ಸಂಸ್ಥೆಗಳು ಆರ್ಥಿಕ ಶಿಸ್ತು ರೂಢಿಸಿಕೊಳ್ಳಬೇಕು
ಹಾಸನ: ಯಾವುದೇ ಸಂಘ- ಸಂಸ್ಥೆಯಾಗಲಿ ಮೊದಲು ಹಣಕಾಸು ಶಿಸ್ತು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಹಿರಿಯ ನಾಗರಿಕ ಜಿ.ಎಲ್. ಮುದ್ದೇಗೌಡ ಹೇಳಿದರು.
ನಗರದ ಆರ್.ಸಿ. ರಸ್ತೆಯಲ್ಲಿ ಇತ್ತೀಚೆಗೆ ಆರಂಭವಾದ ಅಕ್ಷಯ ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಅದರ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಭದ್ರತೆ ಪಡೆದು ಸಾಲ ನೀಡುವುದೊಂದೇ ಗುರಿಯಾಗಿಟ್ಟುಕೊಳ್ಳದೆ ಆ ಸಾಲದ ಸದುಪಯೋಗವಾಗುತ್ತಿದೆಯೇ ಎಂಬುದರತ್ತ ನಿಗಾ ಇಡಬೇಕು ಎಂದು ಸಲಹೆ ನೀಡಿದರು.
ಚಿನ್ನವನ್ನು ಅಡವಾಗಿಟ್ಟುಕೊಂಡು ಸಾಲ ನೀಡುವ ಕೆಟ್ಟ ಪದ್ಧತಿಯನ್ನು ಅನುಸರಿಸಬಾರದೆಂದು ಸಲಹೆಯಿತ್ತ ಅವರು, ಇದರಿಂದ ಕಪ್ಪುಹಣ ವೃದ್ಧಿಗೆ ಸಹಕರಿಸಿದಂತಾಗುತ್ತದೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ ಎಂದು ಎಚ್ಚರಿಸಿದರು.
ನೆರವು ನೀಡಬೇಕು: ಸಂಘದ ನಿರ್ದೇಶಕ ಆರ್.ಪಿ. ವೆಂಕಟೇಶಮೂರ್ತಿ ಮಾತನಾಡಿ, ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಯುವ ಜನಾಂಗಕ್ಕೆ ಇಂದು ಕರ ಕುಶಲ ಕಲೆ ಹಾಗೂ ಕೈಕಸುಬು ತರಬೇತಿ ನೀಡುವ ತುರ್ತು ಅಗತ್ಯವಿದೆ. ಧರ್ಮಸ್ಥಳದ ರುಡ್ ಸೆಟ್ ಸಂಸ್ಥೆ ಇದಕ್ಕೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಸಂಘವು ಗಮನ ಹರಿಸಬೇಕು. ಜತೆಗೆ ರೈತರ ಭವಿಷ್ಯಕ್ಕೆ ಆಸರೆಯಾಗುವಂತೆ ವೃಕ್ಷಾಧಾರಿತ ಆರ್ಥಿಕತೆ ರೂಢಿಸಬೇಕು. ಪ್ರತಿ ರೈತ ಮರ ಬೆಳೆಸುವ ಮೂಲಕ ತನ್ನ ಆರ್ಥಿಕ ಅಗತ್ಯಗಳನ್ನು ರೂಢಿಸಿಕೊಳ್ಳವತ್ತ ಸಂಘ ಸಂಸ್ಥೆಗಳು ನೆರವು ನೀಡಬೇಕು ಎಂದು ಸಲಹೆ ನೀಡಿದರು.
ಆಶಯ: ಅಧ್ಯಕ್ಷತೆ ವಹಿಸಿದ್ದ ಸಂಘದ ಸಂಸ್ಥಾಪಕ ಅಧ್ಯಕ್ಷ ಗೋಪಾಲ್ ಮಾತನಾಡಿ, ಯುವ ಜನಾಂಗಕ್ಕೆ ಕರ ಕುಶಲ ಕಲೆ ಹಾಗೂ ಕೈಕಸುಬು ತರಬೇತಿ, ನೇತ್ರ ದಾನ ಮತ್ತಿತರ ಸಾಮಾಜಿಕ ಚಟುವಟಿಕೆಗಳಿಗೂ ಸಂಘವು ಒತ್ತು ನೀಡಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಶೇರುದಾರರ ಪರವಾಗಿ ಮೇಟಿಕೆರೆ ಹಿರಿಯಣ್ಣ ಹಾಗೂ ಕಾಂತರಾಜು ಅವರು ಅನಿಸಿಕೆ ವ್ಯಕ್ತಪಡಿಸಿ, ಸಂಘಕ್ಕೆ ಭದ್ರ ಬುನಾದಿ ಹಾಕುವ ಮೂಲಕ ಆರಂಭದ ಕೆಲವು ವರ್ಷ ಅದನ್ನು ಚೆನ್ನಾಗಿ ಬೆಳೆಸಿ, ನಂತರ ಸಾಮಾಜಿಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಂಘದ ಉಪಾಧ್ಯಕ್ಷ ಎಂ.ಬಿ. ನಿಂಗೇಗೌಡ ಹಾಗೂ ನಿರ್ದೇಶಕ ಬಿ.ಎನ್. ಪ್ರಮೋದ್, ಡಾ. ಎಸ್.ಆರ್. ದಿನೇಶ್, ಪುಟ್ಟರಾಜೇಗೌಡ, ಮಮತಾ ಶಿವು, ಬಿ. ಶ್ರೀಪಾಲ್ ಕೊಥಾರಿ, ವೆಂಕಟೇಶ್ ಮತ್ತಿತರ ಷೇರುದಾರರು ಹಾಜರಿದ್ದರು.
ನಿರ್ದೇಶಕಿ ಬಿ. ವೇದಾವತಿ ನಿರೂಪಿಸಿದರು. ನಿರ್ದೇಶಕ ಎಚ್.ಆರ್. ಮಂಜಪ್ಪಗೌಡ ಸ್ವಾಗತಿಸಿದರು. ಮತ್ತೊಬ್ಬ ನಿರ್ದೇಶಕ ನಾಗೇಂದ್ರಕುಮಾರ್ ವಂದಿಸಿದರು. ಅತಿಥಿ ಗಣ್ಯರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ನಡೆದ ಪೂಜಾ ಕಾರ್ಯಕ್ರಮದಲ್ಲಿ ವ್ಯೆದ್ಯ ಹಾಗೂ ಸಮಾಜ ಸೇವಕ ಡಾ. ಗುರುರಾಜ ಹೆಬ್ಬಾರ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.