ಗ್ರಂಥಾಲಯಗಳ ಅಸಮರ್ಪಕ ನಿರ್ವಹಣೆ; ಓದುಗರಿಗೆ ತೊಂದರೆ
ಸಕಲೇಶಪುರ: ತಾಲೂಕಿನ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಓದುಗರಿಗೆ ಹಾಗೂ ಪುಸ್ತಕ ಪ್ರೇಮಿಗಳಿಗೆ ಅನುಕೂಲವಾಗಲೆಂದು ಗ್ರಂಥಾಲಯಗಳನ್ನು ಪ್ರಾರಂಭಿಸಿದರೂ ಕೂಡ ತಾಲೂಕಿನ ಕೆಲವು ಗ್ರಂಥಾಲಯಗಳು ಹಾಗೂ ಓದುಗರು ಹಲವಾರು ಸಮಸ್ಯೆಗಳಿಂದ ನಲುಗುತ್ತಿದ್ದಾರೆ.
ದಿನನಿತ್ಯ ಬೆಳಗ್ಗೆ 8ರಿಂದ 9 ಗಂಟೆಗೆ ಗ್ರಂಥಾಲಯಗಳನ್ನು ತೆರೆಯಬೇಕಾದ ಗ್ರಂಥಪಾಲಕರು, 11 ಗಂಟೆಯಾದರೂ ತೆರೆಯದೇ ಓದುಗರಿಗೆ ತೊಂದರೆಯಾಗುತ್ತಿದೆ. ಕೆಲವು ಗ್ರಂಥಪಾಲಕರು ಬೆಳಗ್ಗೆ ಗ್ರಂಥಾಲಯದ ಬಾಗಿಲು ತೆಗೆದು ಹೋದವರು ತಮ್ಮ ಖಾಸಗಿ ಕೆಲಸಗಳನ್ನು ಮುಗಿಸಿಕೊಂಡು ವಾಪಸ್ಸು ಗ್ರಂಥಾಲಯಕ್ಕೆ ಬರುವುದು ಸಂಜೆ ಬಾಗಿಲು ಹಾಕಲು ಮಾತ್ರ. ಇದು ಇಲ್ಲಿನ ಸಾಮಾನ್ಯ ಸಂಗತಿ.
ಸಿಬ್ಬಂದಿ ಗೂಂಡಾಗಿರಿ: ಹೀಗೆ, ಅಸಮರ್ಪಕ ಕಾರ್ಯ ವಿಧಾನವನ್ನು ಪ್ರಶ್ನಿಸಲು ಹೋದರೆ, ಓದುಗರ ಮೇಲೆ ಗೂಂಡಾಗಿರಿ ಮಾಡುವ ಹಂತಕ್ಕೆ ತಲುಪಿರುವುದು ಕೆಲವು ಕಡೆ ನಡೆದಿದೆ ಎಂದು ಓದುಗರು ದೂರಿದ್ದಾರೆ.
ಗ್ರಂಥಾಲಯದ ಅಸಮರ್ಪಕ ನಿರ್ವಹಣೆ, ಸರಿಯಾದ ಸಮಯಕ್ಕೆ ದಿನಪತ್ರಿಕೆಗಳನ್ನು ಸರಬರಾಜು ಮಾಡದೇ ಇರುವುದು, ಉತ್ತಮವಾದ ಪುಸ್ತಕಗಳನ್ನು ಓದುಗರಿಗೆ ನೀಡದೆ ಸತಾಯಿಸುತ್ತಿರುವುದು ಇಲಾಖೆ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂದು ತಿಳಿಸಿದ್ದಾರೆ.
ಸಕಲೇಶಪುರ ಪಟ್ಟಣದಲ್ಲಿರುವ ಶಾಖಾ ಗ್ರಂಥಾಲಯ ಅವ್ಯವಸ್ಥೆಯ ಅಗರವಾಗಿದ್ದು, ಸರಿಯಾದ ಸ್ಥಳಾವಾಕಾಶವಿಲ್ಲದೇ ಸಣ್ಣ ಕೊಠಡಿಯಲ್ಲಿ ಓದುಗರು ಪುಸ್ತಕಗಳನ್ನು ಓದುವ ಪರಿಸ್ಥಿತಿ ಇದೆ. ಇನ್ನಾದರೂ ಜಿಲ್ಲಾ ಗ್ರಂಥಾಲಯದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಇಲ್ಲಿನ ಗ್ರಂಥಾಲಯಗಳ ಸಮಸ್ಯೆಗಳನ್ನು ನಿವಾರಿಸಲು ಕಾರ್ಯೋನ್ಮುಖವಾಗಬೇಕಿದೆ ಎಂದು ತಿಳಿಸಿದ್ದಾರೆ.
ಸಮಸ್ಯೆಗಳಿಗೆ ಕಿವಿಗೊಡದ ಅಧಿಕಾರಿಗಳು
ಈ ಸಮಸ್ಯೆಗಳ ಬಗ್ಗೆ ಗ್ರಾಮಾಂತರ ಮಟ್ಟದ ಓದುಗರು ಮಾನ್ಯ ಜಿಲ್ಲಾ ಗ್ರಂಥಾಲಯ ಅಧಿಕಾರಿಗಳಿಗೆ ಎಷ್ಟೇ ಮನವರಿಕೆ ಮಾಡಿದರೂ ಇದರ ಬಗ್ಗೆ ಕ್ರಮ ಕೈಗೊಳ್ಳದೇ ಇರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.