ಸುಳ್ಳು ರಾಜಕಾರಣಿಗಳಿಗೆ ಉಳಿಗಾಲವಿಲ್ಲ
ಕ.ಪ್ರ. ವಾರ್ತೆ ಹೊಳೆನರಸೀಪುರ ಮಾ. 3
ಕರ್ನಾಟಕದ ನೆಲ-ಜಲ ಸಂರಕ್ಷಿಸುವುದಾಗಿ ಹೇಳಿ ಹೇಮಾವತಿ ನದಿಯಿಂದ ಮಾಗಡಿ-ಶಿರಾದವರೆಗೆ ನೀರು ತೆಗೆದುಕೊಂಡು ಹೋಗುತ್ತೇವೆ ಎಂದು ಚುನಾವಣೆಗಾಗಿ ಸುಳ್ಳು ಹೇಳಿ ರಾಜಕಾರಣ ಮಾಡುವವರಿಗೆ ಉಳಿಗಾಲವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಲ್ಲಿ ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದರು.
ಕಾವೇರಿ ನೀರಾವರಿ ನಿಗಮದ ವತಿಯಿಂದ ರು. 30.40 ಕೋಟಿ ವೆಚ್ಚದಲ್ಲಿ ತಾಲೂಕಿನ ಕಟ್ಟೆ ಬೆಳಗುಲಿ ಗ್ರಾಮದ ಸಮೀಪ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ರಾಮದೇವರ ಅಣೆಕಟ್ಟೆ ನವೀಕರಣ, ಕಬ್ಬಿಣದ ತೂಗು ಸೇತುವೆ ನಿರ್ಮಾಣ, ನಿರೀಕ್ಷಣಾ ಮಂದಿರ ನಿರ್ಮಾಣ, ಮಕ್ಕಳ ಆಟದ ಉದ್ಯಾನ ನಿರ್ಮಾಣ ಮತ್ತು ಇತರೆ
ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಸೊಮವಾರ ಭಾಗವಹಿಸಿ ಮಾತನಾಡಿದ ಅವರು, ಈ ಕಾಮಗಾರಿಯನ್ನೂ ಪ್ರಮುಖ ಪಕ್ಷಗಳ ಮುಖಂಡರುಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ರಾಜಕೀಯವಾಗಿ ಬಳಸಿಕೊಳ್ಳಲು ಹಿಂಜರಿಯುವುದಿಲ್ಲ, ಆದರೆ ಈ ದೇವೇಗೌಡ ಅದಕ್ಕೆಲ್ಲಾ ಬಗ್ಗುವವನಲ್ಲ ಎಂದು ಹೇಳಿದರು.
ಬಿಜೆಪಿ-ಕಾಂಗ್ರೆಸ್ ವಿರುದ್ಧ ಕಿಡಿ: ಮೈಸೂರು ಒಡೆಯರ ಕಾಲದಲ್ಲಿ ನಿರ್ಮಿಸಲಾದ 9 ಅಣೆಕಟ್ಟೆಗಳಲ್ಲಿ ಇಲ್ಲಿನ ಶ್ರೀರಾಮದೇವರ ಅಣೆಕಟ್ಟೆಯೂ ಒಂದಾಗಿದ್ದು, 144 ವರ್ಷಗಳ ಪುರಾತನವಾದ ಈ ಅಣೆಕಟ್ಟೆಯು ಇಂದು ದುಸ್ಥಿತಿಯಲ್ಲಿದ್ದು, ಇದನ್ನು ರು. 30.40ಕೋಟಿ ವೆಚ್ಚದಲ್ಲಿ ಪುನರ್ ನವೀಕರಿಸಲಾಗುವುದು ಎಂದ ಅವರು, ನಾವು ಈ ಅಣೆಕಟ್ಟೆಯನ್ನು ಎತ್ತರಿಸುತ್ತಿಲ್ಲ, ಅಭಿವೃದ್ಧಿ ಪಡಿಸುತ್ತಿದ್ದೇವೆ ಅಷ್ಟೆ, ಆದರೂ ನಮ್ಮ ರಾಷ್ಟ್ರೀಯ ಪಕ್ಷಗಳು ಈ ವಿಚಾರವಾಗಿಯೂ ತಮಿಳುನಾಡಿನೊಂದಿಗೆ ಸೇರಿಕೊಂಡು ಸುಪ್ರೀಂಗೆ ಅರ್ಜಿ ಸಲ್ಲಿಸಿದರೂ ಅಚ್ಚರಿಯಿಲ್ಲ, ಆದರೆ ಈ ನಾನು ಅವುಗಳಿಗೆ ಕೇರ್ ಮಾಡಲ್ಲ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೂಂಕರಿಸಿದರು.
ರಾಜ್ಯದ ಪರ ಗಟ್ಟಿ ದನಿ ಇಲ್ಲ: ಕಾವೇರಿ ನದಿ ನೀರಿನ ಹಂಚಿಕೆಯ ಕುರಿತಂತೆ ಸುಪ್ರೀಂ ನೀಡಿದ ತೀರ್ಪು ರಾಜ್ಯದ ಹಿತಕ್ಕೆ ಮಾರಕವಾದರೂ ಅಧಿಕಾರದ ಹಪಹಪಿಗೆ ಬಿದ್ದ ರಾಷ್ಟ್ರೀಯ ಪಕ್ಷಗಳಿಂದ ಆಯ್ಕೆಯಾದ ಸಂಸದರು ಕೇಂದ್ರದಲ್ಲಿ ರಾಜ್ಯದ ಪರವಾಗಿ ಗಟ್ಟಿಯಾಗಿ ದನಿಯೆತ್ತಲು ವಿಫಲವಾದರು ಎಂದು ವಿಷಾದಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಾವೇರಿ ನದಿ ಪಾತ್ರದವರೇ ಆಗಿದ್ದು, ಅವರು ಏಕೆ ಕಾವೇರಿ ನೀರು ಹಂಚಿಕೆಯ ಕುರಿತಂತೆ ಕೇಂದ್ರದೊಂದಿಗೆ ದಿಟ್ಟತನ ತೋರುತ್ತಿಲ್ಲ ಎಂದರಲ್ಲದೇ, ಅಧಿಕಾರ ಇರಲಿ ಹೋಗಲೀ ಆದರೆ ಅವರು ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಲಿ ಎಂದು ಕಿವಿಮಾತು ಹೇಳಿದರು.
20 ತಿಂಗಳಲ್ಲಿ ಕಾಮಗಾರಿ ಪೂರ್ಣ: ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಶತಮಾನದಷ್ಟು ಹಳೆಯದಾದ ಶ್ರೀರಾಮದೇವರ ಕಟ್ಟೆಯ ನವೀಕರಣಕ್ಕಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲಾಗಿತ್ತು, ಈಗ 30.40ಕೋಟಿ ರು. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಂಡು 20ತಿಂಗಳಿನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದ ಅವರು, ಈ ಕಾರ್ಯದಿಂದಾಗಿ ಶ್ರೀರಾಮದೇವರ ಅಣೆಕಟ್ಟೆಯ ಉತ್ತರ ಮತ್ತು ದಕ್ಷಿಣ ನಾಲೆಗಳಿಂದ ಹೊಳೆನರಸೀಪುರ, ಚನ್ನರಾಯಪಟ್ಟಣ ಹಾಗೂ ಕೆ.ಆರ್.ಪೇಟೆ ತಾಲೂಕುಗಳಿಗೆ ಸೇರಿದ ಒಟ್ಟು 4722 ಹೆಕ್ಟೇರ್ ಪ್ರದೇಶದಲ್ಲಿನ ನೀರಾವರಿಗೆ ಅನುಕೂಲ ಹೆಚ್ಚಾಗಲಿದೆ ಎಂದರು.
ಕುಮಾರಸ್ವಾಮಿ ಕಾಲದಲ್ಲಿ...: ಶ್ರೀರಾಮದೇವರ ನಾಲೆಯ ಆಧುನೀಕರಣಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ರು.300 ಕೋಟಿ ವೆಚ್ಚದಲ್ಲಿ ನಾಲೆಗಳ ಆಧುನೀಕರಣವನ್ನು ಕೈಗೊಳ್ಳಲಾಗಿತ್ತು ಎಂದ ಎಚ್.ಡಿ.ರೇವಣ್ಣ ಅವರು, 144 ವರ್ಷಗಳಷ್ಟು ಹಳೆಯದಾದ ಈ ಅಣೆಕಟ್ಟೆಯ ದುರಸ್ತಿಗಾಗಿ ಗ್ರೌಟಿಂಗ್ ಕಾಮಗಾರಿಯನ್ನು ಮಾಡಿಸಿದ್ದರು ಎಂದು ಹೇಳಿದ ಅವರು, ಕಾಮಸಮುದ್ರ ಬಳಿಯಲ್ಲಿನ ನಾಲೆಯ 5ನೇ ಕಿಮೀ ನಿಂದ 35ನೇ ಕಿಮೀವರೆಗಿನ ನಾಲೆಯ ದುರಸ್ತಿಗಾಗಿ ರು.84ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಹೇಮಾವತಿ ಜಲಾಶಯ ಯೋಜನೆಯ ಮುಖ್ಯ ಎಂಜಿನಿಯರ್ ಎಚ್.ಕೆ.ಕೃಷ್ಣೇಗೌಡ, ಹೇಮಾವತಿ ಯೋಜನಾ ವೃತ್ತದ ಎಸ್‌ಇಡಿಆರ್ ಕೃಷ್ಣಮೂರ್ತಿ, ಹೇಮಾವತಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಟಿ.ವೆಂಕಟೇಶ್, ಎಂಜಿನಿಯರ್‌ಗಳಾದ ಸುಬ್ರಾಯಿಗೌಡ, ಪುಟ್ಟರಾಜು, ಗ್ರಾಪಂ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷ ಕೆ.ಆರ್.ಮಹೇಶ್‌ಗೌಡ, ಜಿಪಂ ಸದಸ್ಯರಾದ ಎಚ್.ಎನ್.ದೇವೇಗೌಡ, ಗೌರಮ್ಮ ಮೊದಲಾದವರು ಹಾಜರಿದ್ದರು.
'ರಾಷ್ಟ್ರೀಯ ಪಕ್ಷದ ಸಂಸದರಲ್ಲಿ ಗಟ್ಟಿ ದನಿ ಇಲ್ಲದ ಕಾರಣ ಕಾವೇರಿಗಾಗಿ ಭಿಕ್ಷೆ ಸ್ಥಿತಿ'
ಹೊಳೆನರಸೀಪುರ: ಕಾಂಗ್ರೆಸ್ ಹಾಗೂ ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳಿಗೆ ತಮಿಳುನಾಡಿನ ಎರಡು ಪಕ್ಷಗಳ ಸಂಸದರನ್ನು ಆಶ್ರಯಿಸಿಯೇ ಕೇಂದ್ರದಲ್ಲಿ ಸರ್ಕಾರ ನಡೆಸುವ ಸ್ಥಿತಿ ಇದ್ದು, ರಾಜ್ಯದಿಂದ ಆಯ್ಕೆಯಾದ ರಾಷ್ಟ್ರೀಯ ಪಕ್ಷಗಳ ಸಂಸದರು ಕೇಂದ್ರದಲ್ಲಿ ಗಟ್ಟಿಯಾಗಿ ದನಿಯೆತ್ತದ ಕಾರಣದಿಂದಾಗಿ ರಾಜ್ಯವು ಕಾವೇರಿ ನೀರಿಗಾಗಿ ಕೇಂದ್ರದ ಮುಂದೆ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತೀವ್ರ ವಾಗ್ದಾಳಿ ನಡೆಸಿದರು.
ತಾಲೂಕಿನಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾದರೆ ಮಾತ್ರ ತಾವು ಸುಮ್ಮನಿರುವುದಿಲ್ಲ ಎಂದು ಗುಡುಗಿದರಲ್ಲದೇ, ಕೇಂದ್ರದಲ್ಲಿ ಕಾವೇರಿಯ ಹಂಚಿಕೆ ಕುರಿತಂತೆ ಮಾಜಿ ಪ್ರಧಾನಿಯಾಗಿ ತಾವು ದನಿಯೆತ್ತಿದರೂ ಕೂಡ ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್ ಸಂಸದರು ದನಿಗೂಡಿಸಲಿಲ್ಲ ಎಂದು ವಿಷಾದಿಸಿದರು.
'ದುಡಿವ ಕೈಗೆ ಶಕ್ತಿ ನೀಡಬೇಕಿದೆ'
ಹಾಸನ: ದೇಶದಲ್ಲಿ ಶೇ.90 ರಷ್ಟು ಬಡ ಜನರಿದ್ದಾರೆ, ಹಳ್ಳಿ ಜನತೆಯ ಸ್ಥಿತಿ ನನಗೆ ಗೊತ್ತಿದ್ದು, ಬಡತನ, ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ದುಡಿವ ಕೈಗಳಿಗೆ ಶಕ್ತಿ ನೀಡಬೇಕಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಹಾಸನ ತಾಲ್ಲೂಕಿನ ಮರ್ಕುಲಿ ಗ್ರಾಮದಲ್ಲಿ ಸೋಮವಾರ ಯಗಚಿ ಎಡದಂಡೆ ನಾಲೆಯ ಕಾಮಸಮುದ್ರ ಶಾಖಾ ಕಾಲುವೆಯ ಸರಪಳಿ 5 ಕಿಮೀ ನಿಂದ 35 ಕಿಮೀ ವರೆಗಿನ ಅಂದಾಜು ರು. 81 ಕೋಟಿ ವೆಚ್ಚದ ನಾಲಾ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಅವರು ನೆರವೇರಿಸಿ ಮಾತನಾಡಿದರು.
ಶಾಸಕ ಎಚ್.ಡಿ.ರೇವಣ್ಣ ಅವರು ಮಾತನಾಡಿದರು. ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ ಹಾಗೂ ಮತ್ತಿತರರು ಉಪಸ್ಥಿತರಿದ್ದರು
ದೇವೇಗೌಡರುಅದ್ಭುತ ಶಕ್ತಿಯೇನೂ ಅಲ್ಲ: ಶೇಷೇಗೌಡ
ಅರಕಲಗೂಡು: ಜಿಲ್ಲೆಯಲ್ಲಿ ಕಾಂಗ್ರೆಸ್‌ನಲ್ಲಿ ಹಲವು ನ್ಯೂನತೆಗಳು ಇದ್ದುದರ ಫಲವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಅವರೇನೂ ಅದ್ಭತ ಶಕ್ತಿಯಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಕೆ.ಶೇಷೇಗೌಡ ತಿಳಿಸಿದ್ದಾರೆ.
ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ನಾಯಕತ್ವ ಕೊರತೆಯೇನೂ ಇಲ್ಲ. ಅಲ್ಲಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇದ್ದು, ದೇವೇಗೌಡರ ಪ್ರಾಬಲ್ಯ ಹೆಚ್ಚಲು ಕಾರಣವಾಗಿತ್ತು. ಈಗ ಹಾಗಿಲ್ಲ. ಎಲ್ಲವನ್ನೂ ಸರಿದೂಗಿಸಲಾಗುತ್ತಿದೆ. ದೇವೇಗೌಡರನ್ನು ಚುನಾವಣೆಯಲ್ಲಿ ಸೋಲಿಸುವುದು ಕಷ್ಟದ ಕೆಲಸವೇನೂ ಅಲ್ಲ ಎಂದರು. ದೇವೇಗೌಡರು ಅಭಿವೃದ್ದಿ ಕಾಮಗಾರಿಗಳಿಗೆ ಈಗಲೂ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಲೋಕಸಭಾ ಸದಸ್ಯರ ಕೋಟಾ ಹಣ ಮುಗಿದಿದ್ದರೂ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಎಂದರು. ಕಾಂಗ್ರೆಸ್ ಮುಖಂಡರಾದ ಉಮಾಪತಿ, ನಾಗಣ್ಣ, ರಂಗದಾಸ್, ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು.