವಾಗತಿಸಿದರು. ಮುರಳಿ ಮೋಹನ್ ವಂದಿಸಿದರು.