ರಾಜ್ಯದ ಪ್ರಗತಿಗೆ ಕಾಂಗ್ರೆಸ್ ಕಾರಣ
ಕ.ಪ್ರ.ವಾರ್ತೆ ಹಾಸನ ಮಾ. 4
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಸ್ತೆ ಸಂಪರ್ಕ ಸಾಧನ, ಕುಡಿಯುವ ನೀರು, ಗ್ರಾಮೀಣಾಭಿವೃದ್ಧಿ, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ನೀರಾವರಿಗೆ ಹೆಚ್ಚಿನ ಒತ್ತನ್ನು ನೀಡುವ ಮೂಲಕ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ನಾನಾ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಈಗಾಗಲೇ ಎರಡು ಬಾರಿ ಆಯವ್ಯಯ ಮಂಡಿಸಿದ್ದು, ಸರ್ಕಾರ ಅಧಿಕಾರಕ್ಕೆ ಬಂದು 9 ತಿಂಗಳಲ್ಲಿ ನೀಡಿದ್ದ 160 ಆಶ್ವಾಸನೆಗಳ ಪೈಕಿ 95 ಆಶ್ವಾಸನೆಗಳನ್ನು ಈಗಾಗಲೇ ಈಡೇರಿಸಲಾಗಿದೆ ಎಂದು ಹೇಳಿದರು.
ಏರಿಕೆ: ರು. 1.38 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದು, ಶಿಕ್ಷಣಕ್ಕೆ ರು. 21 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ. ನೀರಾವರಿಗೆ ರು. 11 ಸಾವಿರ ಕೋಟಿ, ವಿದ್ಯುತ್ಗೆ ರು. 11 ಸಾವಿರ ಕೋಟಿ, ಗ್ರಾಮೀಣಾಭಿವೃದ್ಧಿಗೆ ರು. 9 ಸಾವಿರ ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ ರು. 15 ಸಾವಿರ ಕೋಟಿ ಮೀಸಲಿರಿಸಿರುವುದು ಇತಿಹಾಸವಾಗಿದೆ. ಬಡವರಿಗೆ ಆಶ್ರಯ ಯೋಜನೆಯ ಮನೆಗಾಗಿ ಪಡೆದಂತಹ ಸಾಲ ಮತ್ತು ಬಡ್ಡಿಯ ಮೊತ್ತವಾದ ರು. 2040 ಕೋಟಿ ಹಣವನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಿದೆ. ಜೊತೆಗೆ ರೈತರ ಸಾಲ ರು. 2 ಲಕ್ಷದಿಂದ ರು. 3 ಲಕ್ಷಗಳವರೆಗೆ ಏರಿಕೆ ಮಾಡಿದೆ ಎಂದು ಹೇಳಿದರು. ಕಾವೇರಿ ನೀರಾವರಿ ನಿಗಮಗಳ ಯೋಜನಗೆ ರು. 800 ಕೋಟಿಗೂ ಹೆಚ್ಚು ಹಣವನ್ನು ಮಂಜೂರಾತಿ ನೀಡಿದ್ದು, ಕೆಲಸ ಪ್ರಾರಂಭವಾಗಲಿವೆ. ಅಂಗನವಾಡಿ ನೌಕರರ ವೇತನ ಹೆಚ್ಚಳ, ವಿಧವಾ ವೇತನ ಹೆಚ್ಚಳ ಸೇರಿದಂತೆ ಬಡ ಜನರ ಪರವಾಗಿ ಸರ್ಕಾರ ನಡೆಸಲಾಗುತ್ತಿದೆ ಎಂದರು.
ರು. 746 ಕೋಟಿ ಅನುದಾನ: ಜಿಲ್ಲೆಯ ನಾನಾ ಅಭಿವೃದ್ಧಿ ಕಾರ್ಯಗಳಿಗೆ 746 ಕೋಟಿ ರು.ಗಳ ಅನುದಾನವನ್ನು ನೀಡುವ ಮೂಲಕ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಶ್ರಮಿಸುತ್ತಿದೆ. ಪಿಎಂಜಿಎಸ್ವೈ, ಸಿಎಂಜಿಆರ್ವೈ, ಎಸ್ಸಿಪಿ, ಟಿ ಎಸ್ಪಿ, ಅಪೆಂಡಿಕ್ಸ್- ಇ ಸೇರಿದಂತೆ ನಾನಾ ಯೋಜನೆಗಳಡಿ ಜಿಲ್ಲೆಯ ಅಭಿವೃದ್ಧಿಗೆ ಹಣವನ್ನು ನೀಡಿದ್ದು, ಅಧಿಕಾರಿಗಳು ಹಣ ದುರುಪಯೋಗ ಆಗದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದರು. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ 307 ಕಿಮೀಗೆ ರು. 170 ಕೋಟಿಗಳನ್ನು ನೀಡಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳ ಪ್ರಮುಖ ರಸ್ತೆಗಳು ಸೇರಲಿವೆ. ಅಪೆಂಡಿಕ್ಸ್ ಇ ನಲ್ಲಿ ನಾನಾ ರಸ್ತೆಗಳು, ಸೇತುವೆಗಳ ನಿರ್ಮಾಣಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ ಎಂದು ಅವರು ತಿಳಿಸಿದರು.
ರು. 184 ಕೋಟಿ: ಜಿಲ್ಲೆಯಲ್ಲಿ ಕುಡಿಯುವ ನೀರನ್ನು ಒದಗಿಸುವಂತೆ 1.5 ಕೋಟಿ ರು.ಗಳನ್ನು ಜಿಲ್ಲಾಡಳಿತಕ್ಕೆ ಎಂದ ಸಚಿವರು, 150ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿಲ್ಲದೆ ಟ್ಯಾಂಕರ್ ಮೂಲಕ ನೀರು ಒದಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಅಧಿವೇಶನದಲ್ಲಿ 184 ಕೋಟಿ ರು.ಗಳನ್ನು ನೀಡಲಾಗಿದೆ ಎಂದು ಹೇಳಿದರು.
ಶೀಘ್ರ ಕಾಮಗಾರಿ ಆರಂಭ: ಶಾಸಕ ಎ. ಮಂಜು ಮಾತನಾಡಿ, ಕಾಂಗ್ರೆಸ್ ಸರ್ಕಾರ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದಂತ ಭರವಸೆಗಳ ಪೈಕಿ ಶೇ. 60ರಿಂದ 75ರಷ್ಟನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸಿದೆ. 2013-14ನೇ ಸಾಲಿಗೆ ಜಿಲ್ಲೆಯ ಅಭಿವೃದ್ಧಿಗೆ 746 ಕೋಟಿ ರು.ಗಳ ಅನುದಾನ ನೀಡಿದ್ದು, ಈ ಪೈಕಿ ರು. 20 ಕೋಟಿ ಹಣ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಪ್ರಾರಂಭಿಸುವುದಾಗಿ ಹೇಳಿದರು.
ಇದೇ ವೇಳೆ, 44 ಹಳ್ಳಿಗಳಿಗೆ ಹಾಗೂ 88 ಕೆರೆಗಳಿಗೆ ನೀರು ಒದಗಿಸುವಂತಹ ಏತ ನೀರಾವರಿಗೆ ಹಾಗೂ ಹಾಸನದ ಮೆಡಿಕಲ್ ಕಾಲೇಜಿಗೆ ರು. 10 ಕೋಟಿ ಅನುದಾನಕ್ಕೆ ಕ್ಯಾಬಿನೆಟ್ನಲ್ಲಿ ಅನುಮತಿ ಲಭ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿ, ದೇವೇಗೌಡರು ಕೆ ಎಂಆರ್ಪಿಯಿಂದ ರು. 30 ಕೋಟಿಗಳ ಹಣ ಕೊಡಿಸಿದ್ದು, ನಗರದಲ್ಲಿ ಸಾಕಷ್ಟು ರಸ್ತೆ ಕಾಮಗಾರಿಗಳನ್ನು ನಡೆಸಲಾಗಿದೆ. ಜೊತೆಗೆ ಹೇಮೆಯಿಂದ ನಗರಕ್ಕೆ ನೀರಿರಾಗಿ ರು. 438 ಕೋಟಿ ಯೋಜನೆಯಾಗಿದ್ದು, ಚುನಾವಣೆ ಇಲ್ಲವಾಗಿದ್ದರೆ ಕಾಮಗಾರಿಯು ಪ್ರಾರಂಭವಾಗುತ್ತಿತ್ತು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದಲ್ಲ ಎಂದ ಅವರು, ಹಾಸನ ವೈದ್ಯಕೀಯ ಕಾಲೇಜಿಗೆ 10 ಕೋಟಿ ರು.ನೀಡಿರುವುದು ಸಾಲದು. ಆದ್ದರಿಂದ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ನಗರಸಭೆ ಅಧ್ಯಕ್ಷೆ ವಿದ್ಯಾ ಆನಂದ್, ಜಿಲ್ಲಾಧಿಕಾರಿ ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಹಾಗೂ ಇತರರು ಇದ್ದರು.
'ಸಚಿವರು ಇಲ್ಲೇ ಜಾಲಿ ಮಾಡ್ಬೇಕು'
ಶಾಸಕ ವೈ.ಎನ್. ರುದ್ರೇಶ್ ಗೌಡ ಮಾತನಾಡಿ, ಸಚಿವರು ಇಂತಹ ಕಾರ್ಯಕ್ರಮಗಳನ್ನು ತಿಂಗಳಲ್ಲಿ ಎರಡು ಬಾರಿಯಾದರೂ ಹಮ್ಮಿಕೊಳ್ಳಬೇಕು. ಆದರೆ ಸಚಿವರು ಹೆಚ್ಚಾಗಿ ಮಡಿಕೇರಿಗೆ ಹೋಗುತ್ತಾರೆ. ಅಲ್ಲಿ ಜಾಲಿ ಮಾಡೋಕೆ ಹೋಗ್ತಾರೆ ಅನ್ಸುತ್ತೆ. ಆದ್ದರಿಂದ ಸಚಿವರು ಜಿಲ್ಲೆಗೆ ಹೆಚ್ಚಾಗಿ ಬಂದು ಇಲ್ಲಿಯೇ ಜಾಲಿ ಮಾಡಬೇಕು ಎಂದ ಅವರು, ಜಿಲ್ಲೆಗೆ ಒಂದೆ ಬಾರಿ ಇಷ್ಟೊಂದು ಅನುದಾ ನೀಡಿರುವುದು ಕಾಂಗ್ರೆಸ್ಸ್ರ್ಕಾರವಾಗಿದೆ. ಇದನ್ನು ಬಿಟ್ಟರೆ ಹಿಂದೆ ದೇವೇಗೌಡರ ಕಾಲದಲ್ಲಿ ಹೆಚ್ಚಿನ ಅನುದಾನ ನೀಡಿದ್ದರು. ದೇವೇಗೌಡರು ಹೆಚ್ಚಿನ ಅವಧಿ ಅಧಿಕಾರದಲ್ಲಿ ಇದ್ದಿದ್ದರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿಯಲ್ಲ ಸಾಗುತ್ತಿತ್ತು ಎಂದು ಹೊಗಳಿದರು.