ಬೈಕ್ಗಳ ಡಿಕ್ಕಿ: ಕರ್ತವ್ಯನಿರತ ಪೇದೆ ಸಾವು
ಆಲೂರು: ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕರ್ತವ್ಯನಿರತ ಪೊಲೀಸ್ ಪೇದೆಯೊಬ್ಬರು ಮೃತಪಟ್ಟು, ಇನ್ನೊಬ್ಬ ಮುಖ್ಯ ಪೇದೆ ಸೇರಿದಂತೆ ಒಟ್ಟು ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಕೆಂಚಮ್ಮನಹೊಸಕೋಟೆ ಹೋಬಳಿ ಸುಳುಗೋಡು ಎಸ್ಟೇಟ್ ಬಳಿಯ ಹೆಮ್ಮಿಗೆ ಕೂಡಿಗೆಯಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಕೆಂಚಮ್ಮನ ಹೊಸಕೋಟೆ ಠಾಣೆಯ ಪೇದೆ ಕುಮಾರ್ (42) ಎಂಬುವರು ಮೃತಪಟ್ಟ ದುರ್ದೈವಿ. ಗಾಯಗೊಂಡಿರುವವರನನ್ನು ಮುಖ್ಯ ಪೇದೆ ಅಣ್ಣೇಗೌಡ, ಕಾಗನೂರು ಗ್ರಾಮದ ರಜನಿ, ಪ್ರಸನ್ನ, ಅವಿನಾಶ್ ಎಂದು ಗುರುತಿಸಲಾಗಿದ್ದು, ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಜೆ 5.30ರಲ್ಲಿ ಗ್ರಾಮ ಗಸ್ತನ್ನು ಮುಗಿಸಿಕೊಂಡು ಠಾಣೆಗೆ ಬೈಕಿನಲ್ಲಿ ಮರಳುತ್ತಿದ್ದ ಪೇದೆಗಳಾದ ಕುಮಾರ್ ಹಾಗೂ ಅಣ್ಣೇಗೌಡರ ಬೈಕಿಗೆ ಎದುರಿನಿಂದ ಬಂದ ಮತ್ತೊಂದು ಬೈಕಿನಲ್ಲಿದ್ದ ಕಾಗನೂರು ಗ್ರಾಮದ ರಜನಿ, ಪ್ರಸನ್ನ, ಅವಿನಾಶ್ ಅವರು ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಎರಡೂ ಬೈಕ್ಗಳ ಸವಾರರು ತಮ್ಮ ಬೈಕ್ಗಳಿಂದ ಉರುಳಿ ಬಿದ್ದ ಪರಿಣಾಮ ಐವರು ಗಾಯಗೊಂಡರು.
ಈ ಐವರನ್ನು ಆಸ್ಪತ್ರೆಗೆ ಸೇರಿಸಲೆಂದು ಕರೆದೊಯ್ಯುತ್ತಿರುವಾಗ ಮಾರ್ಗ ಮಧ್ಯೆ ಪೇದೆ ಕುಮಾರ್ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.