ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಲ್ಲೂ ಹೋಗಲ್ಲ... ನಾನು ಎಲ್ಲೂ ಹೋಗಲ್ಲ...

Srinivasa Murthy VN
Updated On : 14 Mar 2014, 12:30 pm

ಹಾಸನ: ನನ್ನ ಜೀವ ಇರುವವರೆಗೂ ಜೆಡಿಎಸ್ ಬಿಟ್ಟು ಎಲ್ಲೂ ಹೋಗೋದಿಲ್ಲ - ಹೀಗೆಂದು ಘೋಷಿಸಿದ್ದು ಎಚ್.ಡಿ. ರೇವಣ್ಣ.
ನಗರದಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಸ್ಪಷ್ಟನೆ ನೀಡಿದರು.
ಈ ಬಾರಿಯ ಲೋಕಸಭೆ ಚುನಾವಣೆ ಬಳಿಕ ರೇವಣ್ಣ ಅವರು, ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿರುವ ರೇವಣ್ಣ, ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮುಖಂಡರು ಎನಿಸಿಕೊಂಡಿರುವವರು ಹಿಂದೆ ಯಾವ ಯಾವ ಪಕ್ಷದಲ್ಲಿ ಇದ್ದುಕೊಂಡು ಶಾಸಕರಾದರು, ಯಾರ್ಯಾರ ಮನೆ ಬಾಗಿಲು ತಟ್ಟಿದ್ದಾರೆ, ಯಾರ್ಯಾರಿಗೆ ಟೋಪಿ ಹಾಕಿದ್ದಾರೆ ಅಂತ ಅವರು ಮೊದಲು ಅರ್ಥೈಸಿಕೊಳ್ಳಬೇಕು ಎಂದರು. ಒಟ್ಟಿನಲ್ಲಿ ಚುನಾವಣೆ ಆದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟೋಪಿ ಹಾಕದಿದ್ದರೆ ಸಾಕು ಎಂದು ವ್ಯಂಗ್ಯವಾಡಿದರು.
ಕಾಲು ಹಿಡಿದರು: ಕಾಂಗ್ರೆಸ್ ಅಭ್ಯರ್ಥಿ ಬಿ.ಬಿ. ಶಿವಪ್ಪನವರ ಮನೆಗೆ ಹೋಗಿ ಚುನಾವಣೆಗೆ ನಿಲ್ಲಬೇಡಿ ಅಂತ ಕಾಲು ಕಟ್ಟಿದ್ದಾರೆ. ಕಾಂಗ್ರೆಸ್‌ನವರು ಹಣಕ್ಕಾಗಿ ಎಂಎಲ್‌ಸಿಯನ್ನು ಸೋಲಿಸಿದರು ಎಂದ ಅವರು, ಕಾಂಗ್ರೆಸ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲದಂತಾಗಿದೆ ಕಾಲು ಹಿಡಿದು ಅಭ್ಯರ್ಥಿಗಳನ್ನು ಕರೆ ತರುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್‌ಗೆ ಭಯ: ದೇವೇಗೌಡರು ಚುನಾವಣೆಯಲ್ಲಿ ಗೆದ್ದರೆ ತೃತೀಯ ರಂಗ ರಚನೆ ಮಾಡುತ್ತಾರೆ. ಕಾಂಗ್ರೆಸ್‌ನ ಅವನತಿ ಆಗುತ್ತದೆ ಎಂಬ ಭಯ ಕಾಂಗ್ರೆಸ್ ಅವರಿಗೆ ಆವರಿಸಿದೆ. ಅದಕ್ಕಾಗಿ ದೇವೇಗೌಡರನ್ನು ಸೋಲಿಸಲು ಕಸರತ್ತು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿಳಿ ಚೌಡಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾವಗಲ್ ರಾಜಶೇಖರ್, ಮುಖಂಡ ಕೆ.ಎಂ. ರಾಜೇಗೌಡ ಇದ್ದರು.

ಷರೀಫ್‌ಗೆ ಸ್ವಾಗತ
ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್ ಅವರು ಪಕ್ಷಕ್ಕೆ ಬಂದರೆ ಅವರನ್ನು ಸ್ವಾಗತಿಸುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ. ಹಿರಿಯ ರಾಜಕಾರಣಿಯಾದ ದೇವೇಗೌಡರ ವಿರುದ್ಧ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ಅವರು, ಕಾಂಗ್ರೆಸ್ ಹೈಕಮಾಂಡ್‌ಗೆ ಇತ್ತೀಚೆಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಾಟ, ಮಂತ್ರ ರಿವರ್ಸ್ ಆಗುತ್ತೆ !
ಹಾಸನ:
ದೇವರಲ್ಲಿ ನಂಬಿಕೆ ಇಟ್ಟಿರುವ ತಮ್ಮ ಮೇಲೆ ಮಾಟ, ಮಂತ್ರ ಮಾಡಿಸಿದರೆ ಅದು ಮಾಡಿಸಿದವರಿಗೇ ರಿವರ್ಸ್ ಆಗೋದು ಗ್ಯಾರಂಟಿ ಎಂದು ಶಾಸಕ ಎಚ್.ಡಿ. ರೇವಣ್ಣ ಗುಡುಗಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೈವಾನುಗ್ರಹ ಹೊಂದಿರುವ ದೇವೇಗೌಡರಿಗಾಗಲಿ, ನನ್ನನ್ನಾಗಲಿ ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ. ತಮ್ಮ ವಿರುದ್ಧ ಮಾಟ, ಮಂತ್ರ ಮಾಡಿಸಿದರೆ ಅವರಿಗೇ ಅದು ರಿವರ್ಸ್ ಆಗೋದರಲ್ಲಿ ಅನುಮಾನ ಬೇಡ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement