ಬರ ನಿರ್ವಹಣೆ ಜೊತೆ ನೀರು ನೀಡಿ
ಹಾಸನ: ಜಿಲ್ಲೆಯಲ್ಲಿ ಬರ ಪರಿಸ್ಥಿತಿಯ ವ್ಯವಸ್ಥಿತಿ ನಿರ್ವಹಣೆ ಹಾಗೂ ಎಲ್ಲಾ ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರಿನ ಪೂರೈಕೆ ಬಗ್ಗೆ ಗಮನ ಹರಿಸುವಂತೆ ಕೆಪಿಟಿಸಿಎಲಲ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ. ಕುಮಾರ್ ನಾಯಕ್ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯ್ತಿಯ ಹೊಯ್ಸಳ ಸಭಾಂಗಣದಲ್ಲಿಂದು ಬರಪರಿಸ್ಥಿತಿ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಅವರು, ಬೇಸಿಗೆಯ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬರ ಪೀಡಿತ ತಾಲ್ಲೂಕುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರು, ದನ- ಕರುಗಳಿಗೆ ಮೇವಿಗೆ ಯಾವುದೇ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕಿದೆ ಎಂದರು.
ಪರ್ಯಾಯ ವ್ಯವಸ್ಥೆಗೆ ಸೂಚನೆ: ಕೆಲವು ತಾಲೂಕುಗಳ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿದ್ದು, ಹೊಸದಾಗಿ ಕೊಳವೆಬಾವಿ ಕೊರೆದರೆ ನೀರು ಬಾರದಿರುವ ಪರಿಸ್ಥಿತಿ ಇದೆ.
ಅಂಥ ಕಡೆಗಳಲ್ಲಿ ಪರ್ಯಾಯ ವ್ಯವಸ್ಥೆ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬರ ಪರಿಹಾರಕ್ಕೆ ತಾಕೀತು: ಜಿಲ್ಲೆಯಲ್ಲಿನ ಮಳೆ, ಬೆಳೆ, ಕುಡಿಯುವ ನೀರಿನ ಪರಿಸ್ಥಿತಿ ಈವರೆಗೆ ಅನುಸರಿಸಿರುವ ಕ್ರಮದ ಬಗ್ಗೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೃಷಿ, ಪಶು ಸಂಗೋಪನೆ ಅಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗ, ಚೆಸ್ಕಾಂ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳಿಂದ ವಿವರ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿವರ ಪಡೆದರು.
ಅಲ್ಲದೇ, ಚುನಾವಣೆ ಕರ್ತವ್ಯದ ನಡುವೆಯೂ ಆದ್ಯತೆ ಮೇರೆಗೆ ಬರ ಪರಿಹಾರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿರುತ್ತದೆ ಎಂದು ತಾಕೀತು ಮಾಡಿದರು.
ಅಧಿಕಾರಿಗಳಿಗೆ ನಿರ್ದೇಶನ: ಕುಡಿಯುವ ನೀರಿನ ಯೋಜನೆಗಳನ್ನು ತ್ವರಿತವಾಗಿ ಪೂರೈಸುವಂತೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ಅವರು ಈ ಯೋಜನೆಗಳಿಗೆ ಯಾವುದೇ ವಿಳಂಭವಿಲ್ಲದಂತೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು. ದನಕರುಗಳಿಗೆ ಮೇವಿನ ಕೊರತೆ ಬಾರದಂತೆ ಎಚ್ಚರಿಕೆ ವಹಿಸಲು ಹಾಗೂ ಅಗತ್ಯವಿದ್ದ ಕಡೆ ಕೊಳವೆಬಾವಿ ತೆರೆಯುವಂತೆ ಕುಮಾರ್ ನಾಯಕ್ ತಿಳಿಸಿದರು.
ತಾಲೂಕುವಾರು ಅನುದಾನ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಅವರು ಕುಡಿಯುವ ನೀರಿಗಾಗಿ ಹಾಸನ ತಾಲ್ಲೂಕಿಗೆ ರು. 20 ಲಕ್ಷ, ಅರಸೀಕೆರೆ ತಾಲ್ಲೂಕು ಗ್ರಾಮಾಂತರಕ್ಕೆ ರು. 40 ಲಕ್ಷ, ಪಟ್ಟಣ ಪ್ರದೇಶಗಳಿಗೆ ರು. 10 ಲಕ್ಷ, ಹೊಳೆನರಸೀಪುರ ತಾಲ್ಲೂಕಿಗೆ ರು. 20 ಲಕ್ಷ, ಚನ್ನರಾಯಪಟ್ಟಣ ತಾಲ್ಲೂಕಿಗೆ ರು. 30 ಲಕ್ಷ, ಅರಕಲಗೂಡು ತಾಲ್ಲೂಕಿಗೆ ರು. 10 ಲಕ್ಷ, ಬೇಲೂರು ತಾಲ್ಲೂಕಿಗೆ ರು. 20 ಲಕ್ಷ ಸೇರಿದಂತೆ ಒಟ್ಟು ರು. 1.50 ಕೋಟಿ ಕಾಯ್ದಿರಿಸಲಾಗಿದೆ ಎಂದು ಡಾ.ಎಚ್.ಎನ್. ಗೋಪಾಲಕೃಷ್ಣ ಮಾಹಿತಿ ನೀಡಿದರು.
ಬರ ಪರಿಹಾರ ಕಾಮಗಾರಿಗಾಗಿ 2011-12ನೇ ಸಾಲಿನಲ್ಲಿ ಈವರೆಗೆ ಒಟ್ಟು 1801 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರು. 17.67 ಲಕ್ಷ ಬಿಡುಗಡೆ ಮಾಡಲಾಗಿದೆ.
ರು. 10.4 ಲಕ್ಷ ಬಿಡುಗಡೆಗೆ ಬಾಕಿ ಇದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ, ಈಗ ಪರೀಕ್ಷಾವಧಿಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯುತ್ ನೀಡಲು ಯಾವುದೇ ಕೊರತೆಯಿಲ್ಲ ಎಂದರು.
ರು. 2.54 ಕೋಟಿ ಹಂಚಿಕೆ
ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಮಾತನಾಡಿ, ಜಿಲ್ಲಾಧಿಕಾರಿಯವರ ಪಿ.ಡಿ. ಖಾತೆಯಲ್ಲಿ 5.77 ಕೋಟಿ ರು. ಲಭ್ಯವಿದ್ದು ಅನುದಾನದಲ್ಲಿ ಅನುಮೋದನೆ ನೀಡಿ, ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಬಿಡುಗಡೆ ಮಾಡಲು ರು. 2.48 ಕೋಟಿ ಕಾಯ್ದಿರಿಸಲಾಗಿದೆ.
ಅನುಷ್ಠಾನಾಧಿಕಾರಿಗಳಿಂದ ಹಿಂದಿರುಗಿಸಲಾಗಿರುವ ಅನುದಾನ ರು. 74.59 ಲಕ್ಷಗಳಿದ್ದು, 2013-14 ನೇ ಸಾಲಿನಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವಿಗಾಗಿ ತಹಸೀಲ್ದಾರ್ ಅವರಿಗೆ ರು. 2.54 ಕೋಟಿ ಹಂಚಿಕೆ ಮಾಡಲಾಗಿದೆ ಎಂದರು.