ಅವನತಿಯ ಹಾದಿಯತ್ತ ಅಂಕನಾಥೇಶ್ವರ ದೇಗುಲ
ಎಚ್.ಡಿ.ಗುರುಪ್ರಸಾದ್
ಹೊಳೆನರಸೀಪುರ: ರಾಜರ ಆಳ್ವಿಕೆಗೆ ಒಳಪಟ್ಟಿದ್ದ ಹೊಳೆನರಸೀಪುರ (ನೃಸಿಂಹಪುರಿ) ಉಗಮಕ್ಕಿಂತಲೂ ಪೂರ್ವದಲ್ಲಿಯೇ ಅಸ್ತಿತ್ವದಲ್ಲಿ ಇತ್ತೆನ್ನಲಾದ ಸಮೀಪದ ನಾಗಲಾಪುರ ಗ್ರಾಮದ ಹೊರವಲಯದಲ್ಲಿರುವ ಅಂಕನಾಥೇಶ್ವರ ದೇವಾಲಯ ಪೂಜೆ, ಪುನಸ್ಕಾರಗಳಿಲ್ಲದೇ, ಪುರಾತತ್ವ ಇಲಾಖೆಯ ಅವಗಣನೆಗೆ ಒಳಗಾಗಿ ಶಿಥಿಲಗೊಂಡು ಕಾಲಗರ್ಭದಲ್ಲಿ ಮರೆಯಾಗುವ ಹಂತದಲ್ಲಿದೆ.
ನಿನ್ನೆ ನಿನ್ನೆಗೆ ನಾಳೆ ನಾಳೆಗೆ ಎಂಬುದು ಇಂದಿನ ಮಾತಾದರೂ, ನಿನ್ನೆಯ ಇತಿಹಾಸ ಮತ್ತು ನಾಳಿನ ಭವಿಷ್ಯ ಇಂದಿನ ಜನಜೀವನಕ್ಕೆ ಮಾದರಿಯಾಗಬೇಕಾದ ಅಂಶಗಳು.
ಶತಮಾನಗಳ ಇತಿಹಾಸವನ್ನು ತನ್ನ ಮಡಿಲಿನಲ್ಲಿರಿಸಿಕೊಂಡು ಕಾಲನ ದಾಳಿಗೆ ಸಿಲುಕಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿರುವ ಅಂಕನಾಥೇಶ್ವರ ದೇವಾಲಯ ಜೀರ್ಣೋದ್ಧಾರಗೊಂಡಲ್ಲಿ ಮುಂದಿನ ಶತಮಾನಕ್ಕೂ ತನ್ನ ಗತ ಇತಿಹಾಸವನ್ನು ಸಮರ್ಥವಾಗಿ ಉಳಿಯಬಲ್ಲ ಸ್ಮಾರಕವಾಗಿದ್ದು, ಇದನ್ನು ಉಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಮತ್ತು ನಾಗರಿಕ ಸಮಾಜ ಮನಸ್ಸು ಮಾಡಬೇಕಷ್ಟೇ.
ಶೈವರು, ಜೈನರ ವಾಸಸ್ಥಾನ: 9-10ನೇ ಶತಮಾನದಲ್ಲಿನ ಕೊಂಗಾಳ್ವರ ಕಾಲದ ಇತಿಹಾಸವನ್ನು ಸಾಕ್ಷೀಕರಿಸುವ ನಾಗಲಾಪುರ ಬಳಿಯಲ್ಲಿನ ಅಂಕರಾಯನಕೋಟೆ ಒಂದು ಐತಿಹಾಸಿಕ ಸ್ಥಳ. ಕೊಂಗಾಳ್ವದೇವ ಎಂಬ ಮಾಂಡಲೀಕನ ಆಳ್ವಿಕೆಗೆ ಒಳಪಟ್ಟಿದ್ದ ಈ ಸ್ಥಳದ 10-11ನೇ ಶತಮಾನದ ಕುರುಹುಗಳು ಹೊಳೆನರಸೀಪುರಕ್ಕಿಂತಲೂ ಪೂರ್ವದಲ್ಲಿಯೇ ಶೈವರು ಮತ್ತು ಜೈನರ ವಾಸಸ್ಥಾನವಾಗಿತ್ತು ಎಂಬ ಕುರುಹು, ಇಲ್ಲಿನ ಕೋಟೆಯ ಅವಶೇಷದ ಸ್ಥಳದಲ್ಲಿ ಲಭ್ಯವಿರುವ ಶಾಸನಗಳಲ್ಲಿ ಕಂಡುಬರುತ್ತದೆ.
ಕೊಂಗಾಳ್ವರು ಮತ್ತು ಹೊಯ್ಸಳ ರಾಜರ ನಡುವಿನ ರಾಜ್ಯ ವಿಸ್ತಾರದ ವಿಚಾರದಲ್ಲಿ ಉಂಟಾದ ಸಂಘರ್ಷದಲ್ಲಿ ಹೊಯ್ಸಳರು ವಿಜಯಿಯಾಗಿ ಕ್ರಮೇಣ ಈ ಪ್ರಾಂತ್ಯವು ಹೊಯ್ಸಳರ ಅಧೀನಕ್ಕೆ ಒಳಪಟ್ಟಿತ್ತೆನ್ನಲಾದ ಮಾಹಿತಿಗಳೂ ಇಲ್ಲಿ ಲಭ್ಯವಿದೆ.
ನಂತರದಲ್ಲಿ ಇಲ್ಲಿ ಶೈವರು ಮತ್ತು ಜೈನರ ನಡುವೆ ಸಂಘರ್ಷ ಉಂಟಾಗಿ ಈ ಪ್ರದೇಶದಿಂದ ಜೈನರು ನಿರ್ಗಮಿಸಿದರೆನ್ನುವ ಕಾರಣದಿಂದಾಗಿ 11ನೇ ಶತಮಾನದಿಂದ ಈಚೆಗೆ ಈ ಸ್ಥಳದಲ್ಲಿ ಜೈನರಿಗೆ ಸಂಬಂಧಿಸಿದಂತಹ ಯಾವುದೇ ಶಾಸನಗಳು ಕಾಣಸಿಗುವುದಿಲ್ಲ.
ಇಂದು ಪಾಳು ಕೊಂಪೆ: ಶೈವರ ಕಾಲದಲ್ಲಿ 12ನೇ ಶತಮಾನದ ಅಂಚಿನಲ್ಲಿ ನಿರ್ಮಾಣಗೊಂಡ ಅಂಕನಾಥೇಶ್ವರ ದೇವಾಲಯ ಹೊಯ್ಸಳರು ಶೈವರಿಗೆ ನೀಡುತ್ತಿದ್ದ ಪ್ರೋತ್ಸಾಹ ಮತ್ತು ದತ್ತಿ ದಾನಗಳ ಫಲವಾಗಿ ತಲೆಯೆತ್ತಿತು ಎಂದು ಹೇಳಲಾಗುವ ಅಂದಿನ ಜನನಿಬಿಡ ಸ್ಥಳ ಪಾಳು ಕೊಂಪೆಯಾಗಿದೆ.
ದೇವಾಲಯ ಸಮೀಪದಲ್ಲಿಯೇ ದೇಗುಲ ಪೂರ್ವದಲ್ಲಿ ಇತ್ತೆನ್ನಲಾದ ಅಂಕರಾಯನಕೋಟೆ ಇಂದು ಅತಿಕ್ರಮಣವಾಗಿ ಈ ಸ್ಥಳದಲ್ಲಿದ್ದ ಕೋಟೆಯ ಕುರುಹು, ಜೈನರ ಕಾಲದ ಶಾಸನಗಳು, ಕೋಟೆಯ ಬಾಗಿಲುಗಳು ಅತಿಕ್ರಮಣಕ್ಕೆ ಒಳಗಾಗಿ ಕಣ್ಮರೆಯಾಗಿದೆ.
ಕೋಟೆಯ ಒಳಭಾಗದಲ್ಲಿದ್ದ ಸಾಕಷ್ಟು ಶಾಸನಗಳನ್ನು ಈ ಪ್ರದೇಶವನ್ನು ಕಾಲಾನಂತರದಲ್ಲಿ ತಮ್ಮ ಸಾಗುವಳಿಗೆ ಬಳಸಲಾರಂಭಿಸಿದ ಜನರು ಹೊರಹಾಕಿದ್ದಲ್ಲದೇ, ಎಷ್ಟೋ ಶಾಸನಗಳು ಪಕ್ಕದಲ್ಲಿನ ಹೇಮಾವತಿ ನದಿಯಲ್ಲಿ ಮುಳುಗಿಸಲಾಗಿದೆ ಎನ್ನಲಾಗಿದೆ.
ಶತಮಾನಗಳ ಕಾಲ ಐತಿಹ್ಯವನ್ನು ಮೆರೆದು ವೀರ ಪರಂಪರೆಗಳ ಆಳ್ವಿಕೆಗೆ ಒಳಪಟ್ಟಿದ್ದ ಈ ಪ್ರದೇಶವನ್ನು ಅಭಿವೃದ್ಧಿಪಡಿಸಿ ಮುಂದಿನ ತಲೆಮಾರಿಗೂ ಹಿಂದಿನ ಸಾಮ್ರಾಜ್ಯಗಳ ಭವ್ಯ ಪರಂಪರೆಯನ್ನು ಸಾರಬಹುದಾಗಿದ್ದ ಅವಕಾಶವನ್ನು ಪುರಾತತ್ವ ಇಲಾಖೆ ಕಡೆಗಣಿಸಿದೆ.
ಮೂರು ಗರ್ಭಗೃಹ: 18ನೇ ಶತಮಾನದವರೆವಿಗೂ ಇಲ್ಲಿನ ಅಂಕನಾಥೇಶ್ವರ ದೇವಾಲಯದ ಸುತ್ತಲೂ ಜನರು ನೆಲೆಸಿದ್ದರು, ನಂತರದ ದಿನಗಳಲ್ಲಿ ಬಂದ ಸಾಂಕ್ರಾಮಿಕ ರೋಗಗಳಿಂದ ಅಲ್ಲಿ ನೆಲೆಸಿದ್ದ ಜನರು ಪಕ್ಕದ ನಾಗಲಾಪುರಕ್ಕೆ ತೆರಳಿದರು ಎಂಬ ಇತಿಹಾಸವನ್ನು ಕೂಡ ಈ ಸ್ಥಳವು ಹೊಂದಿದೆ. ಮೈಸೂರು ಒಡೆಯರ ಕಾಲಕ್ಕೆ ಈ ಸ್ಥಳವು ಪಾಳುಬಿದ್ದ ಊರಾಗಿ ಇಲ್ಲಿನ ದೇವಾಲಯದ ಸುತ್ತಲೂ ಮಣ್ಣು ತುಂಬಿಕೊಂಡು ದೇವಾಲಯದ ಅಲ್ಪಭಾಗ ಮಣ್ಣಿನಲ್ಲಿ ಹುದುಗಿಹೋಗಿದೆ. ದೇವಾಲಯ ಛಾವಣಿಯು ಕುಸಿಯುತ್ತಿದ್ದು ಮೂರು ಗರ್ಭಗೃಹಗಳನ್ನು ಹೊಂದಿರುವ ಈ ದೇವಾಲಯವು ಇಂದು ಹಾವು-ಚೇಳುಗಳ ವಾಸಸ್ಥಾನವಾಗಿದೆ.
ದೇವಾಲಯದ ಸುತ್ತಲೂ 9-10ನೇ ಶತಮಾನಕ್ಕೆ ಸೇರಿದ ಐತಿಹಾಸಿಕ ದಾಖಲೆಗಳನ್ನು ಸಾಕ್ಷೀಕರಿಸುವ ಜೈನಮುನಿಗಳ ಅಂತ್ಯವನ್ನು ಘೋಷಿಸುವ ನಿಷಿಧಿ ಕಲ್ಲುಗಳು ಇಂದಿಗೂ ಲಭ್ಯವಿವೆ. ಇವುಗಳನ್ನು ಇಲ್ಲಿನ ಜನರು ನಿಧಿ ಕಲ್ಲುಗಳೆಂದು ಕರೆಯುತ್ತಾರೆ.
ಚಂದ್ರಪ್ರಭಕೀರ್ತಿ ಎಂಬ ಜೈನ ಮುನಿಯ ಕಾಲದ ಪ್ರಮುಖ ಜೈನ ಕೇಂದ್ರವೂ ಆಗಿದ್ದ ಈ ಸ್ಥಳವು ಎಲ್ಲರ ಅವಕೃಪೆಗೆ ಒಳಗಾಗಿ ಮೂಲೆಗುಂಪಾಗಿದೆ. ಈಗಲಾದರೂ ಪುರಾತತ್ವ ಇಲಾಖೆ ಶತಮಾನಗಳಷ್ಟು ಹಳೆಯದಾದ ಐತಿಹ್ಯ ಹೊಂದಿರುವ ಇತಿಹಾಸದ ಕುರುಹು ಸಂರಕ್ಷಿಸುವತ್ತ ಗಮನಹರಿಸಲಿ.