ಹಾಲು ಉತ್ಪಾದನೆ ಲಕ್ಷಾಂತರ ಕುಟುಂಬಗಳಿಗೆ ಜೀವನಾಧಾರ
ಆಲೂರು: ಹಾಲು ಉತ್ಪಾದನೆ ರಾಜ್ಯದ ಗ್ರಾಮೀಣ ಜನರ ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಯಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಹಾಗೂ ಗ್ರಾಮಾಂತರ ಪ್ರದೇಶದ ಲಕ್ಷಾಂತರ ಕುಟುಂಬಗಳಿಗೆ ಜೀವನಾಧರ ನೀಡುವ ಮುಖ್ಯ ಕಸುಬಾಗಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮರಸು ಹೊಸಳ್ಳಿ ಗ್ರಾಮದಲ್ಲಿ ಮಂಗಳವಾರ ಹಾಲು ಉತ್ಪಾದಕ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೈನುಗಾರಿಕೆ ಪೌಷ್ಠಿಕ ಆಹಾರದ ಪೂರೈಕೆಯ ಜೊತೆಗೆ ಕೃಷಿಗೆ ಪೂರಕವಾಗಿ ಉತ್ತಮ ಸ್ವ- ಉದ್ಯೋಗವಾಗಿದ್ದು, ವರ್ಷವಿಡೀ ನಿರಂತರ ಆದಾಯ ತರಬಲ್ಲದು ಎಂದರು.
ಅಲ್ಲದೇ, ಗ್ರಾಮಸ್ಥರು ಎಲ್ಲಾ ಹಾಲನ್ನು ಮಾರಾಟ ಮಾಡದೇ ಪ್ರತಿ ದಿನ ಎಲ್ಲಾ ಕುಟುಂಬದ ಸದಸ್ಯರು ತಲಾ ಒಂದು ಲೋಟ ಹಾಲನ್ನಾದರೂ ಕುಡಿದು ಉಳಿದ ಹಾಲನ್ನು ಮಾರಾಟ ಮಾಡಿ, ಲಾಭ ಗಳಿಸುವುದರ ಜೊತೆಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಗ್ರಾಮಸ್ಥರಿಗೆ ಅನುಕೂಲ: ಹಾಸನ ಹಾಲು ಒಕ್ಕೂಟದ ನಿರ್ದೇಶಕ ಎಚ್.ಎಸ್. ಜೈರಾಮ್ ಮಾತನಾಡಿ, ರಾಜ್ಯದಲ್ಲೇ ಜಿಲ್ಲೆ ಹಾಲು ಉತ್ಪಾದನೆಯಲ್ಲಿ 2ನೇ ಸ್ಥಾನ ಪಡೆದಿದ್ದು, ಗ್ರಾಮದ ಡೈರಿಗೆ ಪ್ರತಿದಿನ 700 ರಿಂದ 800 ಲೀಟರ್ ಹಾಲು ಬರುತ್ತಿದ್ದು, ಮರಸು ಹೊಸಳ್ಳಿ ಸೇರಿದಂತೆ ಹಳೇ ಆಲೂರು, ಸುಗ್ಗನಹಳ್ಳಿ, ಮರಸುಕೊಪ್ಪಲು ಹಾಗೂ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲವಾಗಿದೆ ಎಂದರು.
ಸೂಕ್ತ ಮೇವು ಅವಶ್ಯಕ: ಕಣತೂರು ಗ್ರಾಮಪಂಚಾಯ್ತಿ ಅಧ್ಯಕ್ಷ ಎನ್.ಆರ್. ನಟರಾಜ್ ಮಾತನಾಡಿ, ಸ್ಥಳಿಯ ತಳಿಗಳಲ್ಲಿ ಹಾಲು ಉತ್ಪಾದನಾ ಸಾಮರ್ಥ್ಯ ಕಡಿಮೆ ಇದ್ದೂ, ಹೈನುಗಾರಿಕೆ ಲಾಭದಾಯಕಗೊಳಿಸಲು ವೈಜ್ಞಾನಿಕವಾಗಿ ನಿರ್ವಹಿಸುವುದರ ಜೊತೆಗೆ, ತಳಿಗಳ ಆಯ್ಕೆ ಅವುಗಳ ಪೋಷಣೆ, ಸೂಕ್ತ ಮೇವು ಅತ್ಯವಶ್ಯಕ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಮರಸು ಹೊಸಳ್ಳಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಕೃಷ್ಣೇಗೌಡ ವಹಿಸಿದ್ದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ, ನಿರ್ದೇಶಕರು, ಅಧಿಕಾರಿಗಳು, ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.