ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚುನಾವಣಾ ಸೋಲಿನಿಂದ ನಾನು ಧೃತಿಗೆಟ್ಟಿಲ್ಲ'

Srinivasa Murthy VN
Updated On : 5 Mar 2014, 12:19 pm

ಅರಸೀಕೆರೆ: ಕಳೆದ ವಿಧಾನಸಭಾ ಚುನಾವಣೆಯ ಸೋಲಿನಿಂದ ಧೃತಿಗೆಟ್ಟಿಲ್ಲ. ಕೆಲ ವೈಯಕ್ತಿಕ ಕಾರಣಗಳಿಂದಾಗಿ ರಾಜಕೀಯ ಚಟುವಟಿಕೆಗಳಿಂದ ದೂರವಿದ್ದೇನೆ ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಜೆ.ಪಿ. ಅಭ್ಯರ್ಥಿಯಾಗಿದ್ದ ಡಾ. ಲೋಕೇಶ್ ತಿಳಿಸಿದ್ದಾರೆ.
ಸೋಮವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ತಾವು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಮ್ಮ ನಾಯಕರಾಗಿದ್ದು ಅವರ ಬೆಂಬಲಿಗರಾಗಿಯೇ ಮುಂದುವರೆಯುತ್ತೇನೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಟೀಕೆ, ಟಿಪ್ಪಣಿಗಳಿಗೆ ಹೆದರಿ ದೂರ ಸರಿಯುವ ಜಾಯಮಾನ ತಮ್ಮದಲ್ಲ ಎಂದು ಹೇಳಿದ ಅವರು, ಕೆಲವರು ತಮ್ಮ ವಿರುದ್ಧ ನಿರಂತರ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅಂತಹ ವ್ಯಕ್ತಿಗಳಿಗೆ ದೇವರು ಒಳ್ಳೆಯದು ಮಾಡಲಿ ಎಂದು ಛೇಡಿಸಿದರು.
ವಾಗ್ದಾಳಿ: ಕಳೆದ ಉಪಚುನಾವಣೆಯಲ್ಲಿ, ತಮಗೆ ಗೆಲ್ಲುವ ಉತ್ತಮ ಅವಕಾಶವಿತ್ತು. ಆದರೆ ಇಂತಹ ಸುಸಂದರ್ಭವನ್ನು ರಾಷ್ಟ್ರೀಯ ಪಕ್ಷವೊಂದರ ಕೆಲ ಮುಖಂಡರು ಅವರ ಸ್ವಾರ್ಥಕ್ಕಾಗಿ ತಮ್ಮನ್ನು ನಿರಂತರ ತೇಜೋವಧೆ ಮಾಡುವ ಮೂಲಕ ವಿಕೃತ ಸಂತೋಷ ಅನುಭವಿಸಿದರು. ಆದರೆ, ಅನಿರೀಕ್ಷಿತವಾಗಿ ಕ್ಷೇತ್ರ ಪ್ರವೇಶಿಸಿದವರಿಗೆ ಮತದಾರ ತಕ್ಕ ಉತ್ತರವನ್ನೇ ನೀಡಿದ್ದಾನೆ ಎಂದರು.
ವ್ಯಂಗ್ಯ: ತಮಗೆ ಕೆ.ಜೆ.ಪಿ.ಯಿಂದ ಟಿಕೆಟ್ ದೊರೆಯದಂತೆ  ಮಾಡಲು ಸತತ ಪ್ರಯತ್ನ ಮಾಡಿ ನಿರಾಶರಾದವರು ತಮ್ಮ ಗೆಲುವಿಗಿಂತ ನನ್ನ ಸೋಲೇ ಮುಖ್ಯ ಎನ್ನುವಂತೆ ವಿಧಾನಸಭಾ ಚುನಾವಣೆ ಆರಂಭದಿಂದ ಅಂತ್ಯದವರೆಗೆ ತಮ್ಮ ವಿರುದ್ಧ ಅಪಪ್ರಚಾರ ಮಾಡಿದರು ಎಂದ ಅವರು, ಮೂಲಕ ಜೆ.ಡಿ.ಎಸ್.ನ ಅಭೂತಪೂರ್ವ ಗೆಲುವಿಗೆ ಸಹಕರಿಸಿ ತಮ್ಮ ಅಂತ್ಯವನ್ನು ತಾವೇ ಕಂಡುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಕಣಕಟ್ಟೆ ಕುಮಾರ್, ಮಾದನಹಳ್ಳಿ ಚಂದ್ರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement