ನಿರಾಶ್ರಿತರ ತಾಣವಾಗಿರುವ ತರಕಾರಿ ಮಾರುಕಟ್ಟೆ
ಸಕಲೇಶಪುರ: ಹತ್ತನೇ ಹಣಕಾಸು ಯೋಜನೆಯಡಿ ಪಟ್ಟಣದ ತರಕಾರಿ ಮಾರ್ಕೆಟ್ ಆವರಣದಲ್ಲಿ ನಿರ್ಮಿಸಲಾಗಿರುವ ತರಕಾರಿ ಮಾರುಕಟ್ಟೆ ಕಟ್ಟಡ ನಿರಾಶ್ರಿತರ ತಾಣವಾಗಿ ಮಾರ್ಪಟ್ಟಿದೆ.
2005-06 ರ ಅವಧಿಯಲ್ಲಿ ಪಟ್ಟಣದಲ್ಲಿ ವ್ಯವಸ್ಥಿತ ತರಕಾರಿ ಮಾರುಕಟ್ಟೆ ನಿರ್ಮಿಸುವ ಉದ್ದೇಶದಿಂದ ಅಂದಿನ ಪುರಸಭೆ ಅಧ್ಯಕ್ಷೆ ಲಕ್ಷ್ಮಮ್ಮ ಮಾರುಕಟ್ಟೆ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದರು. 2008 ರಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಮುಕ್ತಾಯಗೊಂಡು ಪುರಸಭೆಗೆ ಹಸ್ತಾಂತರಿಸಲಾಯಿತಾದರೂ ಅಧಿಕ ಬಾಡಿಗೆ ವಿಧಿಸಿದ ಕಾರಣ ಈ ಕಟ್ಟಡದಲ್ಲಿರುವ ಮಳಿಗೆಗಳನ್ನು ಬಾಡಿಗೆ ಪಡೆಯಲು ವರ್ತಕರು ಮುಂದೆ ಬಾರದ ಕಾರಣ ಕಾಲ ಕ್ರಮೇಣ ಈ ಮಳಿಗೆಗಳಲ್ಲಿ ಅನಧಿಕೃತವಾಗಿ ನಾನಾ ಅಂಗಡಿಗಳು ತಲೆ ಎತ್ತಿದವು.
ಇದನ್ನು ಗಮನಿಸಿದ 2010 ರಲ್ಲಿ ಪುರಸಭೆ ಅಧ್ಯಕ್ಷರಾಗಿದ್ದ ಎಸ್.ಡಿ ಆದರ್ಶ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಮರು ಟೆಂಡರ್ ಮಾಡಲು ಯೋಜನೆ ರೂಪಿಸಿದ್ದರು.
ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದ ವರ್ತಕರು 2011 ರಲ್ಲಿ ನಡೆದ ಮರುಟೆಂಡರ್ನಲ್ಲಿ ಯಾರು ಭಾಗವಹಿಸಿರಲಿಲ್ಲ. ನಂತರದ ದಿನಗಳಲ್ಲಿ ಮತ್ತೆ ಈ ಕಟ್ಟಡದಲ್ಲಿ ಅನಧಿಕೃತ ಅಂಗಡಿಗಳು ತಲೆ ಎತ್ತಿತು. ಸಮೀಪದ ಅಂಗಡಿ ಮಾಲೀಕರಿಗೆ ಈ ಕಟ್ಟಡ ಗೋದಾಮಾಗಿ ಪರಿವರ್ತನೆಯಾಗಿದ್ದರೆ, ಸಮೀಪದ ನಿವಾಸಿಗಳಿಗೆ ಬಟ್ಟೆ ಒಣಗಿಸುವ ತಾಣವಾಗಿಯೂ ಮಾರ್ಪಟ್ಟಿದೆ.
ಅಲ್ಲದೆ ಅಲೆಮಾರಿಗಳ ವಾಸಸ್ಥಳವಾಗಿರುವ ಈ ಕಟ್ಟಡದ ಮುಂಭಾಗದಲ್ಲಿ ಗಲೀಜು ತುಂಬಿ ತುಳುಕುತ್ತಿದೆ. ಇದರಿಂದಾಗಿ ಇಲ್ಲಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಅಪಾರ ವೆಚ್ಚಮಾಡಿ ಕಟ್ಟಲಾಗಿರುವ ಕಟ್ಟಡವನ್ನು ಸದುಪಯೋಗಪಡಿಸಿಕೊಳ್ಳಲು ಪುರಸಭೆ ವಿಫಲವಾಗಿದೆ ಎಂಬುದರಲ್ಲಿ ಸಂಶಯವಿಲ್ಲ.