ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗೌಡರಿಗೆ ಫೈನಲ್, ಮಂಜುಗೆ ರಿಹರ್ಸಲ್!

Srinivasa Murthy VN
Updated On : 14 Mar 2014, 12:30 pm

-ದಯಾಶಂಕರ ಮೈಲಿ
ಕ.ಪ್ರ. ವಾರ್ತೆ ಹಾಸನ ಮಾ. 13

ತೃತೀಯ ರಂಗದ ರೂವಾರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರರಿಗೆ ಹೆಚ್ಚು ಕಡಿಮೆ ಈ ಲೋಕಸಭೆ ಚುನಾವಣೆ ಫೈನಲ್ ಪಂದ್ಯವೇ. ಆದರೆ ಕಾಂಗ್ರೆಸ್‌ನಿಂದ ಅವರ ವಿರುದ್ಧ ಸ್ಪರ್ಧಿಸಿರುವ ಶಾಸಕ ಎ. ಮಂಜು ಅವರಿಗೆ ಇದು ಚೊಚ್ಚಲ ಚುನಾವಣೆ.
ಹಾಗಾಗಿ, ಗೌಡರಿಗಿಂತ ಚುನಾವಣೆಯಲ್ಲಿ ಹೆಚ್ಚು ಸರ್ಕಸ್, ತಾಲೀಮು (ರಿಹರ್ಸಲ್) ಮಾಡಬೇಕಿರುವುದು ಅರಕಲಗೂಡು ಕ್ಷೇತ್ರದ ಶಾಸಕರಾಗಿರುವ ಮಂಜು ಅವರೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
6 ಲೋಕಸಭೆ ಚುನಾವಣೆಗಳಲ್ಲೂ ಉತ್ತಮ ರೀತಿಯಲ್ಲೇ ಬ್ಯಾಟಿಂಗ್ ಮಾಡಿ, ಡಬಲ್ ಹ್ಯಾಟ್ರಿಕ್ ಸಾಧನೆಗೈದಿರುವ ಗೌಡರು, ಹಿಂದಿನ ಅನುಭವದ ಆಧಾರದ ಮೇಲೆಯೇ ಎದುರಾಳಿ ಎಸೆಯುವ ಎಲ್ಲಾ ರೀತಿಯ ಸ್ಪಿನ್, ಫಾಸ್ಟ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಬಲ್ಲರು. ಆದರೆ, ಗೌಡರು ಎದುರಾಳಿ ವಿರುದ್ಧ ಫಾಸ್ಟ್, ಸ್ವಿಂಗ್ ಮತ್ತು ಬೌನ್ಸರ್‌ಗಳನ್ನೇ ಹೆಚ್ಚು ಹಾಕುತ್ತಾರೆ. ಇದನ್ನು ಎದುರಿಸಿ ಬ್ಯಾಟಿಂಗ್ ಮಾಡುವುದು ಹೇಗೆ ಎಂಬುದರ ಬಗ್ಗೆ ಮಂಜು ಗಾಢ ಚಿಂತನೆಯಲ್ಲಿ ತೊಡಗಿದ್ದಾರೆ.
ಮಂಜು ಸಾಮಾನ್ಯ ಆಟಗಾರ: ಗೌಡರ ತಂಡದ ಆಟಗಾರರಲ್ಲಿ ಯಾವುದೇ ಭಿನ್ನಾಭಿಪ್ರಾಯ, ಭಿನ್ನರಾಗ ಇಲ್ಲ. ಹಾಗಾಗಿ ಗೌಡರ ತಂಡ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರೂ ಭಾಗಗಳಲ್ಲೂ ಸೂಕ್ತ ರೀತಿಯಲ್ಲೇ ಹೋರಾಟ ನಡೆಸುತ್ತದೆ. ಆದರೆ, ಮಂಜು ಅವರು ಗೌಡರ ತಂತ್ರಗಾರಿಕೆಯನ್ನು ಎದುರಿಸಲು ಸಾಕಷ್ಟು ಪ್ರತಿತಂತ್ರಗಳನ್ನು ತುರ್ತಾಗಿ ರೂಪಿಸಿಕೊಳ್ಳಬೇಕಿದೆ. ಅಲ್ಲದೇ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಂ. ಆನಂದ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡದೇ ತೀವ್ರ ಅಸಮಾಧಾನಗೊಳಿಸಿದೆ. ಹೀಗೆ ಬೇಸರಗೊಂಡಿರುವವರ ಮನವೊಲಿಸಿಯೂ ಮಂಜು ಅಖಾಡಕ್ಕಿಳಿಯಬೇಕಿದೆ.
ವಿಧಾನಸಭೆ ಚುನಾವಣೆಯೆಂಬ ರಣಜಿ ಮಾದರಿಯ ಪಂದ್ಯವಾಡಿದ್ದ ಮಂಜುಗೆ ಈಗ ಲೋಕಸಭೆ ಚುನಾವಣೆಯೆಂಬ ರಾಷ್ಟ್ರಮಟ್ಟದ ಪಂದ್ಯದಲ್ಲಿ, ಅದೂ ಮಾಜಿ ಪ್ರಧಾನಿಯ ವಿರುದ್ಧ ಸೆಣಸುತ್ತಿರುವುದು ದೊಡ್ಡ ಸವಾಲಾಗಿದೆ. ಇವರಿಬ್ಬರ ನಡುವಿನ ಸ್ಪರ್ಧೆಯಲ್ಲಿ ಯಾರು ಮೇಲು, ಯಾರು ಬಲಿಷ್ಠ, ಯಾರು ಡಮ್ಮಿ ಅನ್ನೋದನ್ನು ನಿರ್ಧರಿಸಲಿದೆ ಈ ಬಾರಿಯ ಸಮರ.

ಮಂಜು v/s ದೇವೇಗೌಡ: ಕೆರಿಯರ್ ಗ್ರಾಫ್
ದೇವೇಗೌಡರು ಹಾಸನ ಜಿಲ್ಲೆಯಿಂದಲೇ 5 ಲೋಕಸಭೆ ಚುನಾವಣೆಗಳೆಂಬ ರಾಷ್ಟ್ರೀಯ ಪಂದ್ಯಾಗಳನ್ನಾಡಿದ್ದರೆ, ಹೊರಜಿಲ್ಲೆ ಕನಕಪುರ ಪಿಚ್‌ನಲ್ಲೂ 2002ರಲ್ಲೂ ಆಟವಾಡಿ ಗೆದ್ದಿದ್ದಾರೆ. 1991ರಲ್ಲಿ ಸಮಾಜವಾದಿ ಪಕ್ಷದ ಆಟಗಾರನಾಗಿ, 1998, 2004ರಲ್ಲಿ ಜೆಡಿಎಸ್ ಆಟಗಾರನಾಗಿ ಜಯದ ನಗೆ ಬೀರಿದ್ದ ಗೌಡರು, 1999ರಲ್ಲಿ ಹೋಂ ಪಿಚ್ ಹಾಸನದಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ. 2014ರಲ್ಲೂ ಸ್ವಂತ ಪಿಚ್‌ನಲ್ಲಿ ತಮ್ಮ ಫೈನಲ್ ಪಂದ್ಯವನ್ನು ಆಡುತ್ತಿದ್ದಾರೆ.  
ಮಂಜು ಮೊದಲ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೆಣಸಿದ್ದು 1989ರಲ್ಲಿ. ಆಗ ಅರಕಲಗೂಡು ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿದ್ದ ಮಂಜು, ಅಂದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎ.ಟಿ. ರಾಮಸ್ವಾಮಿ ವಿರುದ್ಧ ಸೋಲು ಅನುಭವಿಸಿದ್ದರು. ಮತ್ತೆ 1994ರಲ್ಲಿ ಬಿಜೆಪಿ ಪರವಾಗಿ ಕಣಕ್ಕಿಳಿದು ಅಂದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎ.ಟಿ. ರಾಮಸ್ವಾಮಿ ವಿರುದ್ಧ ಸೋಲು ಕಂಡಿದ್ದರು. 1999ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಂಜು ಅವರು ಬಿಜೆಪಿಯಿಂದ ಕಣಕ್ಕೆ ಇಳಿದು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎ.ಟಿ. ರಾಮಸ್ವಾಮಿ ವಿರುದ್ಧ ಗೆಲವು ಸಾಧಿಸಿದ್ದರು. 2004ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು, ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದ ಎ.ಟಿ. ರಾಮಸ್ವಾಮಿ ವಿರುದ್ಧ ಮತ್ತೆ ಸೋತರು. 2008 ಮತ್ತು 2013ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಅಖಾಡಕ್ಕೆ ಇಳಿದು ಜೆಡಿಎಸ್ ಆಟಗಾರ ಎಟಿ ರಾಮಸ್ವಾಮಿ ಅವರನ್ನು ಸೋಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement