ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಲಾಖೆಯಲ್ಲಿ ನೋಂದಣಿ ಮಾಡಿಸಲು ಕಾರ್ಮಿಕರಿಗೆ ಕರೆ

Srinivasa Murthy VN
Updated On : 10 Mar 2014, 10:13 am

ಹಾಸನ: ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ದೊರೆಯುವ ಸವಲತ್ತನ್ನು ಪಡೆದುಕೊಳ್ಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ವಿ.ಜಿ.ಬೋಪಯ್ಯ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ  ಹಾಗೂ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ   ಕಟ್ಟಡ ಕಾರ್ಮಿಕರಿಗೆ ಕಾನೂನು ಅರಿವು- ನೆರವು ಕಾರ್ಯಕ್ರಮ ಮತ್ತು ಗುರುತಿನ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಲಹೆ: ಕಾರ್ಮಿಕರು ಕಾನೂನಿನ ಅರಿವು ಪಡೆದುಕೊಂಡು ಅದರ ನೆರವು ಹೇಗೆ ಪಡೆಯಬಹುದು ಎಂಬುದನ್ನು ತಿಳಿದುಕೊಂಡು, ಮಂಡಳಿಯಿಂದ ಸಿಗುವ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ದೊರೆಯುವ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ಪಡೆದುಕೊಳ್ಳಲು ಕಟ್ಟಡ ಕಾರ್ಮಿಕರಿಗೆ ತಿಳಿಸಿದರು.
ಸವಲತ್ತು ಪಡೆದುಕೊಳ್ಳಿ: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕರು ಸಂಘಟಿತರಾಗಿ ತಮಗೆ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳುವಂತೆ ಕಾರ್ಮಿಕರಿಗೆ ತಿಳಿಸಿದರು.
ನ್ಯಾಯಾಧೀಶ ದಿನೇಶ್ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಸಿಗುವ ಕನಿಷ್ಠ ವೇತನ ಕಾಯ್ದೆ ಹಾಗೂ ಇನ್ನಿತರ ಕಾಯ್ದೆಗಳಿಂದ ದೊರೆಯವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸೂಚಿಸಿದರು.
ನೋಂದಣಿ ಮಾಡಿಸಿಕೊಳ್ಳಿ: ಕಾರ್ಮಿಕ ಅಧಿಕಾರಿ ಕೆ.ಎನ್. ಪ್ರಹ್ಲಾದ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ದೊರೆಯುವ ವಿವಿಧ ಸೌಲಭ್ಯಗಳಾದ ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಹೆರಿಗೆ ಸಹಾಯಧನ ಹಾಗೂ ಇತರೆ ಸಹಾಯಧನಗಳನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದರ ಮೂಲಕ ಪಡೆದುಕೊಳ್ಳುವಂತೆ ಕಟ್ಟಡ ಕಾರ್ಮಿಕರಿಗೆ ಮನವರಿಕೆ ಮಾಡಿದರು.  ಜಿಲ್ಲೆಯಲ್ಲಿ ಒಟ್ಟು 13636 ಕಟ್ಟಡ ಕಾರ್ಮಿಕರು ನೋಂದಣಿಯಾಗಿದ್ದಾರೆ. ಆ ಪೈಕಿ 1133 ಫಲಾನುಭವಿಗಳು ನಾನಾ ಧನ ಸಹಾಯ ಪಡೆದಿದ್ದಾರೆ ಎಂದು ತಿಳಿಸಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ವಿ. ಕೋಸಂದರ್ ವಂದಿಸಿದರು.

'ಸುರಕ್ಷತಾ ಕ್ರಮ ಅಳವಡಿಸಿದರೆ ಅಪಾಯ ತಡೆಯಲು ಸಾಧ್ಯ'
ಆಲೂರು: ಕಾರ್ಮಿಕರಿಗೆ ಸೂಕ್ತ ಸಲಕರಣೆಗಳನ್ನು ನೀಡಿ ಸುರಕ್ಷಿತ ವಿಧಾನಗಳನ್ನು ಅನುಸರಿಸುವುದರ ಮೂಲಕ ಅವಘಡ ಸಂಭವಿಸುವುದನ್ನು ತಡೆಯಬೇಕೆಂದು ಜೆಎಂಎಫ್ಸಿ ನ್ಯಾಯಾಧೀಶ ಮಹೇಶ್ಬಾಬು ತಿಳಿಸಿದರು.
ತಾಲೂಕು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಕಾನೂನು ಮಾಹಿತಿ ಶಿಬಿರದಲ್ಲಿ ಮಾತನಾಡಿದ ಅವರು,  ಗುತ್ತಿಗೆದಾರರು ಕಾರ್ಮಿಕರ ಹಿತ ಕಾಪಾಡುವತ್ತ ಅತಿ ಹೆಚ್ಚಿನ ಗಮನ ನೀಡಬೇಕು ಎಂದರು.
ನೋಂದಣಿಯಾದ ಕಾರ್ಮಿಕರು ಕೆಲಸದ ವೇಳೆ ಮೃತರಾದಲ್ಲಿ ತಕ್ಷಣ ಸಹಾಯ ಧನ, ತೀವ್ರ ಪೆಟ್ಟಾಗಿ ಒಳರೋಗಿಯಾಗಿ ದಾಖಲಾದರೆ ಚಿಕಿತ್ಸಾ ವೆಚ್ಚ,ಪ್ರಮುಖ ರೋಗಗಳಾದ ಕ್ಯಾನ್ಸರ್, ಹೃದಯಾಘಾತ, ಕಣ್ಣಿನ ಶಸ್ತ್ರಚಿಕಿತ್ಸೆ ಹಾಗೂ ಇತರೆ ರೋಗಗಳಿಗೆ ಚಿಕಿತ್ಸೆಯ ವೆಚ್ಚ (2 ಲಕ್ಷದವರೆಗೆ), ಮಹಿಳಾ ಕಾರ್ಮಿಕರಿಗೆ ಹೆರಿಗೆ ಸೌಲಭ್ಯ, ಶಾಶ್ವತ ನ್ಯೂನತೆಗೆ 500 ರು. ಮಾಸಿಕ ವೇತನ, 5 ರಿಂದ 7 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ವಾರ್ಷಿಕ 2 ಸಾವಿರ ರು. ವಿದ್ಯಾರ್ಥಿ ವೇತನ, 8 ಮತ್ತು 9 ನೇ ತರಗತಿ ಮಕ್ಕಳಿಗೆ ವಾರ್ಷಿಕ 3 ಸಾವಿರ, 10 ನೇ ತರಗತಿ ಮಕ್ಕಳಿಗೆ ವಾರ್ಷಿಕ 5 ಸಾವಿರ ರು. ಪಿಯುಸಿ ಹಾಗೂ ಐಟಿಐ, ಡಿಪ್ಲೋಮ ವಿದ್ಯಾರ್ಥಿಗಳಿಗೆ 5 ಸಾವಿರ, ವೈದ್ಯಕೀಯ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸರ್ಕಾರಿ ಶುಲ್ಕ ಪಾವತಿಸುವುದರೊಂದಿಗೆ ಹಾಜರಾತಿ ಅವಲಂಬಿಸಿ ತಿಂಗಳಿಗೆ 1000 ರು. ಸಹಾಯಧನ ನೀಡಲಾಗುವುದು. ಇಲಾಖೆಯಲ್ಲಿ ಇನ್ನೂ ಹಲವಾರು ಸೌಲಭ್ಯಗಳಿದ್ದು ಕಾರ್ಮಿಕರು ಈ ಬಗ್ಗೆ ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಮಹೇಂದ್ರ, ವಕೀಲ ಕೆ.ಜಿ. ನಾಗರಾಜ್ ಮಾತನಾಡಿದರು. ವಕೀಲ ಕೆ.ನಾಗರಾಜ್, ಎಂ.ಎಸ್.ಮಹೇಶ್, ಸಿ.ಪಿ.ಉಮೇಶ್, ಸಂದೀಪ್, ಮಂಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement