ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜನಪ್ರತಿನಿಧಿಗಳಿಗೆ ಬದ್ಧತೆ ಇರಬೇಕು

Srinivasa Murthy VN
Updated On : 5 Mar 2014, 12:17 pm

ಹೊಳೆನರಸೀಪುರ: ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತಂದು ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲು ಜನಪ್ರತಿನಿಧಿಗಳಾದವರಿಗೆ ಬದ್ಧತೆ ಇರಬೇಕು ಎಂದು ಅರಕಲಗೂಡು ಕ್ಷೇತ್ರದ ಶಾಸಕರಾದ ಎ. ಮಂಜು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ವತಿಯಿಂದ 10.75 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಹಳ್ಳಿಮೈಸೂರು ಹೋಬಳಿಗೆ ಸೇರಿದ 19 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಗೆ ಭಾನುವಾರದಂದು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿನ ಕಾಂಗ್ರೇಸ್ ಸರ್ಕಾರ ಜನಪರವಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸುವಂತೆ ಹೇಳಿದರು.
ಶಾಶ್ವತ ಕುಡಿಯುವ ನೀರು: ಹಳ್ಳಿಮೈಸೂರು ಭಾಗದಲ್ಲಿ ಹೊಗೆಸೊಪ್ಪು ಬೆಳೆಯುವ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಾರುಕಟ್ಟೆಯನ್ನು ಮಂಜೂರು ಮಾಡಿಸಿದ ರೀತಿಯಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಾವು ನೀಡಿದ ಮಾತಿನಂತೆ ಹೇಮಾವತಿ ನದಿಯಿಂದ ಹಳ್ಳಿಮೈಸೂರು ಹೋಬಳಿಯ ಹಲವು ಹಳ್ಳಿಗಳಿಗೆ ಶುದ್ಧವಾದ ಕುಡಿಯುವ ನೀರಿಗಾಗಿ ಶಾಶ್ವತ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
ಕೆರೆ ಅಭಿವೃದ್ಧಿಗೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ನಾನಾ ಜನಪ್ರಿಯ ಯೋಜನೆಗಳನ್ನು ಕೇವಲ ಬಾಯಿ ಮಾತಿನಲ್ಲಿ ಹೇಳದೇ, ಅವುಗಳೆಲ್ಲವನ್ನೂ ಅನುಷ್ಠಾನಕ್ಕೆ ತಂದಿದ್ದು, ಮುಂದಿನ ದಿನಗಳಲ್ಲಿ ಶ್ರವಣೂರಿನಿಂದ ದೊಡ್ಡಹಳ್ಳಿ ಹಾಗೂ ಕೇರಳಾಪುರದಿಂದ ಗುಡ್ಡೇನಹಳ್ಳಿವರೆಗಿನ ಹಲವು ಗ್ರಾಮಗಳಿಗೂ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದ ಶಾಸಕ ಎ. ಮಂಜು ಅವರು, 58ಕೋಟಿ ರು  ವೆಚ್ಚದಲ್ಲಿ ಈ ಭಾಗದ 58 ಕೆರೆಗಳ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
11 ತಿಂಗಳಲ್ಲಿ ಪೂರ್ಣ: ಹಳ್ಳಿಮೈಸೂರು ಹೋಬಳಿಗೆ ಹೇಮಾವತಿ ನದಿಯಿಂದ ಶಾಶ್ವತ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ ಕಾಮಗಾರಿಗೆ 4 ಬಾರಿ ಟೆಂಡರ್ ಕರೆದರೂ, ಕೆಲವು ರಾಜಕಾರಣಿಗಳ ಒತ್ತಡದಿಂದ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಆದರೆ, ಕೆಲವು ಗುತ್ತಿಗೆದಾರರಿಗೆ ಧೈರ್ಯ ತುಂಬಿದ ನಂತರ ಈ ಯೋಜನೆಗೆ ಪುನಃ ಟೆಂಡರ್ ಕರೆಯಲಾಗಿದ್ದು, 11 ತಿಂಗಳ ಅವಧಿಯಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾನಾ ವೇತನಗಳಿಗೆ ಆಯ್ಕೆಯಾಗಿರುವ 108 ಅರ್ಹ ಫಲಾನುಭವಿಗಳಿಗೆ ಶಾಸಕ ಎ. ಮಂಜು ಅವರು ದೃಢೀಕರಣ ಪತ್ರ ಹಾಗೂ ನಾನಾ ಫಲಾನುಭವಿಗಳಿಗೆ ಮಂಜೂರಾಗಿರುವ ನಾನಾ ವೇತನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜಿಪಂ ಇಇ ನಾಗರಾಜ್, ತಹಸೀಲ್ದಾರ್ ಆರ್.ಬಿ. ಶಿವಶಂಕರಪ್ಪ, ಕೆಪಿಸಿಸಿ ಸದಸ್ಯ ಪುಟ್ಟೇಗೌಡ, ಹಳ್ಳಿಮೈಸೂರು ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಂಬಶಿವಪ್ಪ, ತಾಪಂ ಇಓ ತಮ್ಮಣ್ಣಗೌಡ, ಜಿ.ಪಂ ಎಇ ಸತೀಶ್ ಬಾಬು, ಪ್ರಶಾಂತ್, ಹನುಮಂತಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement