ಎಲ್ಇಡಿ ದೀಪಗಳ ಅಳವಡಿಕೆಗೆ ಶಾಸಕ ಶಿವಲಿಂಗೇಗೌಡ ಚಾಲನೆ
ಅರಸೀಕೆರೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬಿ. ಎಚ್. ರಸ್ತೆ ವಿಭಜಕದ ಮಧ್ಯೆ ಅಪೂರ್ಣಗೊಂಡಿದ್ದ ಎಲ್.ಇ.ಡಿ. ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಎಲ್.ಇ.ಡಿ ವಿದ್ಯುತ್ ದೀಪಗಳನ್ನು ಮಂಗಳವಾರ ಸಂಜೆ ಎಪಿಎಂಸಿ ಮಾರುಕಟ್ಟೆಯ ಮುಂಭಾಗದಿಂದ ತಾಲೂಕು ಕಚೇರಿ ಎದುರು ಶಾಸಕ ಕೆ.ಎಂ. ಶಿವಲಿಂಗೇಗೌಡ ಸ್ವಿಚ್ ಆನ್ ಮಾಡುವ ಮೂಲಕ ಇತ್ತೀಚೆಗೆ ಉದ್ಘಾಟಿಸಿದರು. ಈ ಮೊದಲು ಕಂತೇನಹಳ್ಳಿ ಸಮೀಪದಿಂದ ಎ.ಪಿ.ಎಂ.ಸಿ. ಪ್ರಾಂಗಣದವರೆಗೆ ಮಾತ್ರ ದೀಪ ಅಳವಡಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ ಮಿನಿವಿಧಾನಸೌಧದವರೆಗೆ ಎಲ್.ಇ.ಡಿ ದೀಪ ಅಳವಡಿಸಲಾಗಿದೆ.
ಚಿನ್ನದ ವ್ಯಾಪಾರಿ ಭೀಕರ ಕೊಲೆ: ಆಭರಣ ಲೂಟಿ
ಚನ್ನರಾಯಪಟ್ಟಣ: ಚಿನ್ನಾಭರಣ ಮಾಲೀಕರೊಬ್ಬರನ್ನು ಹತ್ಯೆಗೈದು ಚಿನ್ನ, ಬೆಳ್ಳಿ ಅಪಹರಿಸಿದ ದಾರುಣ ಘಟನೆ ಸೋಮವಾರ ರಾತ್ರಿ ನುಗ್ಗೇಹಳ್ಳಿ ಬಸ್ಸ್ಟ್ಯಾಂಡ್ ಮುಂಭಾಗದಲ್ಲಿ ನಡೆದಿದೆ. ಗ್ರಾಮದ ಬಳಿಯ ಕಾಳಿಕಾಂಬ ಜ್ಯೂವೆಲರ್ಸ್ ಅಂಗಡಿ ಮಾಲೀಕ ಪರಮೇಶ್ (38) ಮೃತ ವ್ಯಕ್ತಿ. ಮೂಲತಃ ವಿರೂಪಾಕ್ಷಿಪುರದವರಾದ ಪರಮೇಶ್ ಹಾಸನದಲ್ಲಿ ವಾಸವಾಗಿದ್ದರು. ನುಗ್ಗೇಹಳ್ಳಿ ಬಳಿಯ ಕಾಳಿಕಾಂಬ ಜ್ಯೂವೆಲರ್ಸ್ಗೆ ನಿತ್ಯ ಆಗಮಿಸುತ್ತಿದ್ದ ಅವರು, ವ್ಯಾಪಾರ ವಹಿವಾಟುಗಳಲ್ಲಿ ತೊಡಗಿ ಪುನಃ ರಾತ್ರಿ ಹಾಸನಕ್ಕೆ ವಾಪಸ್ಸಾಗುತ್ತಿದ್ದರು. ನುಗ್ಗೇಹಳ್ಳಿ ಆಸುಪಾಸಿನಲ್ಲಿ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದರಿಂದ ನಿತ್ಯ ಅವರು, ಅಂಗಡಿಯಲ್ಲಿನ ಚಿನ್ನ, ಬೆಳ್ಳಿ ಆಭರಣಗಳನ್ನು ಬ್ಯಾಗ್ ಒಂದರಲ್ಲಿ ತುಂಬಿಸಿಕೊಂಡು ಹೊರಡುವುದು ಅವರ ನಿತ್ಯದ ಕೆಲಸವಾಗಿತ್ತು.
ಸೋಮವಾರ ಎಂದಿನಂತೆ ಅವರು ತಮ್ಮ ಬ್ಯಾಗ್ನಲ್ಲಿ ಅಂಗಡಿಯಲ್ಲಿನ ಚಿನ್ನಾಭರಣ ತುಂಬಿಸಿಕೊಂಡು ಹೊರಟು, ಬಸ್ನಿಲ್ದಾಣದ ಮುಂಭಾಗಕ್ಕೆ ಬಂದಾಗ, ಸುಮಾರು 7.15ರ ವೇಳೆಗೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಬೈಕ್ನಲ್ಲಿ ಆಗಮಿಸಿ, ಪರಮೇಶ್ ಅವರ ಎದೆಗೆ ಪಿಸ್ತೂಲ್ನಿಂದ ಗುಂಡು ಹಾರಿಸಿ, ಅವರಲ್ಲಿದ್ದ ಬ್ಯಾಗ್ ಅಪಹರಿಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪರಮೇಶ್ ಸ್ಥಳದಲ್ಲೇ ಮೃತರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಶವವನ್ನು ಚನ್ನರಾಯಪಟ್ಟಣದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು. ಚೆಕ್ಪೋಸ್ಟ್ ಮೂಲಕ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿರುವುದಾಗಿ ತಿಳಿಸಿದ್ದಾರೆ.
ಮಹಿಳಾ ಹರಿದಾಸ ಸಂಘದಿಂದ ಗಮಕ
ಹೊಳೆನರಸೀಪುರ: ಮಹಿಳಾ ಹರಿದಾಸ ಸಂಘದ ವತಿಯಿಂದ ಪಟ್ಟಣದ ಕೋಟೆ ಪ್ರಹ್ಲಾದಾಚಾರ್ ಅವರ ಮನೆಯಲ್ಲಿ ಇತ್ತೀಚೆಗೆ ಮನೆ ಮನೆ ಗಮಕ ಕಾರ್ಯಕ್ರಮ ನಡೆಯಿತು. ಸುಧಾಮಣಿ ಗುರುರಾಜಾಚಾರ್ ಅವರು ಶ್ರೀನಿವಾಸ ಕಲ್ಯಾಣ ಕಥಾ ಭಾಗವನ್ನು ವ್ಯಾಖ್ಯಾನಿಸಿದರು. ಭವಾನಿ ಪ್ರಹ್ಲಾದಾಚಾರ್ ವಾಚಿಸಿದರು. ತಾಲೂಕು ಗಮಕ ಕಲಾ ಪರಿಷತ್ತಿನ ಅಧ್ಯಕ್ಷೆ ಸುಬ್ಬಲಕ್ಷ್ಮಿ, ಕರ್ನಾಟಕ ಜಾನಪದ ಅಧ್ಯಕ್ಷ ಬಾ.ರಾ. ಸುಬ್ಬರಾಯ, ಹಿರಿಯ ಗಾಯಕ ಕೇಶವರಾವ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮೊದಲಿಗೆ ಸುಧಾಮಣಿ ಕಾರ್ಯಕ್ರಮಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಭವಾನಿ ವಂದಿಸಿದರು. ಪ್ರಹ್ಲಾದಾಚಾರ್ ಪೂಜಾ ಕೈಂಕರ್ಯ ನೆರವೇರಿಸಿದರು.