68 ಕಿಮೀ ರಸ್ತೆ ಕಾಮಗಾರಿ ಮುಕ್ತಾಯ: ಕುಮಾರಸ್ವಾಮಿ
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಯಡಿ ಸಕಲೇಶಪುರ-ಆಲೂರು ಕ್ಷೇತ್ರದಲ್ಲಿ 68 ಕಿ.ಮೀ. ರಸ್ತೆ ಕಾಮಗಾರಿ ಮುಕ್ತಾಯಗೊಂಡಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ಸೋಮವಾರ ತಾಲೂಕಿನ ಗೊದ್ದುಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಯ ಕಾಮಗಾರಿಗೆ ಗುದ್ದಲಿಪೂಜೆ ನೆರೆವೇರಿಸಿ ಅವರು ಮಾತನಾಡಿದರು. ಸೂಚನೆ: ಕ್ಷೇತ್ರದಲ್ಲಿ ಈ ಯೋಜನೆಯಡಿ 170 ಕಿ.ಮೀ. ರಸ್ತೆಗಳನ್ನು 90 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು ಈಗಾಗಲೇ 68 ಕಿ.ಮೀ.ರಸ್ತೆ ಕಾಮಗಾರಿ ಮುಕ್ತಾಯಗೊಂಡಿದೆ. ಬಹುದಿನಗಳ ಬೇಡಿಕೆಯಾಗಿದ್ದ ಗೊದ್ದುಕೂಡಿಗೆ- ಸುಬ್ರಮಣ್ಯ ನಡುವಿನ 40 ಕಿ.ಮೀ. ರಸ್ತೆಯನ್ನು 22 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಮಳೆಗಾಲಕ್ಕೂ ಮುನ್ನ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು. ಆರ್ಥಿಕ ಅಭಿವೃದ್ಧಿಗೆ ಸಹಾಯಕ: ವಿಧಾನಪರಿಷತ್ ಸದಸ್ಯ ಬಿ.ಬಿ. ಶಿವಪ್ಪ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯಮಾಡ ಬಾರದು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹಾದುಹೋಗಿರುವ ಈ ರಸ್ತೆ ಕೊಡಗು, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಸಂಪರ್ಕಕೊಂಡಿಯಾಗಿದ್ದು ಈ ರಸ್ತೆ ನಿರ್ಮಾಣವಾಗುವುದರಿಂದ ಈ ಭಾಗದ ಜನರ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದರು. ಈ ಸಂದರ್ಭದಲ್ಲಿ ವಣಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭವಾನಿ, ಮುಖಂಡರಾದ ದಿವಾಕರ್, ಧರ್ಮರಾಜ್, ಮಾಗೇರಿ ರಾಜೇಗೌಡ ಇದ್ದರು.
ಇಂಡಿಕಾ ಕಾರು ಪಲ್ಟಿ: ಚಾಲಕ ಸಾವು
ಅರಕಲಗೂಡು: ಕಾರು ಉರುಳಿ ಬಿದ್ದು ಚಾಲಕ ಮೃತಪಟ್ಟ ಘಟನೆ ಇತ್ತೀಚೆಗೆ ಅರಕಲಗೂಡು ಕಣಿವೆಬಸಪ್ಪ ರಸ್ತೆಯಲ್ಲಿ ಸಂಭವಿಸಿದೆ.ತಾಲೂಕಿನ ಕಬ್ಬಳಿಗೆರೆ ಗ್ರಾಮದ ರವಿ (25) ಮೃತಪಟ್ಟ ದುರ್ದೈವಿ. ಇಂಡಿಕಾ ಕಾರಿನಲ್ಲಿ ಬಾಡಿಗೆಗೆ ಹಾಸನಕ್ಕೆ ಬಂದು ವಾಪಸ್ ಊರಿಗೆ ಹೋಗಲು ಅರಕಲಗೂಡು ಕಣಿವೆ ಬಸವೇಶ್ವರ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರನ್ನು ನಿರ್ಲಕ್ಷ್ಯತೆಯಿಂದ ಓಡಿಸಿ ಕೊಂಡು ಹೋದ ಪರಿಣಾಮ ಕಾರು ರಸ್ತೆಗೆ ಮಗುಚಿ ಬಿದ್ದಿದೆ.ನಂತರ ತೀವ್ರ ಗಾಯಗೊಂಡ ರವಿ ಅವರನ್ನು ಚಿಕಿತ್ಸೆಗಾಗಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ: ಮೂವರ ಬಂಧನ
ಅರಸೀಕೆರೆ: ತಾಲೂಕಿನ ಕುರುಬರ ಹಳ್ಳಿ ಗೇಟ್ ಹತ್ತಿರ ಹಾಗೂ ಇನ್ನೊಂದು ಪ್ರಕರಣದಲ್ಲಿ ಕೊಂಡವಾಗಿಲು ಗ್ರಾಮದ ಬಸವರಾಜು ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಕೊಮ್ಮಾರಘಟ್ಟದ ಲಕ್ಷ್ಮೀಶ ಉರುಫ್ ಲೋಕೇಶ (21), ಜಾವಗಲ್ ರಸ್ತೆಯ ರಾಜು (30) ಹಾಗೂ ಕೊಂಡವಾಗಿಲು ಗ್ರಾಮದ ಬಸವರಾಜು (55) ಬಂಧಿತರು. 23084 ರೂ ಬೆಲೆಯ ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಹಿನ್ನಲೆಯಲ್ಲಿ ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕ ಆರ್.ವಿ. ಗಂಗಾಧರಪ್ಪ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ಬಾಣಾವರ ಠಾಣೆಯಲ್ಲಿ ದೂರುದಾಖಲಾಗಿದೆ.
ಜೂಜಾಟ: 6 ಜನರ ಬಂಧನ
ಬೇಲೂರು: ಇಸ್ಪೀಟ್ ಆಡುತ್ತಿದ್ದ 6 ಜನರನ್ನು ಬಂಧಿಸಿರುವ ಬೇಲೂರು ಪೊಲೀಸರು ರು. 2070 ಹಣ ವಶಪಡಿಸಿಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಹೆಬ್ಬಾಳು ಗ್ರಾಮದ ಅಪ್ಪಣ್ಣಯ್ಯ ಅವರ ಹಳೆಮನೆಯ ಸಮೀಪದ ಮರದ ಕೆಳಗೆ ಭಾನುವಾರ ಸಂಜೆ ಜೂಜಾಡುತ್ತಿರುವ ವಿಷಯ ತಿಳಿದು ಪಿಎಸ್ಐ ಅಶ್ವಿನ್ ಕುಮಾರ್, ಸಿಬ್ಬಂದಿ ಮಹೇಶ್, ಮಲ್ಲಿಕ್ ಇವರುಗಳು ತೆರಳಿದಾಗ ಹೆಬ್ಬಾಳಿನ ಪಾಪಣ್ಣ, ಮೂರ್ತಿ, ರೇಣುಕಾ, ಮಲ್ಲನಹಳ್ಳಿಯ ತಿಮ್ಮಣ್ಣ, ಹಳೇಬೀಡಿನ ಮನೋಹರ, ಬೇಲೂರಿನ ಹೊನ್ನಪ್ಪ ಇವರು ಜೂಜು ಆಡುತ್ತಿರುವುದು ಕಂಡುಬಂತು. ಆರೋಪಿಗಳನ್ನು ಬಂಧಿಸಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಪಿಎಸ್ಐ ಅಶ್ವಿನ್ಕುಮಾರ್ ತಿಳಿಸಿದ್ದಾರೆ.
ಮಹಿಳೆ ನಾಪತ್ತೆ
ಹಾಸನ: ಕೆ.ಆರ್. ಪುರಂನ ಶ್ವೇತಾ- ಉಜ್ವಲ ಕೇಂದ್ರದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಆಶಾ (20) ಎಂಬಾಕೆ ಫೆ. 27ರಂದು ನಾಪತ್ತೆಯಾಗಿದ್ದಾಳೆ ಎಂದು ಉಜ್ವಲ ಕೇಂದ್ರದ ನಿರ್ದೇಶಕಿ ಚಾಂದಿನಿ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಮರಳು ಸಾಗಣೆ: ಟ್ರ್ಯಾಕ್ಟರ್ ವಶ
ಬೇಲೂರು: ತಾಲೂಕಿನ ಹಾಸನ ರಸ್ತೆಯ ಜೆ. ಸೂರಾಪುರ ಗ್ರಾಮದ ಬಳಿ ಯಗಚಿ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರನ್ನು ಬೇಲೂರು ಪೊಲೀಸರು ವಶಪಡಿಸಿಕೊಂಡು ಚಾಲಕನಾಗಿದ್ದ ಹಾಸನ ಶೇಖರ ಎಂಬಾತನನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಇಲ್ಲಿನ ಪಿಎಸ್ಐ ಅಶ್ವಿನ್ ಕುಮಾರ್ ಅವರು ಕಾರ್ಯನಿಮಿತ್ತ ಹಾಸನ ರಸ್ತೆಯಲ್ಲಿ ತೆರಳುತ್ತಿದ್ದಾಗ ಮರಳು ತುಂಬಿದ ಟ್ರ್ಯಾಕ್ಟರ್ ಬರುತ್ತಿದ್ದುದ್ದನ್ನು ನೋಡಿ ತಡೆದು ವಿಚಾರಿಸಿದಾಗ ಮರಳನ್ನು ತೆಪ್ಪದಲ್ಲಿ ತುಂಬುತ್ತಿರುವ ವಿಷಯ ತಿಳಿಯಿತು. ತಕ್ಷಣ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ಹೋದಾಗ ತೆಪ್ಪ ಕಾಣಿಸಲಿಲ್ಲ. ತೆಪ್ಪದ ಮೂಲಕ ತೆಗೆದ ಮರಳನ್ನು ಮಾತ್ರ ಸಂಗ್ರಹಿಸಿಟ್ಟಿದ್ದು ಕಂಡುಬಂತು. ಈ ಸಂದರ್ಭ ಪೊಲೀಸರಿಗೆ ಮಾಹಿತಿ ನೀಡಿದ ಟ್ರ್ಯಾಕ್ಟರ್ ಚಾಲಕ ಶೇಖರ್, ಟ್ರ್ಯಾಕ್ಟರ್ ರೈತ ಸಂಘದ ಬಸವೇಗೌಡರಿಗೆ ಸೇರಿದ್ದೆಂದು ತಿಳಿಸಿದ್ದಾನೆ. ವಶಕ್ಕೆ ತೆಗೆದುಕೊಂಡ ಟ್ರ್ಯಾಕ್ಟರ್ಗೆ ನೋಂದಣಿ ಸಂಖ್ಯೆ ಇಲ್ಲ.
ನಾಡಗೀತೆ ಅಭಿಯಾನ ಮುಕ್ತಾಯ
ಹಾಸನ: ನಗರದ ವಾಣಿವಿಲಾಸ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ನಾಡಗೀತೆ ಅಭಿಯಾನ ಗಾಯನ ತರಬೇತಿ ಕಾರ್ಯಕ್ರಮ ಮುಕ್ತಾಯ ಸಮಾರಂಭ ನಡೆಯಿತು.
ಇತ್ತಿಚಿಗೆ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಜಾವಗಲಲ್ಪ್ರಸನ್ನ ಮಾತನಾಡಿ, ಮೂರು ದಿವಸಗಳಲ್ಲಿ ಭಾಗವಹಿಸಿದ ಪ್ರತಿ ಮಕ್ಕಳು ಹಾಡನ್ನು ಕಲಿತಿದ್ದಾರೆ. ಇಂತಹ ಸುಗಮ ಸಂಗೀತ ಕಲಿಯುವ ಮೂಲಕ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಶಿಕ್ಷಣಕ್ಕೆ ಸಂಗೀತ ಪೂರಕವಾಗಿದೆ. ನಾಡಿನ ಸಂಸ್ಕೃತಿ, ನೆಲ, ಜಲ ಉಳಿಸುವ ಕೆಲಸ ಹೆಚ್ಚು ಹೆಚ್ಚು ಆಗಬೇಕು ಎಂದು ಕಿವಿಮಾತು ಹೇಳಿದರು. ಕೆಲ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಇಲ್ಲದೆ ಮುಚ್ಚುವ ಪರಿಸ್ಥಿತಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪಂಕಜ ಇತರರು ಇದ್ದರು.
ಈ ತಿಂಗಳ ಪಡಿತರ ಬಿಡುಗಡೆ
ಜಾವಗಲ್: ಅರಸೀಕೆರೆ ತಾಲೂಕಿನ ಪಡಿತರದಾರರಿಗೆ ಮಾರ್ಚ್ ತಿಂಗಳ ಪಡಿತರ ಆಹಾರ ಪದಾರ್ಥಗಳನ್ನು ಬಿಡುಗಡೆ ಮಾಡಲಾಗಿದೆ. ನಿಗದಿಪಡಿಸಿರುವಂತೆ ಪಡಿತರದಾರರಿಗೆ ವಿತರಿಸಲು ತಾಲೂಕು ಆಹಾರ ಶಿರಸ್ತೇದಾರ್ ಗಂಗಾಧರಯ್ಯ ತಿಳಿಸಿದ್ದಾರೆ. ಬಿ.ಪಿ.ಎಲ್ ಕಾರ್ಡ್ ಹೊಂದಿರುವ 1 ಯೂನಿಟ್ ದಾರರಿಗೆ 7 ಕೆ.ಜಿ. ಅಕ್ಕಿ , 2 ಕೆ.ಜಿ ಗೋಧಿ, 1 ಕೆ.ಜಿ. ರಾಗಿ, 1 ಕೆ.ಜಿ. ಸಕ್ಕರೆ, 3 ಲೀ. ಸೀಮೆಎಣ್ಣೆ (ಅನಿಲ ರಹಿತದಾರರಿಗೆ) ನೀಡಲಾಗುವುದು. 2 ಯೂನಿಟ್ ದಾರರರಿಗೆ 15 ಕೆ.ಜಿ. ಅಕ್ಕಿ, 4 ಕೆ.ಜಿ. ಗೋಧಿ, 1 ಕೆ.ಜಿ. ರಾಗಿ, 1 ಕೆ.ಜಿ. ಸಕ್ಕರೆ, 3 ಲೀ. ಸೀಮೆಎಣ್ಣೆ (ಅನಿಲ ರಹಿತದಾರರಿಗೆ) 3 ಮತ್ತು ಮೇಲ್ಪಟ್ಟ ಯೂನಿಟ್ ದಾರರಿಗೆ 22 ಕೆ.ಜಿ. ಅಕ್ಕಿ, 6 ಗೋಧಿ, 2 ಕೆ.ಜಿ. ರಾಗಿ, 1 ಕೆ.ಜಿ. ಸಕ್ಕರೆ, 3-5 ಲೀ. ಸೀಮೆಎಣ್ಣೆ (ಅನಿಲ ರಹಿತದಾರರಿಗೆ) ಮೇಲಿನ ಪ್ರಮಾಣದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.