ಪರಮೇಶ್ ಹತ್ಯೆ: ಸಕಲೇಶಪುರ ವ್ಯಕ್ತಿಗಳ ಕೈವಾಡ ಇಲ್ಲ
ಸಕಲೇಶಪುರ: ನುಗ್ಗೇಹಳ್ಳಿಯ ಚಿನ್ನ, ಬೆಳ್ಳಿ ವ್ಯಾಪಾರಿ ಪರಮೇಶ್ ಹತ್ಯೆ ಹಿಂದೆ ಸಕಲೇಶಪುರದ ವ್ಯಕ್ತಿಗಳ ಕೈವಾಡ ಇಲ್ಲ ಎಂಬುದು ಸಾಬೀತಾಗಿದ್ದು. ಕೃತ್ಯ ನೆಡೆಸಿದ ದುಷ್ಕರ್ಮಿಗಳು ರಕ್ಷಣೆಗಾಗಿ ಪಟ್ಟಣದ ಕುಡಗರಹಳ್ಳಿಯ ಬಡಾವಣೆಯಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಶೂಟೌಟ್ ಪ್ರಕರಣದಲ್ಲಿ ಆರೋಪಿಯಾಗಿರುವ ಸುನೀಲ್ ಹೇಳಿರುವ ಪ್ರಕಾರ, ಸುನಿಲ್ನ ಅಜ್ಜಿ ಲಕ್ಷ್ಮಿ ಎಂಬುವರ ಮನೆ ಕುಡುಗರಹಳ್ಳಿಯಲ್ಲಿದೆ. ಚಿನ್ನದ ವ್ಯಾಪಾರಿಯ ಹತ್ಯೆ ನಡೆಸಿದ ನಂತರ ರಕ್ಷಣೆಗಾಗಿ ಬೆಳಿಗ್ಗೆ 10.30ಕ್ಕೆ ಸುನಿಲ್ನ ಸಹಚರ ಹೇಮಂತ ಠಾಕೂರ್ ಇಲ್ಲಿಗೆ ಆಗಮಿಸಿದ್ದಾನೆ. ಕೆಲಸದ ನಿಮಿತ್ತ ಈ ಕಡೆ ಬಂದಿರುವುದಾಗಿಯೂ, ನಂತರ, ರೈಲಿನಲ್ಲಿ ಮಂಗಳೂರಿಗೆ ತೆರಳುವುದಾಗಿ ಸುನಿಲ್ ಅಜ್ಜಿಯ ಬಳಿ ಠಾಕೂರ್ ಮಾತಾಡಿದ್ದಾನೆ. ಇದೇ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ, ಈ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕುತೂಹಲ ಕೆರಳಿಸಿದ ಮನೆ: ಆ ಆರೋಪಿಗಳು ತಂಗಿದ್ದ ಮನೆ ಈಗ ಕುತೂಹಲಿಗಳ ತಾಣವಾಗಿದೆ. ಬುಧವಾರ ಸಾವಿರಾರು ಜನತೆ ಈ ಮನೆ ವೀಕ್ಷಿಸುವ ಮೂಲಕ ಆರೋಪಿ ಯಾರು ಎಂಬ ಪ್ರಶ್ನೆ ಮಾಡುತ್ತಿರುವುದರಿಂದಾಗಿ ಸಹಜವಾಗಿಯೇ ಮನೆಯಲ್ಲಿ ವಾಸವಾಗಿರುವ ಕುಟುಂಬ ಮುಜುಗರಕ್ಕೆ ಒಳಗಾಗಿದೆ.
ಸುನೀಲ್ ಕಳೆದ 6 ವರ್ಷಗಳಿಂದ ಇಲ್ಲಿಗೆ ಬಂದಿರಲಿಲ್ಲ. ಪೊಲೀಸರು ಬಂದು ಆರೋಪಿಗಳನ್ನು ಬಂಧಿಸುವವರಗೆ ನಮಗೆ ಈ ವಿಚಾರ ತಿಳಿದಿರಲಿಲ್ಲ ಎಂದು ಕುಟುಂಬದ ಸದಸ್ಯರು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಯಾರು ಈ ಸುನಿಲ್?: 25 ವರ್ಷಗಳ ಹಿಂದೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಪಟ್ಟಣದ ಬೀದಿ ಬದಿಯಲ್ಲಿ ಪಾವ್ ಬಾಜಿ ಮಾರಾಟದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಕುಡುಗರಹಳ್ಳಿ ನಿವಾಸಿಯಾದ ಲಕ್ಷ್ಮಿ ಎಂಬವರ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿಗಳ ಮಗ ಸುನಿಲ್.
ಸುನೀಲನ ತಂದೆ ವ್ಯಾಪಾರ ಕಡಿಮೆಯಾದ ಕಾರಣ ತನ್ನ ಸಂಸಾರವನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿ ಚನ್ನರಾಯಪಟ್ಟಣದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಚನ್ನರಾಯಪಟ್ಟಣದ ತನ್ನ ತಂದೆಯ ಅಂಗಡಿಗೆ ಅಪರೂಪಕ್ಕೊಮ್ಮೆ ಬರುತ್ತಿದ್ದ ಸುನಿಲ್ ಇತ್ತೀಚೆಗೆ ತನ್ನ ತಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರಣದಿಂದ ಪದೇ ಪದೇ ನ್ಯಾಯಾಲಯಕ್ಕೆ ಬರಬೇಕಾಗಿತ್ತು.
ಈ ಸಂದರ್ಭದಲ್ಲಿ ಆಟೋ ಚಾಲಕ ನಾಗೇಶ್ ಎಂಬವನ ಪರಿಚಯವಾಗಿ ಚಿನ್ನ, ಬೆಳ್ಳಿ ವ್ಯಾಪಾರಿಯ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.