ನೀರು ಹರಿಸದಿದ್ದರೆ ಚುನಾವಣೆ ಬಹಿಷ್ಕಾರ
ಹಳೇಬೀಡು: ಯಗಚಿ ಏತ ನೀರಾವರಿ ಕಾಮಗಾರಿಗೆ ಸಂಬಂಧಪಟ್ಟಂತೆ ಜಿಲ್ಲಾ ಡಳಿತ ತಿಂಗಳ ಹಿಂದೆ ಒಪ್ಪಿಕೊಂಡಿರುವಂತೆ ಮಾ. 31ರೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ಯಗಚಿ ನೀರು ಹರಿಸದಿದ್ದಲ್ಲಿ ಮುಂದಿನ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುವುದು.
ಅಲ್ಲದೆ, ಈ ಭಾಗದ ಯಾವ ರಾಜಕೀಯ ಪಕ್ಷದ ಮುಖಂಡರ ಪ್ರಚಾರ ಮತ್ತು ಸಭೆ ಸಮಾರಂಭಗಳಿಗೆ ಅವಕಾಶ ಕೊಡುವುದಿಲ್ಲ ಎಂದು ರೈತ ಸಂಘದ ಸದಸ್ಯರು ಎಚ್ಚರಿಸಿದ್ದಾರೆ.
ಹಾಲುತೊರೆಯಲ್ಲಿ ನಡೆಯುತ್ತಿರುವ ಜಾಕ್ವೆಲ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದ ರೈತ ಸಂಘದ ಸದಸ್ಯರು ಕೆಲ ಕಾಮಗಾರಿಗಳ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲ ಕಾಮಗಾರಿಗಳು ನಿಧಾನ ಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಮೆಂಟ್ನ ಕೊರತೆಯಿದೆ: ಇದೀಗ ಜಾಕ್ವೆಲ್ 760 ಮೀ ಪೈಪು ಜೋಡಣೆ ಕಾರ್ಯ ಪೂರ್ಣಗೊಂಡಿದ್ದು, 60 ಮೀ ಬಾಕಿ ಇದೆ. ಈ ಪೈಕಿ ಹಳೇಬೀಡು ಮತ್ತು ಜಾವಗಲ್ಗಳಿಗೆ ನೀರು ಪೂರೈಸುವ ಗೇಟ್ವಾಲ್ಗಳ ಅಳವಡಿಕೆಯೂ ಆಗಿದೆ. ಆದರೆ, ಜಾಕ್ವೆಲ್ನಲ್ಲಿ ಮೂರು ಮೋಟಾರ್ಗಳ ಅಳವಡಿಕೆ ಕಾಮಗಾರಿ ಮಾತ್ರ ಮಂದಗತಿಯಲ್ಲಿದೆ. ಕಾಮಗಾರಿಗೆ ಬೇಕಾದ ಜಲ್ಲಿ, ಮರಳು, ಸಿಮೆಂಟ್ನ ಕೊರತೆಯಿದೆ ಎಂದು ಸದಸ್ಯರು ದೂರಿದ್ದಾರೆ.
ಗುತ್ತಿಗೆದಾರರ ಸ್ಪಷ್ಟನೆ: ಈ ಬಗ್ಗೆ ಗುತ್ತಿಗೆದಾರರಾದ ಹರೀಶ್ ಅವರನ್ನು ವಿಚಾರಿಸಿದಾಗ, ಇಲ್ಲಿ ನಮ್ಮ ವಸ್ತುಗಳಿಗೆ ರಕ್ಷಣೆ ಇಲ್ಲ. ಮರಳು, ಜಲ್ಲಿ ಕಳ್ಳತನವಾಗುವ ಸಾಧ್ಯತೆಗಳಿವೆ. ಹಾಗಾಗಿ ಕಾಮಗಾರಿ ಸ್ಥಳದಲ್ಲಿ ಅಗತ್ಯಕ್ಕೆ ತಕ್ಕಷ್ಟು ಮಾತ್ರ ವಸ್ತುಗಳನ್ನು ಇಟ್ಟುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.