'ಒಗ್ಗಟ್ಟಾದಾಗ ಮಾತ್ರ ಜನಾಂಗದ ಅಭಿವೃದ್ಧಿ ಸಾಧ್ಯ'
ಸಕಲೇಶಪುರ: ಯಾವುದೇ ಜನಾಂಗ ಒಗ್ಗಟ್ಟಾದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪ್ರೊ. ಓಬಳೇಶ್ ಘಟ್ಟಿ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಬಲಿಜ ಸಮಾಜ ಹಾಗೂ ಬಲಿಜ ಪಟ್ಟಣ ಮಹಿಳಾ ಘಟಕ ಇತ್ತೀಚೆಗೆ ಏರ್ಪಡಿಸಿದ್ದ ಪುರ ಸಭಾ ಅಧ್ಯಕ್ಷ ಸತೀಶ್ ಅವರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ದಿವಂಗತ ರಂಗಶೆಟ್ಟಿ ಅವರ ಕಾಲದಲ್ಲಿದ್ದ ರಾಜಕೀಯ ಸನ್ನಿವೇಶವೇ ಬೇರೆಯಾಗಿತ್ತು ಎಂದು ಅವರು ತಿಳಿಸಿದರು. ತಾಲೂಕು ಬಲಿಜ ಸಮಾಜದ ಅಧ್ಯಕ್ಷ ಭಾಸ್ಕರ್ ನಾಯ್ಡು, ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ್ ಬಲಿಜ ಸಮಾಜದ ಶ್ರೀನಿವಾಸ್, ಬಲಿಜ ಮುಖಂಡ ಲಿಂಗರಾಜು, ಧನಂಜಯ, ಶಾಂತಶೆಟ್ಟಿ ಧರ್ಮಣ್ಣ ಎಪಿಎಂಸಿ ಸದಸ್ಯ ಮೋಹನ್, ಶುಭೇಂದ್ರ ನಾಯ್ಡು ಸತ್ಯಣ್ಣ ಇದ್ದರು.
ಪರಿಸರ ಮಿತ್ರ ಪ್ರಶಸ್ತಿ ಪ್ರದಾನ
ಹಾಸನ: ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆಶ್ರಯದಲ್ಲಿ ಜಿಲ್ಲಾ ಪರಿಸರ ಮಿತ್ರ ಶಾಲೆ-2013-14ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಮಾ. 5ರಂದು ಬೆಳಗ್ಗೆ 11ಕ್ಕೆ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ. ಮೈಸೂರು ವಲಯ ಕಚೇರಿಯ ಹಿರಿಯ ಅಧಿಕಾರಿ ಎಂ. ಲಕ್ಷ್ಮಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಸಿದ್ದಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಜಿ.ಆರ್. ಬಸವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಾವಗಲ್ನ ಮಾಡೆಲ್ ಪ್ರಾಥಮಿಕ ಮತ್ತು ಪ್ರೌಢಶಾಲೆ ಕಾರ್ಯದರ್ಶಿ ಡಾ. ಎಸ್. ವಿನಾಯಕ ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು.
ಲೋಕಾಯುಕ್ತ ಎಸ್ಪಿ ಪ್ರವಾಸ
ಹಾಸನ: ಲೋಕಾಯುಕ್ತ ಎಸ್ಪಿ ಡಾ.ಸಿ.ಬಿ. ವೇದಮೂರ್ತಿ ಹಾಗೂ ತಂಡದವರು ಮಾ. 5ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 2ರವರೆಗೆ ಸಕಲೇಶಪುರ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವರು. ನಂತರ ಮಧ್ಯಾಹ್ನ 3ರಿಂದ 5.30ರವರೆಗೆ ಆಲೂರು ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ. ಭೇಟಿ ಕಾಲದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ವಿಚಾರಣೆ ನಡೆಸಲಿದ್ದಾರೆ.
ಪೋಷಕರ ಮಡಿಲು ಸೇರಿದ ಮಗು
ಮೈಸೂರು: ಪೋಷಕರ ನಿರ್ಲಕ್ಷ್ಯದಿಂದ ಬೇರೆಯವರ ಮನೆಯಲ್ಲಿ ಆಶ್ರಯ ಪಡೆದಿದ್ದ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯು ಮಂಗಳವಾರ ಪೋಷಕರಿಗೆ ಒಪ್ಪಿಸಿದೆ.ಶಕ್ತಿನಗರದ ಕೊಳಚೆ ಪ್ರದೇಶದ ನಿವಾಸಿಯ ನಾಲ್ಕು ವರ್ಷದ ಗಂಡು ಮಗು ನಾಪತ್ತೆಯಾಗಿತ್ತು. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಆರ್ಎಲ್ಎಚ್ಪಿ ಸಂಸ್ಥೆಯ ಮಕ್ಕಳ ಸಹಾಯವಾಣಿಗೆ ಕರೆ ಬಂದಿದ್ದರಿಂದ, ಕಾರ್ಯಕರ್ತರು ಮಗುವನ್ನು ರಕ್ಷಿಸಿ ಬಾಪೂಜಿ ಮಕ್ಕಳ ಆಶ್ರಮಕ್ಕೆ ನೀಡಿದ್ದರು. ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮಂಗಳವಾರ ಮಗುವನ್ನು ಹಾಗೂ ಮಗುವನ್ನು ಕರೆದೊಯ್ದಿದ್ದ ಮಹಿಳೆಯನ್ನು ಪೊಲೀಸರು ಹಾಜರುಪಡಿಸಿದರು. ಸಮಿತಿಯು ವಿಚಾರಣೆ ನಡೆಸಿ ಹೇಳಿಕೆ ಪಡೆದು, ಮಗುವನ್ನು ಪೋಷಕರಿಗೆ ಒಪ್ಪಿಸಿದೆ. ಈ ಪ್ರಕರಣ ಕುರಿತು ಸಂಪೂರ್ಣ ತನಿಖೆ ನಡೆಸಿ ಮಾ.8ರೊಳಗೆ ಸಮಿತಿಗೆ ವರದಿ ನೀಡುವಂತೆ ಮಕ್ಕಳ ಕಲ್ಯಾಣ ಸಮಿತಿಯು ಉದಯಗಿರಿ ಠಾಣೆ ಪೊಲೀಸರಿಗೆ ಸೂಚಿಸಿದೆ. ಅಲ್ಲದೆ, ಮಗುವನ್ನು ಅಂಗನವಾಡಿ ಕೇಂದ್ರಕ್ಕೆ ಸೇರಿಸಲು ಹಾಗೂ ತೊದಲಿಸಿ ಮಾತನಾಡುವ ಮಗುವಿಗೆ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸಲು ನಿರ್ಧರಿಸಿದೆ.
ಎತ್ತಿನಹೊಳೆ ಉಪಯೋಗಕಾರಿ
ಮೈಸೂರು: ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಎತ್ತಿನಹೊಳೆ ಯೋಜನೆಯಿಂದ ತುಮಕೂರು, ಕೋಲಾರ, ಚಿಕ್ಕ ಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಮತ್ತಿತರ ಪ್ರದೇಶಗಳಿಗೆ ಕುಡಿಯುವ ನೀರು ದೊರಕಿದಂತಾಗಿದೆ ಎಂದು ಸಮಾಜ ಸೇವಕ ಎನ್.ಜನಾರ್ದನ್ ಹೇಳಿದ್ದಾರೆ. ನೇತ್ರಾವತಿ ನದಿ ತಿರುವಿನ ಎತ್ತಿನಹೊಳೆ ಯೋಜನೆಯನ್ನು ಹಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಯೋಜನೆ ಜಾರಿಯಾಗದಂತೆ ತಡೆದಿದ್ದರು. ಅದರಲ್ಲೂ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ ಹಾಗೂ ಪೇಜಾವರ ಶ್ರೀಗಳಿಂದ ಹಿಡಿದು ದಕ್ಷಿಣ ಕನ್ನಡ ಜಿಲ್ಲೆಯ ಫಾದರ್ಗಳು ಇದರ ವಿರುದ್ಧ ನಿಂತಿದ್ದರು. ಇದನ್ನು ಲೆಕ್ಕಿಸದ ಸಿದ್ದರಾಮಯ್ಯ ಸರ್ಕಾರ ಯೋಜನೆಗೆ ಚಾಲನೆ ನೀಡಿದೆ. ಈ ಮೇಲ್ಕಂಡ ಜಿಲ್ಲೆಗಳ ಜನರಿಂದ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಧರ್ಮಕ್ಷೇತ್ರಗಳು ಬೆಳೆದಿವೆ. ಇದನ್ನರಿತು ಮುಂದಾದರೂ ಎತ್ತಿನಹೊಳೆ ಯೋಜನೆಗೆ ವಿರೋಧ ವ್ಯಕ್ತಪಡಿಸುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಭಕ್ತರು ಬರುವುದನ್ನೇ ನಿಲ್ಲಿಸಬೇಕಾಗುತ್ತದೆ. ಅದರಿಂದ ಧರ್ಮಕ್ಷೇತ್ರಗಳ ಹುಂಡಿಗಳು ಖಾಲಿಯಾಗುತ್ತವೆ ಎಂದು ಎಚ್ಚರಿಸಿದ್ದಾರೆ.
ಸಾಮೂಹಿಕ ಷಷ್ಟ್ಯಬ್ದಿಶಾಂತಿ
ಮೈಸೂರು: ನಗರದ ಕೆ.ಆರ್. ಮೊಹಲ್ಲಾದ ಕೆ.ಎಂ. ಪ್ರವೀಣ್ಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಹಾಗೂ ಎಲ್ಲ ಜನಾಂಗದವರಿಗೂ ಮಾ. 23ರಂದು ನಂಜರಾಜ ಬಹದ್ದೂರ್ ಛತ್ರದಲ್ಲಿ ಸಾಮೂಹಿಕ ಷಷ್ಟ್ಯಬ್ದ ಪೂರ್ತಿ ಶಾಂತಿ ನಡೆಸಲಾಗುವುದು. ಷಷ್ಟ್ಯಬ್ದಪೂರ್ತಿ ಶಾಂತಿ ಆಚರಿಸಿಕೊಳ್ಳುವವರಿಗೆ ಟ್ರಸ್ಟ್ ವತಿಯಿಂದ ಉಚಿತವಾಗಿ ಸೀರೆ, ಪಂಚೆ, ಪೂಜಾ ಸಾಮಗ್ರಿಗಳನ್ನು ಕೊಡಲಾಗುವುದು. ಆಸಕ್ತರು ಮಾ. 15ರೊಳಗೆ ಕೃಷ್ಣಮೂರ್ತಿಪುರಂನ ರಾಮಮಂದಿರದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.
ರೈತರಿಗೆ ಸಲಹೆ
ಮೈಸೂರು: ಜಿಲ್ಲೆಯಲ್ಲಿ ಮಾ. 5ರಿಂದ 7ರವರೆಗೆ ಮೋಡ ಕವಿದ ವಾತಾರವರಣವಿದ್ದು, ಚದುರಿದಂತೆ ಅಲ್ಲಲ್ಲಿ ತುಂತುರು ಮಳೆ ಬರುವ ಸಾಧ್ಯತೆಯಿದೆ ಎಂದು ಸಾಧ್ಯತೆ ಇದೆ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರಾಧೀಕ್ಷಕ ಡಾ.ಸಿ. ಗೋವಿಂದರಾಜು, ಸಹ ಸಂಶೋಧಕ ಎನ್. ನರೇಂದ್ರಬಾಬು ತಿಳಿಸಿದ್ದಾರೆ. ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಕೆಲವು ಸಲಹೆ ಸೂಚನೆ ನೀಡಿದ್ದಾರೆ. ಸಪೋಟ ಅಥವಾ ಸೀಬೆಗೆ ಕಪ್ಪು ಶಿಲೀಂದ್ರ ತಗುಲಿದ್ದರೆ ಅದರ ನಿಯಂತ್ರಣಕ್ಕೆ 20 ಗ್ರಾಂ ಕಾನ್ ಪ್ಲೋರ್ ಹಿಟ್ಟನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಮಾವು ಬೆಳೆಗೆ ಜಿಗಿಹುಳು ಮತ್ತು ಬೂದಿ ರೋಗ ಬಾಧಿಸಿದ್ದರೆ, 1.5 ಮಿ.ಲೀ. ರೋಗರ್ ಜತೆಗೆ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸುವುದು. ಬತ್ತಕ್ಕೆ ಸತುವಿನ ಕೊರತೆ ಕಂಡುಬಂದಲ್ಲಿ ಎಕರೆಗೆ 8 ಕೆಜಿ ಸತುವಿನ ಸಲ್ಫೇಟ್ ರಸಗೊಬ್ಬರದ ಜತೆ ಮಿಶ್ರಣ ಮಾಡಿ ಚೆಲ್ಲುವಂತೆ ತಿಳಿಸಿದ್ದಾರೆ.