ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸಮಾಜ ತಿದ್ದಲು ಹೋರಾಟ ಮನೋಭಾವ ಬೇಕು'

Srinivasa Murthy VN
Updated On : 14 Mar 2014, 12:29 pm

ಅರಸೀಕೆರೆ: ಶಿಸ್ತು, ಸಮಯ ಪ್ರಜ್ಞೆ, ಪ್ರಾಮಾಣಿಕತೆ, ಸೇವಾ ಮನೋಭಾವದೊಂದಿಗೆ ಸಮಾಜದಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ಹೋರಾಟ ಮನೋಭಾವವನ್ನು ರೂಢಿಸಿಕೊಳ್ಳಬೇಕೆಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಕೇಂದ್ರದ ಸಭಾಂಗಣದಲ್ಲಿ  ಮೈಸೂರು ವಿಶ್ವವಿದ್ಯಾನಿಲಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅರಸೀಕೆರೆ ಬೆಂಗಳೂರಿನ ಗಾಂಧೀ ಸ್ಮಾರಕ ಟ್ರಸ್ಟ್ ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವ ಜನಾಂಗ ಸಮಾಜದಲ್ಲಿರುವ ಅಸಮಾನತೆ, ವರದಕ್ಷಿಣೆ ಪಿಡುಗು, ಮಹಿಳೆಯರ ಮೇಲೆ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತಿ ಹೋರಾಟ ಮಾಡುವ ಮನೋಭಾವವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಗುರಿ ಸಾಧನೆ ಸಾಧ್ಯ: ಹಿರಿಯ ಗಾಂಧಿವಾದಿಗಳಾದ ರುದ್ದಯ್ಯ ಮಾತನಾಡಿ, ದೇಶದ ರೈತರ ಹಿತಚಿಂತನೆ ಬಗ್ಗೆ ಮಹಾತ್ಮ ಗಾಂಧೀಜಿ ಅವರಿಗೆ ಹೆಚ್ಚಿನ ಕಾಳಜಿ ಇತ್ತು, ಭಾರತದ ಬೆನ್ನೆಲಬು ರೈತ ಸಮುದಾಯ ಎಂಬ ಸತ್ಯಸಂದೇಶವನ್ನು ನೀಡಿದ್ದರು. ಶಿಸ್ತು ಮತ್ತು ಸಂಯಮದ ಜೀವನದಿಂದ ಮಾತ್ರ ವಿದ್ಯಾರ್ಥಿಗಳು ತಮ್ಮ ನಿಶ್ಚಿತ ಗುರಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.       
ಆದರ್ಶ ಅಳವಡಿಸಿಕೊಳ್ಳಿ: ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಹನಗವಾಡಿ ರುದ್ರಪ್ಪ ಮಾತನಾಡಿ, ಇಂದಿನ ಯುವ ಜನಾಂಗ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದಿ ಸರಿಪಡಿಸಲು ಮುಂದಾಗಬೇಕೇ ಹೊರತು ಹೊಂದಿಕೊಂಡು ಹೋಗುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬಾರದು.
   ಬಸವಣ್ಣ, ಅಂಬೇಡ್ಕರ್, ಬುದ್ಧ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸೈಯದ್ ಪಾಷ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಬಿ. ಶಿವರಾಜ್, ವಾಣಿಜ್ಯೋದ್ಯಮಿಗಳಾದ ಕೆ.ಪಿ. ವಿಶ್ವನಾಥ್, ಅರುಣ್ ಕುಮಾರ್ ಮಾತನಾಡಿದರು.
ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ  ಸಂಯೋಜನಾಧಿಕಾರಿ ಡಾ.ಕೆ. ಕಾಳಚನ್ನೇಗೌಡ ಪ್ರತಿಜ್ಞಾವಿಧಿ ಬೋಧಿಸಿದರು. ರೋಟರಿ ಅಧ್ಯಕ್ಷ ಪ್ರವೀಣ್, ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಉಪಪ್ರತಿನಿಧಿ  ರಾಜಲಕ್ಷ್ಮೀ, ಸ.ಪ.ಪೂ. ಕಾಲೇಜಿನ ಉಪನ್ಯಾಸಕಿ ವನಜಾಕ್ಷಿ ಇದ್ದರು.

ವೀರಶೈವರಿಗೆ ಟಿಕೆಟ್ ಇಲ್ಲ: ಅಸಮಾಧಾನ
ಹಾಸನ:
ಹಾಸನ ಲೋಕಸಭಾ ಚುನಾವಣೆಯಲ್ಲಿ ವೀರಶೈವ ಮುಖಂಡರಿಗೆ ಯಾವುದೇ ರಾಜಕೀಯ ಪಕ್ಷಗಳು ಲೋಕಸಭಾ ಸ್ಥಾನಕ್ಕೆ ಟಿಕೆಟ್ ನೀಡದೆ ಇರುವುದು ವೀರಶೈವ ಸಮಾಜಕ್ಕೆ ಅನ್ಯಾಯ ಮಾಡಿದಂತಾಗಿದೆ ಎಂದು ಅಖಿಲ ಭಾರತ ವೀರಶೈವ  ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ತಿಳಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ವೀರಶೈವರು ಸುಮಾರು 4.5 ಲಕ್ಷದಿಂದ 5 ಲಕ್ಷದಷ್ಟು ಮತದಾರರಿದ್ದು, ವೀರಶೈವರಿಗೆ ಟಿಕೆಟ್ ನೀಡದೆ ಕಡೆಗಣಿಸಿರುವುದು ತೀವ್ರ ಅಸಮಾಧಾನವಾಗಿದೆ. ಲೋಕಸಭಾ ಚುನಾವಣೆಗೆ ವೀರಶೈವ ಮುಖಂಡರು ಹಾಗೂ ಸ್ವಾಮೀಜಿ ಸಹ ಲೋಕಸಭಾ ಅಭ್ಯರ್ಥಿಯ ಟಿಕೆಟ್ ಪಡೆಯಲು ತೀವ್ರ ಪ್ರಯತ್ನಪಟ್ಟರೂ ಯಾರನ್ನೂ ಗಣನೆಗೆ ತೆಗೆದುಕೊಳ್ಳದಿರುವುದು ವಿಷಾನೀಯ ಎಂದು ಅವರು ಅಭಿಪ್ರಾಯಪಟ್ಟರು.
ಸದ್ಯದಲ್ಲೇ ಚಿಂತನೆ ಸಭೆ: ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಹಾಗೂ ಸಮಾಜದ ಸಂಘಟನೆಯು ಒಳಗೊಂಡಂತೆ ಜಿಲ್ಲೆಯ ಎಲ್ಲಾ ಮಠಾಧೀಶರು ಹಾಗೂ ಸಮಾಜದ ಮುಖಂಡರು ಹಾಗೂ ಸಮಾಜ ಬಾಂಧವರನ್ನು ಒಳಗೊಂಡಂತೆ ಸದ್ಯದಲ್ಲೇ ಒಂದು ಚಿಂತನಾ ಸಭೆಯನ್ನು ಕರೆಯಲು ನಿರ್ಧರಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement