ಶುಂಠಿ ಕಳ್ಳರಿಗೆ ರೈತರಿಂದ ಧರ್ಮದೇಟು
ಹಾಸನ: ಈಗ ಶುಂಠಿಗೆ ಬೆಲೆ ಏರಿಕೆ ಆಗಿದೆ. ಪರಿಣಾಮ ಜಿಲ್ಲಾದ್ಯಂತ ಜಮೀನಿನಲ್ಲಿ ಶುಂಠಿ ಕದಿಯುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಭಾನುವಾರ ಜಮೀನಿನಲ್ಲಿ ಶುಂಠಿ ಕದಿಯುತ್ತಿದ್ದ ಇಬ್ಬರನ್ನು ರೈತರು ಹಿಡಿದು, ಕಂಬಕ್ಕೆ ಕಟ್ಟಿ ಥಳಿಸಿರುವ ಘಟನೆ ತಾಲೂಕಿನ ಕೆಂಚಮಾರನಹಳ್ಲಿಯಲ್ಲಿ ನಡೆದಿದೆ.
ಶುಂಠಿ ಕಳ್ಳರನ್ನು ಗ್ರಾಮದ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಮನಸೋ ಇಚ್ಚೆ ಧರ್ಮದೇಟು ನೀಡಿದ್ದಾರೆ.
ರಮೇಶ್ ಮತ್ತು ಹೊಂಬಯ್ಯ ಎಂಬುವರೇ ಕಳ್ಳರು, ಅವರಿಂದ ಸಾವಿರಾರು ರು. ಮೌಲ್ಯ ಶುಂಠಿಯನ್ನು ವಶಪಡಿಸಿಕೊಂಡಿದ್ದು, ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಹಗಲೇ ವೇಳೆ ಸುತ್ತಾಡಿ ಯಾವ ಜಮೀನಿನಲ್ಲಿ ಭರ್ಜರಿ ಶುಂಠಿ ಇದೆ ಎಂಬುದನ್ನು ನೋಡಿಕೊಂಡು ಬಂದು, ರಾತ್ರಿ ಜಮೀನಿಗೆ ಹೋಗಿ ಶುಂಠಿ ಕಳವು ಮಾಡುತ್ತಿದ್ದರು. ಕೆಂಚಮಾರನಹಳ್ಳಿಯ ಪರಮೇಶ್ ಎಂಬುವರು ರಾತ್ರಿಯೆಲ್ಲಾ ಕಾದು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರುಕಟ್ಟೆಯಲ್ಲಿ 50 ಕೆಜಿ ಶುಂಠಿಗೆ 4 ಸಾವಿರ ಬೆಲೆ ಇದೆ. ಹೀಗೆ ಬೆಲೆ ಏರಿಕೆ ಆಗಿರುವುದರಿಂದ ಜಿಲ್ಲೆಯಲ್ಲಿ ಶುಂಠಿ ಕಳ್ಳರು ಹೆಚ್ಚಾಗಿದ್ದಾರೆ. ಪೊಲೀಸರು ಕ್ರಮ ಜರುಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಇಂದು ವೀರಭದ್ರೇಶ್ವರ ಸ್ವಾಮಿ ರಥೋತ್ಸವ
ರಾಮನಾಥಪುರ: ಕೇರಳಾಪುರ ಪಟ್ಟಣದ ಶ್ರೀ ಪ್ರಸನ್ನ ವೀರಭದ್ರೇಶ್ವರ ಸ್ವಾಮಿಯವರ ರಥೋತ್ಸವ ಮಾ. 11ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ ಎಂದು ದೇವಸ್ಥಾನದ ಪುರೋಹಿತ ವೀರಣ್ಣ ತಿಳಿಸಿದರು. ಸ್ವಸ್ತಿ ಶ್ರೀ ವಿಜಯಭ್ಯುದಯ ಶಾಲಿವಾಹನ ಶಕಶ್ರೀ ವಿಜಯ ಸಂವತ್ಸರ ಶುದ್ಧ ಅಷ್ಟಮಿ ಮಾ. 9ರಿಂದ ಮಾ. 20ರವರೆಗೆ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ಪಟ್ಟಣದ ಭಕ್ತರು ಹಾಗೂ ಸಾರ್ವಜನಿಕರಿಂದ ನಡೆಯಲಿವೆ. ರಥೋತ್ಸವದ ಅಂಗವಾಗಿ ಭಾನುವಾರ ಶ್ರೀ ಗಣಪತಿ ಪೂಜೆ, ಅಂಕುರಾರ್ಪಣ, ಧ್ವಜಾರೋಹಣ, ಸೋಮವಾರ ಶ್ರೀ ವೀರಭದ್ರೇಶ್ವರ ಸ್ವಾಮಿಯವರಿಗೆ ರುದ್ರಾಭಿಷೇಕ ಮತ್ತು ಉತ್ಸವ ನೆರವೇರಿದವು.ಮಾ. 11ರಂದು ನಡೆಯುವ ರಥೋತ್ಸವಕ್ಕೆ ಬಂದ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ ಎಂದು ಕೆ.ಎಸ್. ಪರಮೇಶ್ವರಯ್ಯ ತಿಳಿಸಿದರು. ಕೇರಳಾಪುರ ಪಟ್ಟಣದ ಶ್ರೀ ಪ್ರಸನ್ನ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಉತ್ಸವ ಮೂರ್ತಿಯನ್ನು ಪ್ರತಿ ತಿಂಗಳು ಪೌರ್ಣಿಮೆಯ ದಿನದೊಂದು ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಪುರೋಹಿತರು ವೀರಣ್ಣ ತಿಳಿಸಿದ್ದಾರೆ.